ಯುವರಾಜ್‌ಕುಮಾರ್ - ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್ ಚಿತ್ರದ ಬಗ್ಗೆ ಬಂತು ಅಪ್‌ಡೇಟ್
ಯುವ ರಣಧೀರ ಕಂಠೀರವ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸುವ ಯೋಜನೆಯಲ್ಲಿದ್ದ ಯುವರಾಜ್‌ಕುಮಾರ್ ಆ ಚಿತ್ರದ ಬದಲಾಗಿ ಮೊದಲಿಗೆ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಮುಂದಾಗಿರುವ ವಿಷಯ ತಿಳಿದಿರುವುದೇ. ಕಳೆದ ಏಪ್ರಿಲ್ 27ರಂದು ಯುವ ಹಾಗೂ ಸಂತೋಷ್ ಕಾಂಬಿನೇಷನ್‌ನ ಚಿತ್ರ ಅಧಿಕೃತವಾಗಿ ಘೋಷಣೆಯಾಯಿತು.
ಅಪ್ಪು ನಿಧನರಾದ ಬಳಿಕ ಸಂತೋಷ್ ಆನಂದ್‌ರಾಮ್ ಹಾಗೂ ಯುವರಾಜ್‌ಕುಮಾರ್ ಕಾಂಬಿನೇಶನ್ ಚಿತ್ರ ಬರಬೇಕು ಎಂಬುದು ಪ್ರತಿ ಅಪ್ಪು ಅಭಿಮಾನಿಯ ಬಯಕೆ ಕೂಡ ಆಗಿತ್ತು. ಪುನೀತ್ ಅಭಿಮಾನಿಗಳ ಕನಸನ್ನು ಹೊಂಬಾಳೆ ಫಿಲ್ಮ್ಸ್ ನನಸು ಮಾಡಲು ಮುಂದಾಯಿತು. ಪುನೀತ್ ರಾಜ್‌ಕುಮಾರ್ ಅವರಿಗೆ ಒಟ್ಟು ಮೂರು ಚಿತ್ರಗಳನ್ನು ನಿರ್ಮಿಸಿ ಇನ್ನೂ ಎರಡು ಚಿತ್ರಗಳಿಗೆ ಬಂಡವಾಳ ಹೂಡಲು ತಯಾರಾಗಿದ್ದ ಹೊಂಬಾಳೆ ಫಿಲ್ಮ್ಸ್ ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರಿನ ನಟ ಯುವ ರಾಜ್‌ಕುಮಾರ್ ಅವರನ್ನು ಹೆಮ್ಮೆಯಿಂದ ಪರಿಚಯಿಸಲಿದ್ದೇವೆ ಎಂದು ಪೋಸ್ಟರ್ ಹಂಚಿಕೊಂಡಿತ್ತು.

ಇನ್ನು ಈ ಅನೌನ್ಸ್‌ಮೆಂಟ್ ಪೋಸ್ಟರ್‌ಗಾಗಿ ಯುವ ರಾಜ್‌ಕುಮಾರ್ ಸ್ಟೈಲಿಷ್ ಹೇರ್‌ಸ್ಟೈಲ್ ಕೂಡ ಮಾಡಿಸಿದ್ದರು ಹಾಗೂ ಯುವ ಲುಕ್ ಕಂಡ ಸಿನಿ ರಸಿಕರು ಫಿದಾ ಆಗಿದ್ದರು. ಹೀಗೆ ಘೋಷಣೆ ಮೂಲಕವೇ ಹೈಪ್ ಹುಟ್ಟಿಸಿದ್ದ ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಈ ಚಿತ್ರದ ಬಗ್ಗೆ ನಂತರದ ದಿನಗಳಲ್ಲಿ ಹೆಚ್ಚೇನೂ ಅಪ್‌ಡೇಟ್ ಹೊರಬರಲಿಲ್ಲ. ಅಪ್ಪು ಅಭಿಮಾನಿಗಳು ಟ್ವಿಟರ್‌ನಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್‌ಗೆ ಚಿತ್ರದ ಅಪ್‌ಡೇಟ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು.
ಹೀಗೆ ಅಪ್‌ಡೇಟ್ ಕುರಿತು ಅಭಿಮಾನಿಗಳ ಪ್ರಶ್ನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇದೀಗ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹಾಗೂ ನಟ ಯುವ ರಾಜ್‌ಕುಮಾರ್ ಟ್ವೀಟ್ ಮಾಡುವ ಮೂಲಕ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನನ್ನ ಸಹೋದರ ಸಮಾನರಾದ ಎಲ್ಲ ಅಭಿಮಾನಿಗಳಿಗೆ ಅತಿ ಶೀಘ್ರದಲ್ಲಿ ನನ್ನ ಹಾಗೂ ಯುವರಾಜ್ ಕುಮಾರ್ ಕಾಂಬಿನೇಶನ್ ಚಿತ್ರದ ಎಲ್ಲ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ" ಎಂದು ಸಂತೋಷ್ ಆನಂದ್‌ರಾಮ್ ಟ್ವೀಟ್ ಮಾಡಿದ್ದಾರೆ ಹಾಗೂ ಯುವ ರಾಜ್‌ಕುಮಾರ್ ಸಹ ತಂಡ ಸಿದ್ಧವಾಗಿದೆ, ಅತೀ ಶೀಘ್ರದಲ್ಲೇ ಅಪ್‌ಡೇಟ್ ನೀಡುತ್ತೇವೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











