ಕನ್ನಡಿಗರ ಪರವಾಗಿ ಮಾತನಾಡಿದ ನಟನಿಗೆ ತಮಿಳು ಚಿತ್ರರಂಗ ಕೊಟ್ಟ 'ಮರ್ಯಾದೆ' ಇದು.!
Recommended Video

ಕಾವೇರಿ ನದಿ ನೀರಿನ ವಿವಾದ ಇಂದು ನಿನ್ನೆಯದ್ದಲ್ಲ. ದಶಕಗಳಿಂದಲೂ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಕಾವೇರಿಗಾಗಿ ಕಿತ್ತಾಟ ನಡೆಯುತ್ತಲೇ ಇದೆ. ಬೇಸಿಗೆ ಬಂದರೆ ಸಾಕು, ನೀರಿಗಾಗಿ ಎರಡು ರಾಜ್ಯಗಳ ನಡುವೆ ತಿಕ್ಕಾಟ ಆರಂಭ ಆಗುತ್ತೆ. ಸದ್ಯ ಜಲಾಶಯಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಆದರೂ ಕಾವೇರಿ ಕಂಟಕ ನಿವಾರಣೆ ಆಗಿಲ್ಲ.
ತಮಿಳುನಾಡಿನ ಮಾಧ್ಯಮಗಳ ಮುಂದೆ ನಿಂತು ಕನ್ನಡಿಗರ ಪರವಾಗಿ, ಕಾವೇರಿ ಬಗ್ಗೆ ಹಾಗೂ ಡಾ.ರಾಜ್ ಕುಮಾರ್ ಕುರಿತು ಮಾತನಾಡಿದ 'ಕನ್ನಡದ ಕಂದ' ಯೋಗಿಯನ್ನ ತಮಿಳು ಚಿತ್ರರಂಗ ಹೊರದಬ್ಬಿದೆ.
ಏಕಾಏಕಿ ನಾಯಕ ಯೋಗಿಯನ್ನ ತಮಿಳು ಚಿತ್ರದಿಂದ ತೆಗೆದು ಹಾಕಲಾಗಿದೆ. ಸರಿಯಾದ ಕಾರಣ ನೀಡದೆ ಯೋಗಿಗೆ 'ಪಾರ್ತಿಬನ್ ಕಾದಲ್' ಚಿತ್ರದಿಂದ ದಿಢೀರ್ ಅಂತ ಗೇಟ್ ಪಾಸ್ ನೀಡಲಾಗಿದೆ.
ಬೆಟ್ಟದಷ್ಟು ಕನಸುಗಳನ್ನ ಹೊತ್ತು ತಮಿಳು ಚಿತ್ರರಂಗದಲ್ಲಿ ಪದಾರ್ಪಣೆ ಮಾಡಿದ ಯೋಗಿ ಕನಸು ಇದೀಗ ನುಚ್ಚುನೂರಾಗಿದೆ. ಅಷ್ಟಕ್ಕೂ, ಏನೀ ವಿವಾದ.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ತಮಿಳು ಚಿತ್ರದ ನಾಯಕನಾಗಿದ್ದ ಕನ್ನಡಿಗ.!
ತಮಿಳಿನ 'ಪಾರ್ತಿಬನ್ ಕಾದಲ್' ಎಂಬ ಚಿತ್ರಕ್ಕೆ ಕನ್ನಡಿಗ ಯೋಗಿ ನಾಯಕನಾಗಿ ಆಯ್ಕೆ ಆಗಿದ್ದರು. ಇದೇ ಚಿತ್ರಕ್ಕಾಗಿ ಫೋಟೋ ಶೂಟ್ ಕೂಡ ಕಂಪ್ಲೀಟ್ ಆಗಿತ್ತು. ಇನ್ನೇನು ಶೂಟಿಂಗ್ ಶುರು ಆಗಬೇಕು ಎನ್ನುವಷ್ಟರಲ್ಲಿ, 'ಪಾರ್ತಿಬನ್ ಕಾದಲ್' ಸಿನಿಮಾದಿಂದ ಯೋಗಿಯನ್ನ ಹೊರಹಾಕಲಾಗಿದೆ.

ಪತ್ರಕರ್ತರು ತೂರಿದ ಪ್ರಶ್ನೆಗಳು
ಇತ್ತೀಚೆಗಷ್ಟೇ 'ಪಾರ್ತಿಬನ್ ಕಾದಲ್' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ, ಕಾವೇರಿ ವಿವಾದದ ಬಗ್ಗೆ ತಮಿಳುನಾಡಿನ ಪತ್ರಕರ್ತರು ಯೋಗಿಗೆ ಪ್ರಶ್ನೆ ಕೇಳಿದ್ದಾರೆ.

ಯೋಗಿ ಕೊಟ್ಟ ಉತ್ತರ ಏನು.?
''ಮಂಡ್ಯ ಅಂತ ಜಿಲ್ಲೆ ಇದೆ. ಅಲ್ಲಿರುವವರಿಗೆ ಕೃಷಿಯೇ ಜೀವಾಳ. ಅಲ್ಲಿರುವವರಿಗೇ ನೀರು ಇಲ್ಲ. ನೀವು ಪದೇ ಪದೇ ನೀರು ಕೇಳಿದರೆ, ಹೇಗೆ ಕೊಡ್ತಾರೆ.?'' ಅಂತ ಪತ್ರಕರ್ತರ ಪ್ರಶ್ನೆಗೆ ನೇರವಾಗಿ ಉತ್ತರ ಕೊಟ್ಟಿದ್ದರು ನಟ ಯೋಗಿ.

ಕಾವೇರಿ ವಿಚಾರ ಬಂದಾಗ...
''ರಜನಿಕಾಂತ್, ಪ್ರಕಾಶ್ ರಾಜ್, ಕಿಶೋರ್ ಸೇರಿದಂತೆ ಹಲವರು ಕನ್ನಡಿಗರು ಅಂತ ಗೊತ್ತಿದ್ದರೂ, ನೀವು ಅವಕಾಶ ಕೊಟ್ಟಿದ್ದೀರಾ. ನಾನು ಕನ್ನಡಿಗ ಅಂತ ಗೊತ್ತಿದ್ದೂ, ನನಗೆ ಅವಕಾಶ ಕೊಟ್ಟಿದ್ದೀರಾ. ಅದಕ್ಕೆ ನಾನು ಚಿರಋಣಿ. ಆದ್ರೆ, ಈ ಕಾವೇರಿ ವಿಚಾರ ಬಂದಾಗ, ನಾವು ಬಿಟ್ಟುಕೊಡಕ್ಕಾಗಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಯೋಗಿ ಹೇಳಿಕೆ ನೀಡಿದ್ದರು.

ಅವಕಾಶಕ್ಕಾಗಿ ಮಾತನಾಡಲು ಆಗಲ್ಲ.!
''ನೀವು ಅವಕಾಶ ಕೊಟ್ಟಿದ್ದೀರಾ ಅಂತ ನಾನು ಇಲ್ಲಿಯ ಪರವಾಗಿ ಮಾತನಾಡಿದರೆ, ನಾನು ನನ್ನ ತಾಯ್ನಾಡಿಗೆ ದ್ರೋಹ ಮಾಡಿದ ಹಾಗೆ ಆಗುತ್ತದೆ. ಕನ್ನಡಿಗರಿಗೆ ದ್ರೋಹ ಮಾಡಿದ ಹಾಗೆ ಆಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮನಸಾಕ್ಷಿಗೆ ದ್ರೋಹ ಮಾಡಿದ ಹಾಗೆ ಆಗುತ್ತದೆ. ಆದ್ರೆ, ಸತ್ಯ ಹೇಳುವೆ... ನಮಗೆ ಅಲ್ಲಿ ನೀರಿಲ್ಲ'' ಎಂದು ಹೇಳಿದ್ದರು ನಟ ಯೋಗಿ.

ರಜನಿ ಇಷ್ಟನಾ, ರಾಜ್ ಇಷ್ಟನಾ.?
''ಡಾ.ರಾಜ್ ಕುಮಾರ್ ಅಂದ್ರೆ ನನಗೆ ಇಷ್ಟ'' ಅಂತ ಯೋಗಿ ಹೇಳುತ್ತಿದ್ದಂತೆಯೇ, ''ರಜನಿಕಾಂತ್ ಅಂದ್ರೆ ಇಷ್ಟ ಇಲ್ವಾ.?'' ಅಂತ ಪತ್ರಕರ್ತರು ಕೇಳಿದರು. ಆಗ ''ಡಾ.ರಾಜ್ ಕುಮಾರ್ ಅಂದ್ರೆ ಇಷ್ಟ. ರಜನಿಕಾಂತ್ ಅಂದರೂ ಇಷ್ಟ. ಸೂರ್ಯ ಅಂದರೂ ನನಗೆ ಇಷ್ಟ'' ಎಂದರು ಯೋಗಿ.
ಜೈ ಕರ್ನಾಟಕ ಮಾತೆ.!
''ಅಲ್ಲಿ ನಿಜವಾಗಲೂ ನೀರಿಲ್ಲ. ಅಲ್ಲಿನ ರೈತರು ನಿಜವಾಗಲೂ ಕಷ್ಟ ಪಡುತ್ತಿದ್ದಾರೆ. ಅದನ್ನ ನೀವೂ ಅರ್ಥ ಮಾಡಿಕೊಳ್ಳಿ... ದಯವಿಟ್ಟು ನನ್ನ ಕ್ಷಮಿಸಿ. ಜೈ ಕರ್ನಾಟಕ ಮಾತೆ'' ಎಂದು ಅಂದು ಧೈರ್ಯವಾಗಿ ಮಾತನಾಡಿದ್ದ ಯೋಗಿಗೆ ಇಂದು ಬಿಗ್ ಶಾಕ್ ಸಿಕ್ಕಿದೆ. ನಾಯಕನಾಗಿ ಅಭಿನಯಿಸಬೇಕಿದ್ದ ಚಿತ್ರದಿಂದ ಯೋಗಿಯನ್ನ ಕಿಕ್ ಔಟ್ ಮಾಡಲಾಗಿದೆ


Click it and Unblock the Notifications











