'ಯುವ' ರನ್‌ಟೈಮ್ ರಿವೀಲ್; ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್
ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಸಿನಿಮಾ ಬಿಡುಗಡೆಗೆ ಇನ್ನು ದಿನ ಮಾತ್ರ ಬಾಕಿಯಿದೆ. ಅಭಿಮಾನಿಗಳು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುವಂತಾಗಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ಯುವ' ಸಿನಿಮಾ ನಿರ್ಮಿಸಿದೆ. ರಾಘಣ್ಣನ ಕಿರಿಮಗನ ಚೊಚ್ಚಲ ಸಿನಿಮಾ ಆಗಿರುವುದರಿಂದ ಭಾರೀ ಕುತೂಹಲ ಮೂಡಿದೆ. ಟ್ರೈಲರ್ ಸಿನಿಮಾ ಬಗ್ಗೆ ಭರವಸೆ ಮೂಡಿಸಿದ್ದು ಮೊದಲ ಪ್ರಯತ್ನದಲ್ಲೇ ಅಣ್ಣಾವ್ರ ಮೊಮ್ಮಗ ಗೆದ್ದು ಬೀಗುವ ಸುಳಿವು ಸಿಗುತ್ತಿದೆ. ಭರ್ಜರಿ ಪ್ರಚಾರ ಹಾಗೂ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಪ್ರಯತ್ನ ಶುರುವಾಗಿದೆ.

ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಆಗಿರುವುದರಿಂದ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗುತ್ತಿದೆ. ಬೇರೆ ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಚಿತ್ರತಂಡ ಇನ್ನು ಚಿಂತನೆ ನಡೆಸಿಲ್ಲ. ಒಂದು ವೇಳೆ ಸಿನಿಮಾ ಡಬ್ ಮಾಡಿಕೊಡುವಂತೆ ಬೇರೆ ಭಾಷೆಗಳಿಂದ ಬೇಡಿಕೆ ಬಂದರೆ ಆ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆಯಿದೆ. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ ಹಾಗೂ ಡೆಲಿವರಿ ಬಾಯ್ ಹೀಗೆ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಯುವ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತೆ ಸಿನಿಮಾ ಮೂಡಿಬಂದಿರುವಂತೆ ಕಾಣುತ್ತಿದೆ.
ಮೊದಲ ಚಿತ್ರದಲ್ಲಿ ಆಕ್ಷನ್ ಹೀರೊ ಆಗಿ ಯುವ ರಾಜ್‌ಕುಮಾರ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಸಾಥ್ ಕೊಟ್ಟಿದ್ದಾರೆ. ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ 'ಯುವ' ಚಿತ್ರಕ್ಕಿದೆ.
ಈಗಾಗಲೇ 'ಯುವ' ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಚಿತ್ರದ ಕಾಲಾವಧಿ 153 ನಿಮಿಷ ಎನ್ನುವುದು ರಿವೀಲ್ ಆಗಿದೆ. ಅಂದರೆ ಚಿತ್ರದ ರನ್‌ಟೈಮ್ 2 ಗಂಟೆ 33 ನಿಮಿಷ. ಇತ್ತೀಚೆಗೆ ಎರಡೂವರೆ ಗಂಟೆಗಿಂತ ಹೆಚ್ಚು ಕಾಲಾವಧಿಯ ಸಿನಿಮಾಗಳು ಬರ್ತಿವೆ. ಆದರೆ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ 'ಯುವ' ಚಿತ್ರವನ್ನು ಎರಡೂವರೆ ಗಂಟೆಗೆ ಇಳಿಸಿ ಪ್ರೇಕ್ಷಕರನ್ನು ರಂಜಿಸಲು ಸಂತೋಷ್ ಆನಂದ್ ರಾಮ್ ಸಜ್ಜಾಗಿದ್ದಾರೆ.

ಇನ್ನು ಈಗಾಗಲೇ ಥಿಯೇಟರ್‌ಗಳ ಮುಂದೆ 'ಯುವ' ಕಟೌಟ್‌ಗಳು ಎದ್ದು ನಿಂತಿವೆ. ಅದ್ಧೂರಿಯಾಗಿ ಅಣ್ಣಾವ್ರ ಮೊಮ್ಮಗನನ್ನು ಸ್ವಾಗತಿಗಳು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳ ಹಿಂದೆ ಮಂಡ್ಯದ ಗುರುಶ್ರೀ ಚಿತ್ರಮಂದಿರದಲ್ಲಿ ಬುಕ್ಕಿಂಗ್ ಶುರುವಾಗಿದೆ. ಅಭಿಮಾನಿಗಳು ನಿಧಾನವಾಗಿ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಆದಷ್ಟು ಬೇಗ ರಾಜ್ಯಾದ್ಯಂತ ಬುಕ್ಕಿಂಗ್ ಶುರುವಾಗಲಿದೆ. ದೊಡ್ಡ ಮಟ್ಟದಲ್ಲೇ ಸಿನಿಮಾ ರಿಲೀಸ್ ಆಗಲಿದೆ.
ನಗರದ ಕೆಜಿ ರಸ್ತೆಯ ಸಂತೋಷ್, ನವರಂಗ್, ಸಿದ್ದೇಶ್ವರ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಫ್ಯಾನ್ಸ್ ಶೋ, ಮಿಡ್ ನೈಟ್ ಇರಲ್ಲ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯ ಬಳಿಕವೇ 'ಯುವ' ಸಿನಿಮಾ ಪ್ರದರ್ಶನಗಳು ಶುರುವಾಗಲಿದೆ. ಗುಡ್‌ಫ್ರೈಡೇ ಹಿನ್ನೆಲೆ ಶುಕ್ರವಾರವೇ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಗುವ ಸಾಧ್ಯತೆಯಿದೆ. ಇನ್ನು ಐಪಿಎಲ್ ಕ್ರಿಕೆಟ್ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಆತಂಕವೂ ಇದೆ.


Click it and Unblock the Notifications











