ಯುವ ಮೊದಲ ಚಿತ್ರದ ಟೈಟಲ್ ಟೀಸರ್ ರಿಲೀಸ್; ಖಡಕ್ ಡೈಲಾಗ್‌ಗಳಿಗೆ ಫ್ಯಾನ್ಸ್ ಫಿದಾ
ದೊಡ್ಮನೆಯ ಮತ್ತೊಂದು ಕುಡಿ ಯುವ ರಾಜ್‌ಕುಮಾರ್ ಸಿನಿಮಾ ಎಂಟ್ರಿಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಸಂತೋಷ್ ಆನಂದ್‌ರಾಮ್ ನಿರ್ದೇಶನದಡಿಯಲ್ಲಿ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಬೆಳ್ಳಿತೆರೆಗೆ ಗ್ರ್ಯಾಂಡ್ ಅಗಿ ಕಾಲಿಡಲಿದ್ದಾರೆ. ಈ ಹಿಂದೆ ಯುವ ರಣಧೀರ ಕಂಠೀರವ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಡಲು ಮುಂದಾಗಿದ್ದ ಯುವ ರಾಜ್‌ಕುಮಾರ್ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣದಿಂದಾಗಿ ಇದೀಗ ಪುನೀತ್ ಉತ್ತರಾಧಿಕಾರಿಯಾಗಿ ಈ ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಲಿದ್ದಾರೆ.
ಯುವ ರಾಜ್‌ಕುಮಾರ್ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್‌ಗೆ ರಾಜಕುಮಾರ ಮೂಲಕ ಇಂಡಸ್ಟ್ರಿ ಹಿಟ್ ಹಾಗೂ ಯುವರತ್ನ ಮೂಲಕ ಸೂಪರ್ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ನಿರ್ದೇಶಿಸಲಿದ್ದಾರೆ ಮತ್ತು ಈ ಎರಡೂ ಚಿತ್ರಗಳಿಗೂ ಬಂಡವಾಳ ಹೂಡಿದ್ದ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ ಎಂದಾಗಲೇ ರಾಜ್‌ವಂಶ ಅಭಿಮಾನಿಗಳು ದಿಲ್ ಖುಷ್ ಆಗಿದ್ದರು.

ಚಿತ್ರ ಘೋಷಣೆಯಾಗಿ ಹಲವು ತಿಂಗಳುಗಳು ಕಳೆದರೂ ಸಹ ಚಿತ್ರತಂಡ ಯಾವುದೇ ಅಪ್‌ಡೇಟ್ ನೀಡದ ಕಾರಣ ಬೇಸರಗೊಂಡಿದ್ದ ರಾಜ್‌ವಂಶ ಅಭಿಮಾನಿಗಳಿಗೆ ನಿನ್ನೆ ಶೀರ್ಷಿಕೆ ಘೋಷಿಸುವುದಾಗಿ ಹೇಳಿದ್ದ ಹೊಂಬಾಳೆ ಫಿಲ್ಮ್ಸ್ ಇಂದು ಚಿತ್ರದ ಟೈಟಲ್ ಘೋಷಿಸಿದೆ. ಈ ಚಿತ್ರಕ್ಕೆ ಜ್ವಾಲಾಮುಖಿ ಅಥವಾ ಅಶ್ವಮೇಧ ಎಂಬ ಟೈಟಲ್ ಇಡಲಾಗುತ್ತದೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ ಈ ಚಿತ್ರಕ್ಕೆ ಈ ಎರಡೂ ಶೀರ್ಷಿಕೆಗಳನ್ನೂ ಇಡದ ಚಿತ್ರತಂಡ 'ಯುವ' ಎಂಬ ಶೀರ್ಷಿಕೆಯನ್ನು ಚಿತ್ರಕ್ಕೆ ಅಂತಿಮಗೊಳಿಸಿದೆ.
ಯುವ ರಾಜ್‌ಕುಮಾರ್ ಬೈಕ್ ಮೇಲೆ ಕುಳಿತು ಖಡಕ್ ಲುಕ್ ನೀಡುತ್ತಿರುವ ಸ್ಟೈಲಿಶ್ ಪೋಸ್ಟರ್ ಬಿಡುಗಡೆಯಾಗಿದ್ದು, ಬೈಕ್ ಮುಂದೆ ಬೇಸ್‌ಬಾಲ್ ಬ್ಯಾಟ್ ಇಟ್ಟಿರುವುದು ಕುತೂಹಲ ಕೆರಳಿಸಿದೆ. ಪೋಸ್ಟರ್ ಜತೆಗೆ ಟೀಸರ್ ಅನ್ನೂ ಸಹ ಚಿತ್ರತಂಡ ಬಿಡುಗಡೆ ಮಾಡಿದ್ದು, ಟೀಸರ್ ರಿಚ್ ಹಾಗೂ ಖಡಕ್ ಆಗಿ ಮೂಡಿಬಂದಿದ್ದು, ಡೈಲಾಗ್‌ಗಳು ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿವೆ.
'ಅವನ್ನ ಹೊಡಿಯೋಕೆ ಅಂತಾನೇ ಒಂದು ಗ್ಯಾಂಗ್ ಕಾಯ್ತಾ ಇತ್ತು. ಅವನ್ನ ತಡಿಯೋಕೂ ಒಂದು ಗ್ಯಾಂಗ್ ಇತ್ತು. ಗ್ಯಾಂಗ್‌ವಾರ್ ಅವನು ಶುರು ಮಾಡಲಿಲ್ಲ. ಆದರೆ ಮುಗುಸ್ತಾನೆ' ಎಂದು ಪ್ರಕಾಶ್ ರಾಜ್ ಅವರ ದನಿಯಲ್ಲಿ ಕೇಳಿ ಬರುವ ಡೈಲಾಗ್ ಮೂಲಕ ಶುರುವಾಗುವ ಟೀಸರ್‌ನಲ್ಲಿ ಯುವ ರಾಜ್‌ಕುಮಾರ್ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನನ್ನು ಹೊಡೆಯಲು ಬರುವ ವಿಲನ್ ಓರ್ವನನ್ನು ಗನ್‌ನಿಂದ ಹೊಡೆದುರುಳಿಸುವ ಯುವ 'ನೀವು ದಾಟಿರೋದು ಬ್ಲಡ್ ಲೈನ್. ರಕ್ತ ಅಂಟೇ ಅಂಟುತ್ತೆ' ಎಂಬ ಡೈಲಾಗ್ ಹೇಳ್ತಾರೆ. ಅಲ್ಲಿಗೆ ಯುವ ಎಂಬ ಟೈಟಲ್ ರಿವೀಲ್ ಆಗುತ್ತೆ.
ಟೀಸರ್ ಡಾರ್ಕ್ ಶೇಡ್‌ನಲ್ಲಿ ರಿಚ್ ಆಗಿ ಮೂಡಿ ಬಂದಿದ್ದು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುವ ಸಿನಿಮಾಗಳ ಪರ್ಫೆಕ್ಷನ್ ಈ ಟೀಸರ್‌ನಲ್ಲಿಯೂ ಕಾಣಿಸುತ್ತಿದೆ. ಟೀಸರ್‌ನಲ್ಲಿ ಬರುವ ಆಕ್ಷನ್ ಸೀನ್‌ಗಳು, ಡೈಲಾಗ್‌ಗಳು ಹಾಗೂ ಕೊನೆಯಲ್ಲಿ ಬರುವ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗೆ ದೊಡ್ಮನೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.


Click it and Unblock the Notifications











