ಭಟ್ಟರ ಕಿರುಚಿತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಈ ಷರತ್ತುಗಳು ಅನ್ವಯ
ಯೋಗರಾಜ್ ಭಟ್ ನಿರ್ದೇಶನ ಪಂಚತಂತ್ರ ಸಿನಿಮಾ ಹಾಡುಗಳಿಂದ ಸದ್ದು ಮಾಡ್ತಿದೆ. ಈ ಚಿತ್ರವನ್ನ ವಿಭಿನ್ನವಾಗಿ ಪ್ರಚಾರ ಮಾಡ್ತಿರುವ ಭಟ್ಟರು, ಅದಕ್ಕಾಗಿ ಕಿರುಚಿತ್ರ ಸ್ಪರ್ಧೆಯೊಂದನ್ನ ಆಯೋಜನೆ ಮಾಡಿದ್ದಾರೆ.
ಈ ಮೂಲಕ ಯುವಕರನ್ನ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ವಿಕಟಕವಿ ಯೋಗರಾಜ್ ಭಟ್ಟರು. ಕಿರುಚಿತ್ರ ಕಾಂಪಿಟೇಶನ್ ಗೆ ಈಗಾಗಲೇ ಚಾಲನೆ ನೀಡಿದ್ದು, ನಿಯಮಗಳನ್ನ ಈಗ ತಿಳಿಸಲಾಗಿದೆ.
ಯೋಗರಾಜ್ ಸಿನಿಮಾಸ್ ಪಂಚತಂತ್ರ ಕಿರುಚಿತ್ರ ಸ್ಪರ್ಧೆಯ ನಿಯಮಗಳು ಕಿರುಚಿತ್ರವನ್ನು ನಿಮ್ಮ ಇಚ್ಛೆಯ ವಿಷಯದ ಮೇಲೆ, ಕೆಳಗಿನ ಪಂಚತಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಚಿತ್ರೀಕರಿಸಿರಬೇಕು.

1. ಪಂಚತಂತ್ರ ಚಿತ್ರದ ಯಾವುದಾದರೊಂದು ಹಾಡನ್ನು (audio) ಕನಿಷ್ಠ 10, ಹಾಗೂ ಗರಿಷ್ಟ 30 ಸೆಕೆಂಡ್ ಬಳಸಿರಬೇಕು
2. ಕಿರುಚಿತ್ರದ ಒಂದು ದೃಶ್ಯ ಯಾವುದಾದರೂ ಸಿನಿಮಾ ಥಿಯೇಟರ್ (multiplex / single screen) ಆವರಣದಲ್ಲಿ ಚಿತ್ರೀಕರಿಸಿರಬೇಕು
3. ಚಿತ್ರದಲ್ಲಿ ಹಿರಿಯ ನಾಗರಿಕರ ಪಾತ್ರವಿರಬೇಕು
4. ಚಿತ್ರದಲ್ಲಿ ಯುವಕ / ಯುವತಿಯೊಬ್ಬರ ಪಾತ್ರವಿರಬೇಕು
5. ಕಿರುಚಿತ್ರದ ಯಾವುದಾದರೂ ಒಂದು ದೃಶ್ಯದಲ್ಲಿ ಕಾರ್ ಕಾಣಿಸಿಕೊಳ್ಳಬೇಕು
6. ಕಿರುಚಿತ್ರದ ಗರಿಷ್ಟ ಅವಧಿ: 5 ನಿಮಿಷಗಳು ಮಾತ್ರ
7. ಕಿರುಚಿತ್ರವು ಕನಿಷ್ಠ 1920 X 1080 (full HD) ಗುಣಮಟ್ಟದಲ್ಲಿರಬೇಕು
8. ಫೆಬ್ರವರಿ 10, 2019 ರಂದು ರಾತ್ರಿ 10 ಗಂಟೆಗೆ ಸ್ಪರ್ಧೆ ಅಂತ್ಯಗೊಳ್ಳುವುದು.

ವಿಜೇತರನ್ನು ಆಯ್ಕೆಮಾಡುವ ಕ್ರಮ
1. ಫಲಿತಾಂಶದ ದಿನಾಂಕವನ್ನು ಫೆಬ್ರವರಿ 10, 2019 ರಂದು ಘೋಷಿಸಲಾಗುವುದು.
2. ವಿಜೇತರನ್ನು ಯೋಗರಾಜ್ ಭಟ್ ರವರು ಆರಿಸುವರು.
3. ಸ್ಪರ್ಧೆಯಲ್ಲಿ ಗೆದ್ದ ಕಿರುಚಿತ್ರಗಳನ್ನು ಸದರಿ ಚಿತ್ರತಂಡದೊಂದಿಗೆ ಯೋಗರಾಜ್ ಭಟ್ ರವರು ವೀಕ್ಷಿಸಿ, ಚಿತ್ರದ ಕುರಿತು ಚರ್ಚಿಸುವರು.
4. ಗೆದ್ದ ಕಿರುಚಿತ್ರದ ಎಲ್ಲಾ ಸದಸ್ಯರಿಗೂ ಯೋಗರಾಜ್ ಸಿನಿಮಾಸ್ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.
ಪಂಚತಂತ್ರ ಚಿತ್ರದಲ್ಲಿ '1/4 ಕೆಜಿ' ಚಿತ್ರದ ಖ್ಯಾತಿಯ ವಿಹಾನ್ ಪಂಚತಂತ್ರದ ನಾಯಕನಾಗಿದ್ದು, ಇವರಿಗೆ ಅಕ್ಷರಾ ಗೌಡ ಮತ್ತು ಸೋನಾಲ್ ಇಬ್ಬರು ನಾಯಕಿಯರಿದ್ದಾರೆ. ರಂಗಪ್ಪ ಕಾಂಪ್ಲೆಕ್ಸ್ ಮತ್ತು ಬಾಂಡ್ ಗ್ಯಾರೇಜ್ ಎಂಬೆರಡು ಜಾಗಗಳನ್ನೇ ಮುಖ್ಯವಾಗಿಟ್ಟುಕೊಂಡು ಈ ಚಿತ್ರವನ್ನು ಭಟ್ಟರು ಕಟ್ಟಿಕೊಡಲಿದ್ದಾರಂತೆ. ರಂಗಾಯಣ ರಘು, ಕರಿಸುಬ್ಬು, ದೀಪಕ್ ಶೆಟ್ಟಿ, ಸತ್ಯಣ್ಣ ಸೇರಿದಂತೆ ಹಲವು ಕಲಾವಿದರ ಹೊಸಬರಿಗೆ ಸಾಥ್ ನೀಡಿದ್ದಾರೆ. ಇನ್ನುಳಿದಂತೆ ಯೋಗರಾಹ್ ಭಟ್ ಅವರ ನಿರ್ದೇಶನವಿರುವ ಈ ಚಿತ್ರಕ್ಕೆ ಹರಿಪ್ರಸಾದ್ ಮತ್ತು ಸನತ್ ಬಂಡವಾಳ ಹೂಡುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದು, ಹಾಡುಗಳಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











