ಯುವ ರಾಜ್‌ಕುಮಾರ್ - ಸಂತೋಷ್ ಅನಂದ್‌ರಾಮ್ ಚಿತ್ರದಲ್ಲಿ ನಟಿಸುವ ಅವಕಾಶ ಇಲ್ಲಿದೆ

ಚಿತ್ರರಂಗದಲ್ಲಿ ಕೆಲಸ ಮಾಡಬೇಕು, ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಆಸೆ ಹೊಂದಿರುವವರಿಗೆ ಸಂತೋಷ್ ಆನಂದ್ ರಾಮ್ ಹಾಗೂ ಯುವ ರಾಜ್‌ಕುಮಾರ್ ಕಾಂಬಿನೇಶನ್‌ನ ಚಿತ್ರ ಒಳ್ಳೆಯ ಅವಕಾಶವನ್ನು ಒದಗಿಸಿದೆ. ಹೌದು, ಸಂತೋಷ್ ಆನಂದ್‌ರಾಮ್ ನಿರ್ದೇಶದ ಅಡಿಯಲ್ಲಿ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಲಾಂಚ್ ಅಗುತ್ತಿದ್ದು, ಈ ಚಿತ್ರವನ್ನು ಹಲವು ದಿನಗಳ ಹಿಂದೆಯೇ ಕನ್ನಡ ಚಲನಚಿತ್ರರಂಗದ ಸದ್ಯದ ಓಡುವ ಕುದುರೆ ಹೊಂಬಾಳೆ ಫಿಲ್ಮ್ಸ್ ಘೋಷಿಸಿತ್ತು.
ಸಣ್ಣದೊಂದು ಫೋಟೊಶೂಟ್ ಮಾಡಿಸಿ ಯುವ ರಾಜ್‌ಕುಮಾರ್ ಲುಕ್ ಹಂಚಿಕೊಂಡಿದ್ದ ಚಿತ್ರತಂಡ ನಂತರದ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ. ಇನ್ನು ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅಪ್ಪು ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್‌ಕುಮಾರ್ ಅಭಿನಯಿಸಲಿರುವ ಮೊದಲ ಚಿತ್ರದ ಮೇಲೆ ಅಪ್ಪು ಅಭಿಮಾನಿಗಳು ಕ್ರೇಜ್ ಹೊಂದಿದ್ದು, ಚಿತ್ರದ ಬಗ್ಗೆ ಅಪ್‌ಡೇಟ್ ನೀಡಿ ಎಂದು ಚಿತ್ರತಂಡಕ್ಕೆ ಮನವಿ ಇಟ್ಟಿದ್ದರು.
ಅದರಂತೆ ತಂಡ ಸಿದ್ಧವಾಗಿದೆ, ಶೀಘ್ರದಲ್ಲಿಯೇ ಚಿತ್ರೀಕರಣವನ್ನು ಶುರು ಮಾಡಲಿದ್ದೇವೆ ಎಂದು ಇತ್ತೀಚೆಗಷ್ಟೆ ಟ್ವೀಟ್ ಮಾಡಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇದೀಗ ಚಿತ್ರ್ಕಕಾಗಿ ಆಡಿಷನ್ ನಡೆಸುತ್ತಿರುವ ವಿಷಯವನ್ನು ಹಂಚಿಕೊಂಡಿದ್ದು ಚಿತ್ರದಲ್ಲಿ ಅಭಿನಯಿಸಲು ಇಚ್ಛಿಸುವವರಿಗೆ ಸ್ವಾಗತ ಕೋರಿದ್ದಾರೆ. ಇನ್ನು 16ರಿಂದ 25 ವರ್ಷದೊಳಗಿನವರು ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂಬುದನ್ನೂ ಸಹ ತಿಳಿಸಲಾಗಿದೆ.
ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಡಿಷನ್ ನಡೆಯಲಿದ್ದು, ಈ ಚಿತ್ರತಂಡದ ಜತೆ ಕೆಲಸ ಮಾಡಬೇಕು ಎನ್ನುವ ಆಸೆ ಇರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಹುದಾಗಿದೆ.


Click it and Unblock the Notifications











