'ಅಪ್ಪು' ಚಿತ್ರೀಕರಣದ ಅಪರೂಪದ ಫೋಟೋ ಹಂಚಿಕೊಂಡ ಯುವ ರಾಜ್‌ಕುಮಾರ್; ಆಗ ಅಣ್ತಮ್ಮ ಹೇಗಿದ್ದರು ನೋಡಿ!
ಪುನೀತ್ ರಾಜ್ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಅಪ್ಪು'. 2002ರಲ್ಲಿ ತೆರೆ ಕಂಡಿರುವ ಈ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು.ಪೂರ್ಣಿಮಾ ಎಂಟರ್‌ಪ್ರೈಸಸ್ ನಡಿಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ 'ಅಪ್ಪು' ಸಿನಿಮಾವನ್ನು ನಿರ್ಮಿಸಿದ್ದರು. ಪುನೀತ್ ರಾಜ್ಕುಮಾರ್ ನಾಯಕನಾಗಿ ಮೊದಲ ಬಾರಿ ತೆರೆ ಮೇಲೆ ಮಿಂಚಿದರೆ, ನಾಯಕಿ ರಕ್ಷಿತಾಗೂ ಇದು ಮೊದಲ ಸಿನಿಮಾ ಎಂಬುದು ವಿಶೇಷ.
'ಅಪ್ಪು' ಸಿನಿಮಾದ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಭಿಮಾನಿಗಳ ಪಾಲಿಗೆ ಪ್ರೀತಿಯ ಅಪ್ಪುವಾದರು. ಮಾತ್ರವಲ್ಲ ಈ ಸಿನಿಮಾ ಪರಭಾಷೆಗಳಿಗೂ ರಿಮೇಕ್ ಆಗಿತ್ತು. ತೆಲುಗಿನಲ್ಲಿ 'ಈಡಿಯಟ್', ತಮಿಳಿನಲ್ಲಿ 'ಧಮ್' ಬಂಗಾಳಿಯಲ್ಲಿ 'ಹೀರೋ', ಬಾಂಗ್ಲಾದೇಶಿ ಬಂಗಾಳಿಯಲ್ಲಿ 'ಪ್ರಿಯಾ ಅಮರ್ ಪ್ರಿಯಾ' ಹೆಸರುಗಳಲ್ಲಿ ಈ ಸಿನಿಮಾ ರಿಮೇಕ್ ಆಗಿತ್ತು.

ಹೆಡ್ ಕಾನ್‌ಸ್ಟೆಬಲ್ ವೆಂಕಟಸ್ವಾಮಿಯ ಮಗ ಅಪ್ಪು. ತನ್ನ ಮಗನನ್ನು ಪೊಲೀಸ್ ಅಧಿಕಾರಿಯನ್ನಾಗಿ ಮಾಡಬೇಕು ಎಂಬುದು ವೆಂಕಟಸ್ವಾಮಿ ಕನಸು. ಒಂದು ರಾತ್ರಿ ಅಪ್ಪು ತನ್ನ ಸ್ನೇಹಿತರೊಂದಿಗೆ ಕ್ಯಾರಮ್ ಆಡುತ್ತಿರುತ್ತಾನೆ. ಆ ಸಮಯದಲ್ಲಿ ಎದುರಾಳಿ ಗ್ಯಾಂಗ್‌ನಿಂದ ಥಳಿಸಲ್ಪಡುತ್ತಾನೆ. ಆಗ ನಾಯಕಿ ಸುಚಿತ್ರಾ ಆತನನ್ನು ರಕ್ಷಿಸುತ್ತಾಳೆ. ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ಸೇರಿಸಿ ಅಪ್ಪುಗೆ ರಕ್ತದಾನ ಮಾಡುತ್ತಾಳೆ. ಮಾತ್ರವಲ್ಲ ಆಸ್ಪತ್ರೆ ಬಿಲ್ ಕೂಡಾ ಕಟ್ಟುತ್ತಾಳೆ. ಈ ಎಲ್ಲಾ ವಿಚಾರ ತಿಳಿದ ಅಪ್ಪುಗೆ ನಾಯಕಿ ಮೇಲೆ ಪ್ರೀತಿಯಾಗುತ್ತೆ. ಪೊಲೀಸ್ ಕಮಿಷನರ್ ಮಗಳ ಪ್ರೀತಿಯಲ್ಲಿ ಬೀಳುವ ಅಪ್ಪು ಮುಂದೆ ಎದುರಾಗುವ ಸನ್ನಿವೇಶವನ್ನು ಹೇಗೆ ಎದುರಿಸುತ್ತಾನೆ ಅನ್ನೋದೇ ಕಥೆ.
ಇದೀಗ ಈ ಸಿನಿಮಾ ಮತ್ತೆ ರಿ ರಿಲೀಸ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ 'ಅಪ್ಪು' ಸಿನಿಮಾ ಮತ್ತೆ ರಿಲೀಸ್ ಆಗಿದೆ. ವಜ್ರೇಶ್ವರಿ ಕಂಬೈನ್ಸ್ ಮತ್ತು ಪಿಆರ್‌ಕೆ ಪ್ರೊಡಕ್ಷನ್ ಒಟ್ಟಾಗಿ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಿದೆ. ಕಳೆದ ವರ್ಷ ಪುನೀತ್ ರಾಜ್‌ಕುಮಾರ್ ಅವರ ನಟನೆಯ 'ಜಾಕಿ' ಸಿನಿಮಾ ರಿ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿತ್ತು.
ಅಂದ ಹಾಗೇ ಇಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವೂ ಹೌದು. 'ಅಪ್ಪು' ಸಿನಿಮಾ ರಿ ರಿಲೀಸ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯುವ ರಾಜ್‌ಕುಮಾರ್ ಸ್ಪೆಷಲ್ ಫೋಟೋವನ್ನು ಶೇರ್ ಮಾಡುವ ಮೂಲಕ ವಿಶ್ ಕೂಡ ಮಾಡಿದ್ದಾರೆ.
ಹೌದು, ಯುವ ರಾಜ್ ಕುಮಾರ್ ಅವರು ಅಪ್ಪು ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ "ಅಪ್ಪು ಚಿತ್ರೀಕರಣದ ಸವಿನೆನಪುಗಳು, ಹ್ಯಾಪಿ ಬರ್ತ್ ಡೇ ಆಂಟಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಚಿಕ್ಕಪ್ಪ-ಚಿಕ್ಕಮ್ಮನ ಹಳೆ ಫೋಟೋ ರಿವೀಲ್ ಮಾಡುವ ಮೂಲಕ ಅಶ್ವಿನಿ ಅವರಿಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ

ಇನ್ನು ಯುವ ರಾಜ್ ಕುಮಾರ್ ವಿಷಯಕ್ಕೆ ಬಂದರೆ 'ಯುವ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹ್ಯಾಂಡ್ ಸಮ್ ಹುಡುಗ. ಮೊದಲ ಸಿನಿಮಾದಲ್ಲಿಯೇ ಸಿನಿಪ್ರಿಯರ ಮನ ಸೆಳೆದಿರುವ ಇವರು ಸದ್ಯ 'ಎಕ್ಕ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದ್ದು ಸಿನಿಮಾದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದೆ. 2025ರ ಜೂನ್ಬ 6 ರಂದು ಎಕ್ಕ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.


Click it and Unblock the Notifications











