ನಟ ದಿಗಂತ್‌ಗೆ ಆಗಿದ್ದೇನು: ಯೋಗರಾಜ್ ಭಟ್ಟರು ಕೊಟ್ಟ ಮಾಹಿತಿ
ನಟ ದಿಗಂತ್ ಆರೋಗ್ಯದ ಮಧ್ಯಾಹ್ನದಿಂದ ಇದ್ದ ಆತಂಕಕ್ಕೆ ಸಂಜೆ ವೇಳೆಗೆ ತೆರೆ ಬಿದ್ದಿದೆ. ದಿಗಂತ್‌ಗೆ ಆಗಿರುವುದು ಜೀವಕ್ಕೆ ಎರವಾಗುವ ಪೆಟ್ಟಲ್ಲ ಬದಲಿಗೆ ಸಣ್ಣ ಪೆಟ್ಟಷ್ಟೆ ಎಂಬುದು ಖಾತ್ರಿಯಾಗಿದೆ.
ಗೋವಾಕ್ಕೆ ಪತ್ನಿ ಐಂದ್ರಿತಾ ರೇ ಜೊತೆ ತೆರಳಿದ್ದ ದಿಗಂತ್ ಅಲ್ಲಿ ಟ್ರಾಂಪಲಿನ್‌ನಲ್ಲಿ ಸಮರ್‌ಸಾಲ್ಟ್ ಮಾಡುವಾಗ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರ ಕುತ್ತಿಗೆಗೆ ತೀವ್ರ ಪೆಟ್ಟಾಗಿತ್ತು. ನಿನ್ನೆಯೇ ಅವರಿಗೆ ಗಾಯವಾಗಿದ್ದು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣ ಹೆಲಿಕಾಪ್ಟರ್ ಮೂಲಕ ಅವರನ್ನು ಬೆಂಗಳೂರಿನ ಎಚ್‌ಎಎಲ್‌ಗೆ ಕರೆತಂದು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯ್ತು. ದಿಗಂತ್ ಅನ್ನು ಆಸ್ಪತ್ರೆಗೆ ಕರೆತಂದ ಬಳಿಕ ದಿಗಂತ್‌ರ ಗುರು ಸಮಾನರಾದ ನಿರ್ದೇಶಕ ಯೋಗರಾಜ್ ಭಟ್‌ರು ಆಸ್ಪತ್ರೆಗೆ ಭೇಟಿ ನೀಡಿ ದಿಗಂತ್ ಜೊತೆ ಮಾನತಾಡಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದೊಂದು ಕ್ರೀಡಾ ಗಾಯ ಅಷ್ಟೆ: ಯೋಗರಾಜ್ ಭಟ್
''ನಾನು, ದಿಗಂತ್ ಅವರ ತಂದೆ, ಐಂದ್ರಿತಾ ರೇ ಅವರ ತಂದೆ ದಿಗಂತ್ ಅನ್ನು ಭೇಟಿಯಾದೆವು, ಅವನನ್ನು ಆಪರೇಷನ್ ಥಿಯೇಟರ್‌ಗೆ ಕಳಿಸಿ ಬಂದೆವು. ತುಂಬಾ ಚೆನ್ನಾಗಿದ್ದಾನೆ, ಆರಾಮವಾಗಿದ್ದಾನೆ. ನಮ್ಮ ಜೊತೆ ಚೆನ್ನಾಗಿ ಮಾತನಾಡಿದ. ಇದೊಂದು ಸಣ್ಣ ಕ್ರೀಡಾ ಗಾಯ ಅಷ್ಟೆ. ಸಮ್ಮರ್ ಸಾಲ್ಟ್ ಮಾಡುವಾಗ ಆಯತಪ್ಪಿ ತಲೆ ಕೆಳಗಾಗಿ ಬಿದ್ದಿದ್ದಾನೆ. ಕತ್ತಿನ ಭಾಗಕ್ಕೆ ಏಟಾಗಿದೆ. ದಿಗಂತ್‌ನ ವರದಿಯನ್ನು ವೈದ್ಯರು ಎಲ್ಲಾ ರೀತಿಯಲ್ಲಿ ಪರೀಕ್ಷೆ ಮಾಡಿ, ಗೋವಾದಿಂದ ಇಲ್ಲಿಗೆ ಬಂದ್ರೆ ಇಲ್ಲಿ ಸುಲಭಕ್ಕೆ ಟ್ರೀಟ್‌ಮೆಂಟ್ ಆಗುತ್ತದೆದೆ, ಅಲ್ಲಿಗಿಂತಲೂ ಇಲ್ಲಿ ಚಿಕಿತ್ಸೆ ಪರಿಣಾಮಕಾರಿ ಎಂದು ಹೇಳಿ, ಇಲ್ಲಿಗೆ ಕರೆಸಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಆತ ಮನೆಗೆ ಸಹ ಬರಬಹುದು'' ಎಂದರು ಯೋಗರಾಜ್ ಭಟ್.

ಅವನು ದೇಹವನ್ನು ಸದೃಢವಾಗಿಟ್ಟುಕೊಂಡಿದ್ದಾನೆ: ಯೋಗರಾಜ್ ಭಟ್
''ಅವನಿಗೆ ಹೆಚ್ಚು ದಿನದ ಬೆಡ್ ರೆಸ್ಟ್‌ನ ಅವಶ್ಯಕತೆ ಸಹ ಇಲ್ಲ. ಅವನು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಯಾಗಿದ್ದಾನೆ. ಸೈಕ್ಲಿಂಗ್, ಯೋಗ ಎಲ್ಲ ಮಾಡಿ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದಾನೆ ಹಾಗೆ ನೋಡಿದರೆ ಅವನ ಸದೃಢತೆ ಹೋಲಿಸಿದರೆ ಈಗ ಅವನಿಗೆ ಆಗಿರುವ ಗಾಯ ಬಹಳ ಚಿಕ್ಕದ್ದು. ಅವನು ಬಹಳ ಆರೋಗ್ಯವಂತ. ಬೇರೆಯವರಿಗೆ ಆಗಿದ್ದಿದ್ದರೆ ಇದು ಬಹಳ ದೊಡ್ಡ ಗಾಯವಾಗಿ ಪರಿಣಮಿಸುವ ಅಪಾಯ ಇತ್ತು. ಆದರೆ ದಿಗಂತ್ ಬಹಳ ಆರೋಗ್ಯವಂತ ವ್ಯಕ್ತಿ, ಆರೋಗ್ಯವನ್ನು ಸದೃಢವಾಗಿ ಇರಿಸಿಕೊಂಡಿದ್ದಾನೆ'' ಎಂದು ಹೊಗಳಿದರು ಯೋಗರಾಜ್ ಭಟ್.

ಜನರ ಪ್ರೀತಿಯಿಂದ ಸಣ್ಣದರಲ್ಲೆ ಮುಗಿದಿದೆ: ಯೋಗರಾಜ್ ಭಟ್
''ನಟ ದಿಗಂತನ ಸ್ನೇಹದ ವಲಯ ಬಹಳ ದೊಡ್ಡದು, ಜನರ ಪ್ರೀತಿ ಸಹ ತುಂಬಾನೆ ಅವನ ಮೇಲಿದೆ, ಹಾಗಾಗಿ ಅವನಿಗೆ ಏನೂ ದೊಡ್ಡ ಮಸ್ಯೆ ಆಗಿದೆ, ದೊಡ್ಡ ಅಪಾಯ ಆಗಬಹುದಾಗಿದ್ದ ಸಂಗತಿ ಸಹ ಜನರ ಪ್ರೀತಿಯಿಂದ ಸಣ್ಣದರಲ್ಲೇ ಮುಗಿದಿದೆ. ಆಘಾತಕಾರಿ ವಿಷಯಗಳು, ಆತಂಕ ಪಡುವಂಥಹಾ ವಿಷಯಗಳು ಯಾವುದೂ ಇಲ್ಲ. ದಿಗಂತ್ ಚೆನ್ನಾಗಿದ್ದಾರೆ, ಅವರಿಗೆ ಏನೆಂದರೆ ಏನೂ ಆಗಿಲ್ಲ. ಅವರ ನಟನೆಗೆ, ಡ್ಯಾನ್ಸ್‌ಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕೆಲವೇ ದಿನಗಳಲ್ಲಿ ಅವರು ಮನೆಗೆ ಮರಳಲಿದ್ದಾರೆ. ಅವರ ಬೆನ್ನು ಮೂಳೆಗೂ ಏನೂ ಸಮಸ್ಯೆ ಆಗಿಲ್ಲ'' ಎಂದಿದ್ದಾರೆ ಯೋಗರಾಜ್ ಭಟ್.

ಸಣ್ಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರಷ್ಟೆ: ದಿಗಂತ್ ತಂದೆ
ದಿಗಂತ್ ಅವರ ತಂದೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ದಿಗಂತ್‌ಗೆ ಏನೂ ಆಗಿಲ್ಲ. ಇದೊಂದು ಕ್ರೀಡಾ ಗಾಯ ಅಷ್ಟೆ. ತನ್ನ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಹಲವು ಮಾದರಿಯ ವ್ಯಾಯಾಮ ಮಾಡುತ್ತಾನೆ. ಆಟ ಆಡುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ಈ ರೀತಿಯ ಘಟನೆ ಆಗಿದೆ. ಇದು ಬಹಳ ಆಕಸ್ಮಿಕ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಆತಂಕವೂ ಏನೂ ಇಲ್ಲ. ಈಗ ಸಣ್ಣ ಆಪರೇಷನ್ ಒಂದನ್ನು ಮಾಡುತ್ತಿದ್ದಾರೆ. ಅದು ಮುಗಿದ ಬಳಿಕ ಕೆಲವೇ ಗಂಟೆಗಳಲ್ಲಿ ಆತ ಸರಿ ಹೋಗುತ್ತಾನೆ'' ಎಂದಿದ್ದಾರೆ.


Click it and Unblock the Notifications











