'ಯುವ' ಬಳಸಿದ ಬೈಕ್ ಗೆಲ್ಲುವ ಸುವರ್ಣಾವಕಾಶ; ನೀವು ಮಾಡಬೇಕಿರುವುದು ಇಷ್ಟೇ
ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಹಿಟ್ ಲಿಸ್ಟ್ ಸೇರಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿತ್ತು. ಇದೀಗ 'ಯುವ' ಸಿನಿಮಾ ಟೆಲಿವಿಷನ್ ಪ್ರೀಮಿಯರ್‌ಗೆ ಸಿದ್ಧವಾಗಿದೆ.
ಇದೇ ಭಾನುವಾರ(ಜೂನ್ 16) 'ಯುವ' ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಸಿನಿಮಾ ನೋಡುವ ವೀಕ್ಷಕರಿಗೆ ಯುವ ರಾಜ್‌ಕುಮಾರ್ ಬಳಸಿದ ಬೈಕ್ ಗೆಲ್ಲುವ ಅವಕಾಶ ಸಿಗಲಿದೆ. 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ರಾಘಣ್ಣನ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆ ಸಿನಿಮಾ ನಿಂತು ಹೋಯಿತು. ಬಳಿಕ ದೊಡ್ಮನೆ ಕುಡಿಯ ಲಾಂಚಿಂಗ್ ಸಿನಿಮಾ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ವಹಿಸಿಕೊಂಡಿತ್ತು.

ಚಿಕ್ಕಂದಿನಿಂದಲೇ ಗುರುರಾಜ್‌ಕುಮಾರ್ ಚಿತ್ರರಂಗಕ್ಕೆ ಬರುವ ಮನಸ್ಸು ಮಾಡಿದ್ದರು. ಅದಕ್ಕೆ ಬೇಕಾದ ತಯಾರಿ ನಡೆಸಿದ್ದರು. ಹಾಗಾಗಿ ಮೊದಲ ಸಿನಿಮಾ ನಿಂತ ಬಳಿಕ ಸಂತೋಷ್ ಆನಂದ್ ರಾಮ್ ಜೊತೆ ಕೈ ಜೋಡಿಸಿದ್ದರು. 'ಯುವ' ಚಿತ್ರದಲ್ಲಿ ಕ್ಯಾಂಪಸ್ ವಾರ್, ಫ್ಯಾಮಿಲಿ ಸೆಂಟಿಮೆಂಟ್, ಡೆಲಿವರಿ ಬಾಯ್‌ಗಳ ಸಂಕಷ್ಟದ ಜೊತೆಗೆ ಕುಸ್ತಿ ಪಂದ್ಯವನ್ನು ಸೇರಿಸಿ ಆಕ್ಷನ್ ಎಂಟರ್‌ಟೈನರ್ ಕಟ್ಟಿಕೊಡಲಾಗಿದೆ. ಫಸ್ಟ್ ಹಾಫ್ ತುಂಬಾ ಮಂಗಳೂರಿನ ಇಂಜಿನಿಯರ್ ಕಾಲೇಜ್ ಕಥೆಯಿದೆ.
ಕಾಲೇಜಿನಲ್ಲಿ ಹಾಸ್ಟೆಲ್ ಹುಡುಗರು ಹಾಗೂ ಲೋಕಲ್ ಹುಡುಗರ ನಡುವೆ ಸದಾ ಕಿರಿಕ್, ಜಗಳ. ಹಾಸ್ಟೆಲ್ ಹುಡುಗರ ಪರ ಯುವ ನಿಲ್ತಾನೆ. ಯುವನ ಐಷಾರಾಮಿ ಬೈಕ್ ಅನ್ನು ಲೋಕಲ್ ಹುಡುಗರು ಹಾನಿಗೊಳಿಸುತ್ತಾರೆ. ಆಗ ಅವರ ವಿರುದ್ಧ ತಿರುಗಿ ಬೀಳ್ತಾನೆ. ಇನ್ನು ಸಾಕಷ್ಟು ಸನ್ನಿವೇಶಗಳಲ್ಲಿ ಯುವ ಬೈಕ್ ಏರಿ ಕಾಣಿಸಿಕೊಳ್ಳುತ್ತಾನೆ. ಇದೀಗ ಸಿನಿಮಾ ಟಿವಿಯಲ್ಲಿ ಪ್ರಚಾರವಾಗುತ್ತಿದ್ದು ವೀಕ್ಷಕರಿಗೆ ಆ ಬೈಕ್ ಗೆಲ್ಲುವ ಅವಕಾಶ ಸಿಕ್ತಿದೆ.
'ಯುವ' ಬೈಕ್ ಕಾಂಟೆಸ್ಟ್ ಅನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಆಯೋಜಿಸಿದೆ. ಇತ್ತೀಚೆಗೆ 'ಸಲಾರ್' ಸಿನಿಮಾ ಬಿಡುಗಡೆ ಸಮಯದಲ್ಲಿ ಕೂಡ ಇದೇ ರೀತಿ ಕಾಂಟೆಸ್ಟ್‌ನಲ್ಲಿ ಬೈಕ್ ನೀಡಲಾಗಿತ್ತು. ವೀಕ್ಷಕರು ಮಾಡಬೇಕಿರುವುದು ಇಷ್ಟೆ. ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗುವ ಸಿನಿಮಾ ವೀಕ್ಷಿಸಿ. ಈ ಸಮಯದಲ್ಲಿ ಚಾನಲ್ ಲೋಗೊ ಮೇಲೆ ಬೈಕ್ ಚಿತ್ರ ಬಂದು ಬಂದು ಹೋಗುತ್ತದೆ. ಸಿನಿಮಾ ಆರಂಭವಾಗಿ ಕೊನೆಯವರೆಗೂ ಎಷ್ಟು ಬಾರಿ ಬೈಕ್ ಚಿತ್ರ ಬಂದು ಹೋಗುತ್ತದೆ ಎಂದು ಲೆಕ್ಕ ಮಾಡಿ ಹೇಳಿದರೆ ಒಬ್ಬ ಅದೃಷ್ಠಶಾಲಿಗೆ ಬೈಕ್ ಬಹುಮಾನವಾಗಿ ಸಿಗಲಿದೆ.
ಅಂದಹಾಗೆ 'ಯುವ' ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದರು. ಇನ್ನುಳಿದಂತೆ ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ನಾಯಕನ ತಂದೆ-ತಾಯಿ ಪಾತ್ರಗಳಲ್ಲಿ ಮಿಂಚಿದ್ದರು. ಹಿತಾ ಸಹೋದರಿಯಾಗಿ ಕಾಣಿಸಿಕೊಂಡಿದ್ದರೆ ಮಂಗಳೂರು ಇಂಜಿನಿಯರಿಂಗ್ ಕಾಲೇಜ್ ಪ್ರಿನ್ಸಿಪಲ್ ಆಗಿ ಗೋಪಾಲ್‌ಕೃಷ್ಣ ದೇಶಪಾಂಡೆ ಬಣ್ಣ ಹಚ್ಚಿದ್ದರು. ಶ್ರೀಶ ಕುದುವಲ್ಲಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿತ್ತು.
'ಯುವ' ಸಿನಿಮಾ ತೆರೆಗೆ ಬಂದ 20 ದಿನಕ್ಕೆ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಬಳಿಕ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಓಟಿಟಿಗೆ ಬಂದಿತ್ತು. ಮೊದಲ ಚಿತ್ರದಲ್ಲೇ ಡ್ಯಾನ್ಸ್ ಹಾಗೂ ಫೈಟ್ಸ್‌ನಿಂದ ಯುವ ರಾಜ್‌ಕುಮಾರ್ ಗಮನ ಸೆಳೆದಿದ್ದಾರೆ. ಸದ್ಯ 2ನೇ ಚಿತ್ರಕ್ಕಾಗಿ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದು ಶೀಘ್ರದಲ್ಲೇ ಘೋಷಣೆ ಆಗಲಿದೆ.


Click it and Unblock the Notifications











