»   » ಯೋಗೇಶ್ವರ್‌ ತಲೆಯಲ್ಲಿ‘ಕೆರೆಗಳ ಹೂಳು’: ಕನ್ನಡಕ್ಕೆ ಐಶ್ವರ್ಯಾ ರೈ?

ಯೋಗೇಶ್ವರ್‌ ತಲೆಯಲ್ಲಿ‘ಕೆರೆಗಳ ಹೂಳು’: ಕನ್ನಡಕ್ಕೆ ಐಶ್ವರ್ಯಾ ರೈ?

Posted By: Super
Subscribe to Filmibeat Kannada

ಕಾರ್ಗಿಲ್‌ ಸ್ಫೂರ್ತಿಯಲ್ಲಿ 'ಸೈನಿಕ" ನಿರ್ಮಿಸಿರುವ, ಕೃಷಿಕನ ದುರಂತವನ್ನು 'ಉತ್ತರ ಧ್ರುವದಿಂ.." ನಲ್ಲಿ ಚಿತ್ರಿಸಿದ್ದ ಸಿ.ಪಿ.ಯೋಗೇಶ್ವರ್‌ ಇದೀಗ- ಕೆರೆಗಳ ಹೂಳೆತ್ತುವ ವಿವಾದದ ವಿಷಯವನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಅವರು ಶ್ರೀ ಮಂಜುನಾಥನ ಜಯಶ್ರೀದೇವಿ ಹಾಗೂ ಆಕೆಯ ಮಾನಸಪುತ್ರ ಜೆ.ಕೆ.ಭಾರವಿಗೆ ಉತ್ತಮ ಮಾರ್ಗದರ್ಶಿಯೂ ಆಗಬಲ್ಲರು.

ಕಾವೇರಿ ಜಲಾನಯನ ಪ್ರದೇಶದ ಕೆರೆಗಳ ಹೂಳೆತ್ತುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಯೋಗೇಶ್ವರ್‌ ಅವರಲ್ಲಿನ ಕಥೆಗಾರನನ್ನು ಎಚ್ಚರಿಸಿದೆ. ಅವರು ಶಾಸಕರೂ ಆಗಿರುವುದರಿಂದ ಸಮಸ್ಯೆಯ ಮಗ್ಗುಲಿನ ರಾಜಕೀಯಗಳನ್ನು, ಒಳಸುಳಿಗಳನ್ನು ಚೆನ್ನಾಗಿ ಬಲ್ಲರು.

ಯೋಗೇಶ್ವರ್‌ ಅವರ ಲೆಕ್ಕಾಚಾರ ನಿಜವಾದರೆ - ಸ್ಯಾಂಡಲ್‌ವುಡ್‌ಗೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಆಗಮನ ಖಚಿತ. ವಿಶ್ವಸುಂದರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರನ್ನು ಬೆಂಗಳೂರಿಗೆ ಕರೆಸಿದ್ದ ಯೋಗೇಶ್ವರ್‌ ಪಂಚತಾರಾ ಹೊಟೇಲೊಂದರಲ್ಲಿ ಸನ್ಮಾನ ಮಾಡಿದ್ದರು. ಆ ಪರಿಚಯದ ಲಾಭವನ್ನು ಈಗ ಬಳಸಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆ.

ಚಿತ್ರದ ಹೆಸರು 'ಕೆರೆಗೆಹಾರ". ಈ ಮುನ್ನ ಎಚ್‌.ಡಿ.ಕುಮಾರಸ್ವಾಮಿ ಅವರು ಜಾನಪದ ಕಥೆಯುಳ್ಳ ಕೆರೆಗೆಹಾರವನ್ನು ಮಹೇಂದರ್‌ ನಿರ್ದೇಶನದಲ್ಲಿ ತೆರೆಗೆ ತರುವ ಪ್ರಯತ್ನ ನಡೆಸಿದ್ದರು. ಇದೀಗ ಕೆರೆಗೆಹಾರದ ಜಾನಪದ ಕಥೆಯ ಎಳೆಯನ್ನು ತಮ್ಮ ಸಮಕಾಲೀನ ಕಥಾವಸ್ತುವಿನ ಚಿತ್ರಕ್ಕೆ ಬಳಸಿಕೊಳ್ಳಲು ಯೋಗೇಶ್ವರ್‌ ನಿರ್ಧರಿಸಿದ್ದಾರೆ. ಜಾನಪದದ ಮೇಲೆ ಯಾರ ಕೃತಿಸ್ವಾಮ್ಯವೂ ಇಲ್ಲ ಅನ್ನುವುದು ಅವರ ತರ್ಕ.

ಕೆರೆಗಳ ಹೂಳೆತ್ತಲು ಮುಂದಾಗುವ ಹಳ್ಳಿಗಳಲ್ಲಿನ ಯುವಜನರು, ಸಹಕಾರ ಸಂಸ್ಥೆಗಳನ್ನು ಕಟ್ಟಿಕೊಳ್ಳುವುದು, ಕೆರೆಗಳ ಹೂಳೆತ್ತುವ ಕಾರ್ಯ ಜೇಬು ತುಂಬಿಸುವ ಕಾರ್ಯವಾಗುವುದು ಕಥೆಯ ಕೇಂದ್ರ. ಒಂದಾನೊಂದು ಕಾಲದಲ್ಲಿ ಧಾರ್ಮಿಕ ಕಾರ್ಯವಾಗಿದ್ದ ಕೆರೆಗಳ ನಿರ್ಮಾಣ, ಈ ಹೊತ್ತು ವ್ಯವಹಾರಿಕವಾಗಿ ಬದಲಾಗಿರುವ ಬಗೆಯನ್ನು ಚಿತ್ರಿಸುವುದು ನಿರ್ಮಾಪಕ ಉದ್ದೇಶ.

ಕೆರೆಗೆಹಾರ ನಿರ್ದೇಶನಕ್ಕೆ ಟಿ.ಎಸ್‌. ನಾಗಾಭರಣ ಅವರೇ ಸೂಕ್ತ ಎಂದು ಯೋಗೇಶ್ವರ್‌ ಅಂದುಕೊಂಡಿದ್ದಾರೆ, ಸಂಭಾಷಣೆ ಬರೆಯುವಂತೆ ಕೋಟಗಾನಹಳ್ಳಿ ರಾಮಯ್ಯನವರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ನಾಗಾಭರಣ ಹಾಗೂ ಕೋಟಗಾನಹಳ್ಳಿ ಜೋಡಿಯ ಟೆಲಿ ಸೀರಿಯಲ್‌ ಸಂಕ್ರಾಂತಿ ಗಳಿಸಿದ ಭಾರೀ ಯಶಸ್ಸು ಯೋಗೇಶ್ವರ್‌ ಅವರ ಗಮನದಲ್ಲಿದೆ.

ಯೋಗೇಶ್ವರ್‌ ಮನಸ್ಸಿನ ತುಂಬಾ ಕೆರೆಗೆಹಾರ ಸುಳಿ ಸುಳಿಯುತ್ತಿದೆ. ಅಂದಹಾಗೆ, ದೇವನೂರು ಕಥೆಗಳನ್ನು ಸಿನಿಮಾ ಮಾಡುವ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ ಎಲ್ಲಿಗೆ ಬಂತು ಅನ್ನುವ ಬಗ್ಗೆ ಯಾವ ಸುದ್ದಿಯೂ ಇಲ್ಲ .

English summary
Yogeshwar to make film on Tank Cleaning issue at Karnataka

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada