twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಸೈನಿಕನಾಗಿ ಶಾಸಕ ಯೋಗೀಶ್ವರ್‌

    By *ಶಶಿಕಲಾ ಚನ್ನಪಟ್ಟಣ
    |

    ಚನ್ನಪಟ್ಟಣ ಕ್ಷೇತ್ರದ ಶಾಸಕ ಕಮ್‌ ಸಿನಿಮಾ ನಿರ್ಮಾಪಕ ಕಮ್‌ ನಾಯಕ ಸಿ.ಪಿ. ಯೋಗೀಶ್ವರ್‌ ಸ್ವಲ್ಪ ಕಾಲದ ವಿರಾಮದ ನಂತರ ಸಿನಿಮಾಕ್ಕೆ ಮರಳಿದ್ದಾರೆ. ಚೊಚ್ಚಿಲ ಸಿನಿಮಾ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ತಂದುಕೊಟ್ಟಿದ್ದು ಹೆಸರು ಮಾತ್ರ. ಕಾಸಿಗೆ ಮೋಸವಾದ್ದರಿಂದ ತೆರೆ ಮರೆಗೆ ಸರಿದು, ರಾಜಕಾರಣ- ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲೇ ವ್ಯಸ್ತರಾಗಿದ್ದ ಯೋಗೀಶ್ವರ್‌ ಮತ್ತೆ ಸಿನಿಮಾಕ್ಕೆ ಮರಳಿದ್ದಾರೆ, ಹೊಸ ಹುಮ್ಮಸ್ಸು - ಕನಸುಗಳೊಂದಿಗೆ. ಶಾಸಕತ್ವ ಸರ್ಕಾರಿ ನೌಕರಿಯ ಪಟ್ಟಿಗೆ ಬರುವುದಿಲ್ಲವಾದ್ದರಿಂದ ಸಿನಿಮಾ ನಿರ್ಮಾಣ ಅವರಿಗೇನೂ ತೊಂದರೆಯಾಗದು.

    ಇತ್ತೀಚೆಗೆ ರಾಜಕಾರಣದಲ್ಲಿರುವ ಕಲಾವಿದರು ಪೂರ್ಣಕಾಲಿಕ ವೃತ್ತಿಯನ್ನಾಗಿ ರಾಜಕಾರಣವನ್ನೇ ಅಪ್ಪಿಕೊಂಡು, ಸಿನಿಮಾ ನಂಟನ್ನು ಪಕ್ಕಕ್ಕಿರಿಸಿರುವಾಗ ಯೋಗೀಶ್ವರ್‌ ರಾಜಕಾರಣದ ನಡುವೆಯೂ ಸಿನಿಮಾಗಾಗಿ ಬಿಡುವು ಮಾಡಿಕೊಂಡಿದ್ದಾರೆ. ಕುಮಾರ್‌ ಬಂಗಾರಪ್ಪ ಸಣ್ಣ ನೀರಾವರಿ ಮಂತ್ರಿಗಳಾದ ನಂತರ ಹೊಲಗಳಿಗೆ ನೀರು ಹಾಯಿಸುವುದರಲ್ಲಿಯೇ ವ್ಯಸ್ತರು. ಅನಂತನಾಗ್‌ ಸಿನಿಮಾಕ್ಕೆ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಆದರೆ, ರಾಜಕಾರಣದಲ್ಲವರು ಚಲಾವಣೆಯಾಗದ ಕಾಸು. ಮರಣ ಮೃದಂಗದ ನಂತರ ಹೆಗಡೆ ನಿಶ್ಯಬ್ದಕ್ಕೆ ಶರಣಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಚಂದ್ರು, ಜಯಮಾಲಾ, ಜಯಂತಿ ಮುಂತಾದವರು ಎಲ್ಲಿದೆ ನಮ್ಮನೆ ಎಂದು ತಿಳಿಯದ ಗೊಂದಲದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗೀಶ್ವರ್‌ರ ಹೊಸ ಸಿನಿಮಾ ಮುಖ್ಯವಾಗುತ್ತದೆ.

    ಯೋಗೀಶ್‌ ತೆರೆಗೆ ತರಲು ಹೊರಟಿರುವ ಚಿತ್ರದ ಹೆಸರು ಸೈನಿಕ. ಹೆಸರಿಗೆ ತಕ್ಕಂತೆ ದೇಶಪ್ರೇಮವನ್ನೇ ಉಸಿರಾಡುವ ಯೋಧನ ಬದುಕಿನ ಕಥೆಯದು. ಸೈನ್ಯಕ್ಕೆ ಮಕ್ಕಳನ್ನು ಕಳುಹಿಸುವುದು ರೈತರು, ಬಡವರು.. ಒಟ್ಟಿನಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರು ಮಾತ್ರ. ವ್ಯಾಪಾರಿ, ರಾಜಕಾರಣಿ ಮುಂತಾಗಿ ಕಾಸು ಕಾಣುವ ಮಂದಿಯಾರೂ ಮಕ್ಕಳನ್ನು ಸೈನ್ಯಕ್ಕೆ ಕಳಿಸುವುದಿಲ್ಲ ಅನ್ನುವುದು ಅವರ ಸಂಶೋಧನೆ.

    30 ದಿನಗಳ ಚಿತ್ರೀಕರಣಕ್ಕಾಗಿ ಮಾರ್ಚ್‌ನಲ್ಲಿ ಕಾರ್ಗಿಲ್‌ಗೆ ತೆರಳಲು ಯೋಗೀಶ್‌ ನೇತೃತ್ವದ 40 ರ ಜನ ತಂಡ ಈಗಾಗಲೇ ಸಿದ್ಧತೆ ನಡೆಸಿದೆ. ಶೂಟಿಂಗ್‌ಗೆ ರಕ್ಷಣಾ ಸಚಿವಾಲಯದಿಂದ ಅನುಮತಿಯೂ ಸಿಕ್ಕಿದೆ. 3000 ಸೈನಿಕರನ್ನು ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ಐಡಿಯಾ ಕೂಡ ಇದೆ. ಕಾರ್ಗಿಲ್‌ ಮಾತ್ರವಲ್ಲದೆ ದೆಲ್ಲಿ , ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಗಡಿ ಭಾಗಗಳಲ್ಲಿ ಸೈನಿಕನ ಚಟುವಟಿಕೆ ನಡೆಯಲಿದೆ. ಇಷ್ಟಿದ್ದೂ ಯುದ್ಧ , ಹಿಂಸೆ ಹಾಗೂ ರಕ್ತಪಾತಗಳಿಂದ ಸಿನಿಮಾ ಮುಕ್ತ ಅನ್ನುತ್ತಾರೆ ಪಕ್ಕಾ ಲೆಕ್ಕಾಚಾರದ ಯೋಗೀಶ್‌. ಇದಕ್ಕೆ ಅವರ ರಿಯಲ್‌ ಎಸ್ಟೇಟ್‌ (ಮೆಗಾಸಿಟಿ ಪ್ರಾಜೆಕ್ಟ್‌ ) ವ್ಯವಹಾರದ ಅನುಭವವೂ ಕಾರಣವಿರಬಹುದು.

    ಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ಬಿ.ಎ. ಮಧು ಹೊತ್ತಿದ್ದಾರೆ. 10 ವರ್ಷಗಳ ನನ್ನ ಸಿನಿಮಾ ಸರ್ವೀಸ್‌ನಲ್ಲಿ ಇಂಥ್ದದೊಂದು ಪ್ರಾಜೆಕ್ಟ್‌ನಲ್ಲಿ ಭಾಗವಹಿಸಿದ್ದೇ ಇಲ್ಲ , ಕಥೆಯ ತಯಾರಿಗಾಗೇ ಲಕ್ಷಾಂತರ ರುಪಾಯಿ ಖರ್ಚಾಗಿದೆ ಎಂದು ಮಧು ರೋಮಾಂಚನಗೊಂಡಿದ್ದಾರೆ. ಪ್ರಸ್ತುತ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿ ಯೋಧನ ಬದುಕನ್ನು ಕುರಿತು ಕಥೆ ಹೆಣೆಯಲಾಗಿದೆ. ಎಲ್ಲವೂ ಸತ್ಯ ಘಟನೆಗಳನ್ನು ಆಧರಿಸಿದ್ದು ಎಂದು ಕಥೆಗಾರರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಸೈನಿಕನನ್ನು ತೆರೆಗೆ ತರುವ ನಿರ್ದೇಶನದ ಹೊಣೆ ಹೊತ್ತಿರುವುದು ಮಹೇಶ್‌ ಸುಖಧರೆ. ಯೋಗೀಶ್‌ರಂತೆ ಇವರದ್ದೂ ಒಂದು ಸಿನಿಮಾದ ಸಾಹಸ ಹಾಗೂ ಮೊದಲ ಪ್ರಯತ್ನಕ್ಕೆ ಬೆನ್ನು ತಟ್ಟಿಸಿಕೊಂಡ ಹೆಗ್ಗಳಿಕೆ. ಆ ಸಂಭ್ರಮದ ನಂತರ ಸುಖಧರೆಗೆ ಸಿನಿಮಾ ಒಲಿದಿರುವುದು ಈಗಲೇ. ಈ ನಡುವೆ ಇನ್ನೇನು ಬಾಯಿಗೆ ಬಂತು ಅನ್ನುವಂತಿದ್ದ ವಿಷ್ಣು ಅಭಿನಯದ ದೀಪಾವಳಿಯ ತುತ್ತನ್ನು ದಿನೇಶ್‌ಬಾಬು ಕಿತ್ತು ಕೊಂಡಿದ್ದರು. ಸುಖಧರೆ ಅದನ್ನೆಲ್ಲಾ ಮರೆತಿದ್ದಾರೆ. ಬದುಕು ಅವರನ್ನು ಮಾಗಿಸಿದೆ. ಶಿವರಾಜ್‌ಕುಮಾರ್‌ ಅಭಿನಯದ ಚಿಲಿಪಿಲಿಯೂ ಅವರ ಕೈಯ್ಯಲ್ಲಿದೆ. ಅಕ್ಟೋಬರ್‌ ಹೊತ್ತಿಗದು ಸೆಟ್ಟೇರಬಹುದು.

    ಸೈನಿಕನಿಗೆ ಮೂವರು ಹೀರೋಯಿನ್‌ಗಳಂತೆ. ಒಂದು ಪಾತ್ರಕ್ಕೆ ಇಷಾ ಕೊಪ್ಪೀಕರ್‌ ಆಯ್ಕೆಯಾಗಿದ್ದಾರೆ. ಮತ್ತಿಬ್ಬರನ್ನು ಯೋಗೀಶ್‌ ಅರಸುತ್ತಿದ್ದಾರೆ. ಅವರಿಗೆ ಸೂಕ್ತ ನಾಯಕಿಯರು ಸಿಕ್ಕಲಿ, ಜೊತೆಗೆ ಸೈನಿಕನ ರೂಪವಾಗಿ ಯಶಸ್ಸು.

    English summary
    Sainika kannada film by yogeshwar is on process
    Tuesday, July 9, 2013, 17:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X