'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
'ಕಾಂತಾರ' ಚಿತ್ರದ ಲೀಲಾ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರ್ತಿಸಿಕೊಂಡವರು ಸಪ್ತಮಿ ಗೌಡ. ಬಳಿಕ ಬಾಲಿವುಡ್, ಟಾಲಿವುಡ್ ಅಂಗಳಕ್ಕೂ ಆಕೆ ಕಾಲಿಟ್ಟಿದ್ದಾರೆ. ಈಗಾಗಲೇ ಹಿಂದಿ ಸಿನಿಮಾ ಬಂದೋಗಿದೆ. ತೆಲುಗು ಸಿನಿಮಾ ಚಿತ್ರೀಕರಣ ನಡೀತಿದೆ. 'ಯುವ' ಸಿನಿಮಾ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ಆಯ್ಕೆ ಆದಾಗ ಕೆಲವರು ಮೂಗು ಮುರಿದಿದ್ದರು. ಯುವ ರಾಜ್‌ಕುಮಾರ್‌ಗೆ ಜೋಡಿಯಾಗಿ ಬೇರೆ ಯಾರನ್ನಾದರೂ ಆಯ್ಕೆ ಮಾಡಬೇಕಿತ್ತು ಎಂದಿದ್ದರು. ಆದರೆ ಸಿನಿಮಾ ಸಾಂಗ್, ಟ್ರೈಲರ್ ನೋಡಿದ ಮೇಲೆ ಕೆಲವರ ಅಭಿಪ್ರಾಯ ಬದಲಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಪುತ್ರಿ ಸಪ್ತಮಿ ಗೌಡ 'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಆ ಚಿತ್ರದ 3 ನಾಯಕಿಯರಲ್ಲಿ ಒಬ್ಬರಾಗಿದ್ದರು. ಸಿಕ್ಕಾಪಟ್ಟೆ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದ ಆಕೆ ಜಬರ್ದಸ್ತ್ ಡೈಲಾಗ್‌ಗಳಿಂದ ಹುಬ್ಬೇರಿಸಿದ್ದರು. ಬಳಿಕ ಅಮೆರಿಕಾಗೆ ಹೋಗಿ ಎಂಎಸ್ ಮಾಡುವ ಕನಸು ಕಂಡಿದ್ದರು. ಆದರೆ ಅಷ್ಟರಲ್ಲಿ ಕೊರೋನಾ ಲಾಕ್‌ಡೌನ್ ಆಗಿ ಅದು ಸಾಧ್ಯವಾಗಿರಲಿಲ್ಲ. ಅಂತಹ ಸಮಯದಲ್ಲೇ 'ಕಾಂತಾರ' ಅವಕಾಶ ಸಿಕ್ಕಿತ್ತು.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕಾಡುಬೆಟ್ಟು ಶಿವನ ಜೋಡಿಯಾಗಿ ಸಪ್ತಮಿ ಗೌಡ ಗಮನ ಸೆಳೆದರು. ಬಳಿಕ ಎಂಎಸ್ ಕನಸು ಬಿಟ್ಟು ಚಿತ್ರರಂಗದಲ್ಲೇ ಉಳಿದುಕೊಂಡರು. ಅದೇ ಸಮಯದಲ್ಲಿ ಬಾಲಿವುಡ್‌ನ 'ವಾಕ್ಸಿನ್ ವಾರ್' ಸಿನಿಮಾ ಅವಕಾಶ ಸಿಕ್ಕಿತ್ತು. ಹಿಂದಿ ಚಿತ್ರದಲ್ಲಿ ನಟಿಸಿ ಬಂದರು. ಈಗ ಮುಂದಿನ ಸಿನಿಮಾಗಳ ಮುಖ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಜೊತೆ 'ಕಾಳಿ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೆಬ್ಬುಲಿ ಕೃಷ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಸಪ್ತಮಿ ಗೌಡ ಚಿತ್ರರಂಗಕ್ಕೆ ಬಂದವರು. ತಂದೆ ಪೊಲೀಸ್ ಅಧಿಕಾರಿ ಆಗಿದ್ದರು. ಹಾಗಾಗಿ ಬಹಳ ಶಿಸ್ತಿನಿಂದ ಮನೆಯಲ್ಲಿ ಬೆಳೆದ ಸಪ್ತಮಿ ಗೌಡ ಓದಿನಲ್ಲಿ ಕೂಡ ಮುಂದಿದ್ದರು. ಸ್ವಿಮ್ಮರ್ ಆಗಿ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಿರ್ದೇಶಕ ದುನಿಯಾ ಸೂರಿ ಹಾಗೂ ಸಪ್ತಮಿ ಗೌಡ ತಂದೆ ಎಸ್.ಕೆ ಉಮೇಶ್‌ಗೆ ಉತ್ತಮ ಒಡನಾಟವಿತ್ತು. ಅದೇ ಕಾರಣಕ್ಕೆ ಸಪ್ತಮಿ ಗೌಡ 'ಪಾಪ್‌ಕಾರ್ನ್ ಮಂಕಿಟೈಗರ್' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅದಕ್ಕೂ ಮುನ್ನ ಅಕ್ಸೆಂಚರ್ ಕಂಪನಿಯಲ್ಲಿ ಸಪ್ತಮಿ ಗೌಡ ಕೆಲಸ ಮಾಡುತ್ತಿದ್ದರು.
ಇಂಜಿನಿಯರಿಂಗ್ ಪದವೀಧರೆ ಸಪ್ತಮಿ ಗೌಡ ಇಷ್ಟವಿಲ್ಲದಿದ್ದರೂ ಒಂದಷ್ಟು ದಿನ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. 2019ರ ಸಮಯದಲ್ಲಿ ಮೊದಲ ಸಂಬಳ ಎಂದು 27 ಸಾವಿರ ರೂ. ಸಿಕ್ಕಿತ್ತಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಖುದ್ದು ಸಪ್ತಮಿ ಹೇಳಿಕೊಂಡಿದ್ದರು. ಆ ಕೆಲಸ ಖುಷಿಕೊಡಲಿಲ್ಲ ಎನ್ನುವ ಕಾರಣಕ್ಕೆ ಬಿಟ್ಟುಬಿಟ್ಟರು. ಬಳಿಕ 'ಪಾಪ್‌ಕಾರ್ನ್ ಮಂಕಿಟೈಗರ್' ಚಿತ್ರದಲ್ಲಿ ನಟಿಸಿದರು.
ಸಾಮಾನ್ಯವಾಗಿ ಹುಡುಗಿಯರ ವಯಸ್ಸು ಕೇಳಬಾರದು ಎನ್ನುತ್ತಾರೆ. ನಟಿಯರು ಕೂಡ ಮ್ಮ ವಯಸ್ಸಿನ ಬಗ್ಗೆ ಮಾತನಾಡಲು ಹಿಂದುಮುಂದು ನೋಡುತ್ತಾರೆ. ಮತ್ತೊಂದು ಸಂದರ್ಶನವೊಂದರಲ್ಲಿ ಮಾತನಾಡಿರುವ ಸಪ್ತಮಿ ಗೌಡ ನಾನು 1996ರಲ್ಲಿ ಹುಟ್ಟಿದ್ದು ಎಂದು ಹೇಳಿದ್ದಾರೆ. ಅಂದರೆ ಆಕೆಗೆ ಈಗ 28 ವರ್ಷ ವಯಸ್ಸಾಗಿದೆ. 'ಯುವ' ಬಳಿಕ ಮತ್ತಷ್ಟು ಕಥೆಗಳನ್ನು ಸಪ್ತಮಿ ಕೇಳುತ್ತಿದ್ದಾರೆ. ಪರಭಾಷೆಗಳಿಂದಲೂ ಅವಕಾಶಗಳು ಬರುತ್ತಿದೆ.


Click it and Unblock the Notifications











