ಶಿವಣ್ಣ ಜೊತೆ ಮದುವೆ ; ಸುಧಾರಾಣಿ ಕೊಟ್ಟ ಏಟಿಗೆ ಪತರುಗಟ್ಟಿದ ಯೂಟ್ಯೂಬರ್
ಈ ಹಿಂದೆ ಇಲ್ಲ ಸಲ್ಲದ ಮಾತು, ಹಾಗಂತೆ-ಹೀಗಂತೆ ಎಂಬ ಗಾಸಿಪ್, ಕೇವಲ ಅರಳಿ ಕಟ್ಟೆ ಮತ್ತು ಬಾವಿ ಕಟ್ಟೆಗೆ ಮಾತ್ರ ಸೀಮಿತವಾಗಿತ್ತು. ಆದರೆ .. ಈಗ ಸಾಮಾಜಿಕ ಜಾಲತಾಣ ಅದೆಲ್ಲವನ್ನು ನುಂಗಿ ನೀರು ಕುಡಿದಿದೆ. ಕನ್ನಡ ಚಿತ್ರರಂಗದ ಜನಪ್ರಿಯ ಹಿರಿಯ ನಾಯಕಿ ಸುಧಾರಾಣಿಯವರ ಮನದ ನೋವು ಇದು.
ಹೌದು, ಅಸಲಿಗೆ ನಿಮಗೆ ನೆನಪಿದ್ದರೆ .. ಎರಡು ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದನ್ನು ತೇಲಿ ಬಿಡಲಾಗಿತ್ತು. ಶಿವಣ್ಣನನ್ನು ಮದುವೆಯಾಗಬೇಕೆಂದು ಸುಧಾರಾಣಿ ಆಸೆ ಪಟ್ಟಿದ್ದರು ಎಂಬ ಕಪೋಲಕಲ್ಪಿತ ಸುದ್ದಿ ಅದು.

ಕ್ಲಿಕ್‌ಬೈಟ್ ತಂತ್ರವನ್ನು ಬಳಸಿ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದಲೇ ಹಂಚಿಕೊಂಡಂತೆ ಇದ್ದ ಆ ಪೋಸ್ಟ್‌ನಲ್ಲಿ ''ಆನಂದ್'' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುಮಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು.
ಆದರೆ ಡಾ. ರಾಜ್‌ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಕೂಡ ಉಲ್ಲೇಖ ಮಾಡಲಾಗಿತ್ತು. ಆದರೆ, ವಾಸ್ತವದಲ್ಲಿ ಸುಧಾರಾಣಿ ಯಾವ ಸಂದರ್ಶನದಲ್ಲಿಯೂ ಈ ಮಾತನ್ನು ಹೇಳಿಯೇ ಇರಲಿಲ್ಲ.
'ವ್ಯೂವ್ಸ್'' ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಮಾಡಿದ ಈ ಅಸಹ್ಯಕರ ಅಪಪ್ರಚಾರವನ್ನು ಕಂಡು ಸದ್ಯ ಸುಧಾರಾಣಿ ಸಿಡಿದೆದ್ದಿದ್ದು, ಸ್ವಲ್ಪನಾದ್ರೂ ನೈತಿಕತೆ ಇರಲಿ. ಕೇವಲ ವ್ಯೂವ್ಸ್‌ಗಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸೋದು ನಿಜಕ್ಕೂ ಬೇಸರದ ಸಂಗತಿ. ಇನ್ನಾದ್ರೂ ತಿದ್ದುಕೊಳ್ಳಿ - ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕವಾಗಿರಿ ಮತ್ತು ಸರಿಯಾದ ದಾರಿಯಲ್ಲಿ ಯಶಸ್ಸು ಗಳಿಸಿ ಎಂದು ಬರೆದುಕೊಂಡಿದ್ದರು.
ವಿಡಿಯೋ ಮೂಲಕ ಈ ರೀತಿಯ ವಿಡಿಯೋ ಮಾಡಿದರೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ಕೂಡ ನೀಡಿದ್ದ ಸುಧಾರಾಣಿ ಆಯ್ಕೊಂಡು ತಿನ್ನೋರೆಲ್ಲ ಕಂಟೆಂಟ್ ಕ್ರೀಯೇಟರ್ಸ್ ಆದರೆ ಹೀಗೆ ಆಗೋದು ಎಂದು ಗುಡುಗಿದ್ದರು.
ಆಗಲೇ ಹೇಳಿದಂತೆ ಇದೆಲ್ಲವೂ ಆಗಿ ಎರಡು ಮೂರು ತಿಂಗಳಾಗುತ್ತಾ ಬಂದಿದೆ. ಈ ಹಿನ್ನೆಲೆ ಹಲವರು ಈ ವಿಚಾರವನ್ನು ಮರೆತಿದ್ದರು. ಆದರೆ, ಸುಧಾರಾಣಿ ಮಾತ್ರ ಮರೆತಿರಲಿಲ್ಲ. ದೂರು ದಾಖಲಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದ ಸುಧಾರಾಣಿ ತಾವು ಹೇಳಿದಂತೆಯೇ ಸೈಬರ್ ಪೊಲೀಸರ ಮೊರೆ ಹೋಗಿದ್ದರು. ಸದ್ಯದ ಸಮಾಚಾರ ಅಂದರೆ ಸೈಬರ್ ಪೊಲೀಸರ ಸಹಾಯದಿಂದ ಕೊನೆಗೂ ಸುಧಾರಾಣಿ ಆ ಕಿಡಿಗೇಡಿ ಯೂಟ್ಯೂಬರ್‌ನನ್ನ ಪತ್ತೆ ಹಚ್ಚಿದ್ದಾರೆ.
ಸಹಜವಾಗಿಯೇ ಯಾರೇ ಇರಲಿ. ಸಿಕ್ಕಿ ಬಿದ್ದ ತಕ್ಷಣ ಅಥವಾ ಸಿಕ್ಕಿ ಬಿದ್ದೇ ಬೀಳುತ್ತೇನೆ ಎನ್ನುವ ಮುನ್ಸೂಚನೆ ಸಿಕ್ಕ ಮೇಲೆ ನಡುಕ ಶುರುವಾಗುತ್ತೆ. ಸುಧಾರಾಣಿ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ್ದ ಆ ಯೂಟ್ಯೂಬರ್ ಗೆ ಕೂಡ ನಡುಕ ಶುರುವಾಗಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಫೇಕ್ ನ್ಯೂಸ್ ಪೆಡ್ಲರ್ ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿರುವ ವಿಡಿಯೋವನ್ನ ಸುಧಾರಾಣಿ ತಮ್ಮ Sudharani Govardhan ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಸುಧಾರಾಣಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಕ್ಯಾಮೆರಾ ಹಿಂದೆ ಕುಳಿತು ತನಗೆಲ್ಲಾ ಗೊತ್ತು ಎನ್ನುವಂತೆ ಸುದ್ದಿ ಬಿತ್ತರಿಸಿದ್ದ ಯುವಕ, ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ತಪ್ಪು ಮಾಹಿತಿಯನ್ನ ಅಪ್ಲೋಡ್ ಮಾಡಿರ್ತೇನೆ. ಈ ಮಾಹಿತಿ ತಪ್ಪಾಗಿದೆ. ತಪ್ಪು ಮಾಹಿತಿಯನ್ನ ಅಪ್ಲೋಡ್ ಮಾಡಿದ್ದಕ್ಕಾಗಿ ನನ್ನನ್ನ ಕ್ಷಮಿಸಿ. ಅದೇ ರೀತಿ ಎಲ್ಲಾ ಯೂಟ್ಯೂಬ್ ಚಾನೆಲ್‌ನವರಿಗೆ ಕೇಳಿಕೊಳ್ಳುವುದು ಏನೆಂದರೆ, ಯಾವುದೇ ಮಾಹಿತಿ ಬಂದಾಗ, ಅದರ ಬಗ್ಗೆ ಸತ್ಯಾಂಶ ಗೊತ್ತಿಲ್ಲದಿದ್ದರೆ, ಇನ್ನೊಬ್ಬರ ಮಾನಕ್ಕೆ ನಷ್ಟ ಆಗುವಂತಹ ಯಾವುದೇ ತಪ್ಪು ಮಾಡಬೇಡಿ. ಮಾಡಿದ್ದಲ್ಲ, ಕಾನೂನು ಕ್ರಮಕ್ಕೆ ಒಳಗಾಗುತ್ತೀರಿ. ಸುಧಾರಾಣಿ ಮೇಡಂ ಅವರಿಗೆ ಕೈಮುಗಿದು ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ, ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ಧಾನೆ. ಕೈಮುಗಿದು ಬೇಡಿಕೊಂಡಿದ್ದಾನೆ.
ಅಂದ್ಹಾಗೇ ಅದೆಲ್ಲೋ ಕುಂತು ಚಾರಿತ್ಯ್ರವಧೆ ಮಾಡುವ ಈ ಕೀಬೋರ್ಡ್ ವಾರಿಯರ್ಸ್‌ಗೆ ಸುಧಾರಾಣಿ ಈ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದೇ ಸಮಯದಲ್ಲಿ ಹುಡುಗನ ಹಿನ್ನೆಲೆ ಕೇಳಿ ಕಷ್ಟಕ್ಕೆ ಮರುಗಿದ್ದಾರೆ. ಕ್ಷಮಿಸಿದ್ದಾರೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳನ್ನು ಬಳಸುವ ಪ್ರತಿಯೊಬ್ಬರೂ ಅದರ ನಿಯಮ ಮತ್ತು ನಿಬಂಧನೆಗಳನ್ನು ತಿಳಿದುಕೊಳ್ಳಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.
ಸದ್ಯ ಸುಧಾರಾಣಿ ಅವರ ಈ ನಡೆ ವ್ಯಾಪಕವಾದ ಮೆಚ್ಚುಗೆಗೆ ಪಾತ್ರವಾಗಿದ್ದು ನಿಮ್ಮದು ಒಳ್ಳೆಯ ಮನಸ್ಸು ಅವರನ್ನು ಕ್ಷಮಿಸಿದ್ದೀರಿ. ನಿಜವಾಗಿಯೂ ಸಂತೋಷವಾಯಿತು ಮೇಡಂ, ಇಂತವರಿಗೆ ಶಿಕ್ಷೆ ಆಗ್ಬೇಕಿತ್ತು. ಆದರೂ ನೀವು ಅವರನ್ನ ಕ್ಷಮಿಸಿದಿರಾ, ಯಾಕೆಂದರೆ ನಿಮ್ಮದು ತಾಯಿ ಮನಸು ಅದಕ್ಕೆ..! ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications