ಸಿನಿಮಾ ಟಿಕೆಟ್ ಗಾಗಿ ಯುವಕನ ಭೀಕರ ಕೊಲೆ

ಲಾಲ್ ಬಾಗ್ ಪ್ರದೇಶದಲ್ಲಿರುವ ಭಾರತ್ ಮಾತಾ ಚಿತ್ರಮಂದಿರದ ಬಳಿ ಯುವಕನೊಬ್ಬ ಭೀಕರವಾಗಿ ಕೊಲೆ ಮಾಡಲಾಗಿದೆ. ಪೊಲೀಸರ ಪ್ರಕಾರ ಈ ಕೊಲೆಯ ವಿವರಗಳು ಹೀಗಿವೆ. 'ಬಾಲಕ್ ಪಾಲಕ್' ಎಂಬ ಮರಾಠಿ ಚಿತ್ರಕ್ಕೆ ಮಹಾರಾಷ್ಟ್ರದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೋಮವಾರ ರಜೆ ಇದ್ದ ಕಾರಣ ಭಾರತ್ ಮಾತಾ ಚಿತ್ರಮಂದಿರ ಹೌಸ್ ಫುಲ್ ಆಗಿದೆ. ಅಜಯ್ ಖಾಮಕರ್ (19) ಎಂಬ ಯುವಕ ಟಿಕೆಟ್ ಗಾಗಿ ಕ್ಯೂನಲ್ಲಿ ನಿಂತಿದ್ದಾಗ ಅಶೋಕ್ ಚವಾಣ್ (55) ಎಂಬ ವ್ಯಕ್ತಿಯೊಂದಿಗೆ ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಬೆಳೆದು ಕಡೆಗೆ ಅದು ವಿಕೋಪಕ್ಕೆ ಹೊರಳಿದೆ. ಚವಾಣ್ ಎಂಬ ವ್ಯಕ್ತಿ ಅಲ್ಲೇ ಪಕ್ಕದಲ್ಲಿ ಎಳನೀರು ವ್ಯಾಪಾರಿ ಬಳಿ ಇದ್ದ ಮಚ್ಚನ್ನು ಕಿತ್ತುಕೊಂಡು ಅಜಯ್ ಗೆ ತಿವಿದಿದ್ದಾನೆ. ತೀವ್ರ ರಕ್ತಸ್ರಾವಕ್ಕೆ ಗುರಿಯಾದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವಪ್ಪಿದ್ದಾನೆ.
ಕೊಲೆ ಬಳಿಕ ಅಲ್ಲಿಂದ ಓಡಿಹೋಗುತ್ತಿದ್ದ ಚವಾಣ್ ನನ್ನು ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಬಂಧಿಸಿದ್ದಾರೆ. ಕೇಸು ದಾಖಲಿಸಿಕೊಂಡು ಬಳಿಕ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಗಿದೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಿನಿಮಾ ಟೆಕೆಟ್ ಗಾಗಿಯೇ ಇವರಿಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.
ಇಷ್ಟಕ್ಕೂ 'ಬಾಲಕ್ ಪಾಲಕ್' ಚಿತ್ರದ ಕಥೆಯೇನೆಂದರೆ...ಅಶ್ಲೀಲ ಸಾಹಿತ್ಯ/ವೆಬ್ ಸೈಟ್ ಗಳಿಂದ ಹದಿಹರೆಯದ ಯುವಕರು ದಾರಿತಪ್ಪುತ್ತಿದ್ದಾರೆ. ಆ ರೀತಿಯ ಯುವಕರನ್ನು ಸರಿದಾರಿಗೆ ತರುವುದು ಹೇಗೆ ಎಂಬುದೇ ಚಿತ್ರದ ಕಥಾವಸ್ತು.
ಬಾಲಕ್ ಪಾಲಕ್ ಎಂಬ ಚಿತ್ರಕ್ಕೆ ಮತ್ತೊಂದು ಅರ್ಥವನ್ನೂ ಕಲ್ಪಿಸಲಾಗಿದೆ. ಅದೇನೆಂದರೆ ಬಿಪಿ (ಇನ್ನೊಂದು ಅರ್ಥದಲ್ಲಿ ಬ್ಲೂ ಫಿಲಂ). ಅದೇನೇ ಇರಲಿ ಮಹಾರಾಷ್ಟ್ರದಲ್ಲಿ ಈ ಚಿತ್ರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ರವಿ ಜಾದವ್ ನಿರ್ದೇಶನದ ಈ ಚಿತ್ರದ ನಿರ್ಮಾಪಕ ರಿತೇಶ್ ದೇಶ್ ಮುಖ್.


Click it and Unblock the Notifications











