Ekka Trailer: 'ಜಾಕಿ' ಗುಂಗಲ್ಲೇ ಊರೂರು ಸುತ್ತಾಡಿಸೋ ಪಕ್ಕಾ ಮಾಸ್ 'ಎಕ್ಕ'
ಪುನೀತ್ ರಾಜ್‌ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್‌ನಲ್ಲಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ಜಾಕಿ'. ಕಳೆದ ವರ್ಷ ಸಿನಿಮಾ ರೀ-ರಿಲೀಸ್ ಆಗಿ ಮತ್ತೊಮ್ಮೆ ಸದ್ದು ಮಾಡಿತ್ತು. ಇದೀಗ ಅದೇ ಗುಂಗಲ್ಲಿ ಯುವರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಬರ್ತಿದೆ.
ಹಳ್ಳಿಯಿಂದ ಪಟ್ಟಣ ಸೇರಿದ ಮುತ್ತು ಎಂಬ ಯುವಕನ ಕಥೆ 'ಎಕ್ಕ' ಚಿತ್ರದಲ್ಲಿದೆ. ಅದನ್ನು ರೋಹಿತ್ ಪದಕಿ ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಹಳ್ಳಿಯಲ್ಲಿ ಆರಾಮಾಗಿ ಇದ್ದ ಮುತ್ತು ಪಟ್ಟಣ ಸೇರೋದು ಯಾಕೆ? ಏನೋ ಮಾಡಲು ಹೋಗಿ ಮತ್ತೇನೋ ಆಗಿ ಮುಂದೇನು? ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದೆ.

'ಎಕ್ಕ' ಚಿತ್ರದ ಟ್ರೈಲರ್ ನೋಡಿದರೆ ಅಲ್ಲಲ್ಲಿ 'ಜಾಕಿ' ಚಿತ್ರದ ಛಾಚೆ ಎದ್ದು ಕಾಣುವಂತಿದೆ. ಅದರಲ್ಲೂ ಭಿಕ್ಷುಕನ ವೇಷದಲ್ಲಿ ಯುವ ಅಬ್ಬರಿಸೋ ಸನ್ನಿವೇಶ ಕೂಡ ಪುನೀತ್- ಸೂರಿ ಕ್ರೇಜಿ ಕಾಂಬೋ ಸಿನಿಮಾವನ್ನೇ ನೆನಪಿಸುವಂತಿದೆ. ಮುತ್ತು ಹಿನ್ನೆಲೆ ಧ್ವನಿಯಲ್ಲೇ ಟ್ರೈಲರ್ ಮೂಡಿಬಂದಿದೆ. ತನ್ನ ಕತೆಯನ್ನು ಇಲ್ಲಿ ಮುತ್ತು ತಾನೇ ಹೇಳಿಕೊಳ್ಳುತ್ತಾ ಸಾಗುತ್ತಾನೆ. ಹಳ್ಳಿಯಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆದ ಮುತ್ತು. ಸ್ನೇಹಿತರ ಜೊತೆ ಸುತ್ತಾಡುತ್ತಾ, ಎಸ್ಪೀಟ್ ಆಡ್ಕೊಂಡು ಇದ್ದ. ಆದರೆ ಅದೊಂದು ಸಮಸ್ಯೆ ಆತನನ್ನು ಬೆಂಗಳೂರಿನ ದಾರಿ ಹಿಡಿಯುವಂತೆ ಮಾಡುತ್ತೆ.
ನಗರದಲ್ಲಿ ನಂದಿನಿ ಜೊತೆ ಲವ್ವಾಗುತ್ತದೆ. ಕ್ಯಾಬ್ ಡ್ರೈವರ್ ಆಗಿದ್ದ ಮುತ್ತು ಅಚಾನಕ್ ಆಗಿ ಪಾತಕಲೋಕಕ್ಕೆ ಕಾಲಿಡುವಂತಾಗುತ್ತದೆ. ಮುಂದೆ ಅದು ಆತನನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ಸಮಸ್ಯೆಗೆ ಸಿಲುಕಿ ಹಳ್ಳಿ ಬಿಟ್ಟು ಬೆಂಗಳೂರು ಸೇರಿದ್ದ ಮುತ್ತು ಮುಂದೆ ನೆಮ್ಮದಿ ನಿದ್ದೆಗಾಗಿ ಪರಿಪಾಟಲು ಪಡುವಂತಾಗುತ್ತದೆ. ಮುತ್ತು ತಾಯಿ ಪಾತ್ರದಲ್ಲಿ ನಟಿ ಶ್ರುತಿ ನಟಿಸಿದ್ದಾರೆ. ಇನ್ನು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಡೆಡ್ಲಿ ಆದಿತ್ಯ ಅಬ್ಬರಿಸಿದ್ದಾರೆ.

ಮೊದಲ ನೋಟದಲ್ಲೇ 'ಎಕ್ಕ' ಟ್ರೈಲರ್ ನೋಡುಗರಿಗೆ ಇಷ್ಟವಾಗ್ತಿದೆ. ಆದರೆ 'ಜಾಕಿ', 'ಟಗರು', 'ಭೀಮ' ಚಿತ್ರಗಳನ್ನು ಅಲ್ಲಲ್ಲಿ ನೆನಪಿಸುತ್ತೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಚರಣ್ ರಾಜ್ ಬಿಜಿಎಂ ಸೈಲೆಂಟ್ ಆಗಿಯೇ ಕಿಕ್ ಕೊಡುತ್ತಾ ಸಾಗುತ್ತದೆ. ಟ್ರೈಲರ್‌ನಲ್ಲಿ ಇತ್ತೀಚೆಗೆ ಬರ್ತಿರೋ ಆಕ್ಷನ್ ಸಿನಿಮಾಗಳ ರೀತಿ ಭಾರೀ ಆರ್ಭಟ ಕಾಣಿಸುತ್ತಿಲ್ಲ. ಆದರೆ ನಿಧಾನವಾಗಿ 'ಎಕ್ಕ' ಕಥೆ ಆವರಿಸಿಕೊಳ್ಳುವಂತಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಸಂಜಾನಾ ಆನಂದ್ ಹಾಗೂ ಸಂಪದಾ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟೈಟಲ್ ಸಾಂಗ್ ಹಾಗೂ ಬ್ಯಾಂಗಲ್ ಬಂಗಾರಿ ಸಾಂಗ್ಸ್ ಹಿಟ್ ಆಗಿ ಗಮನ ಸೆಳೆದಿವೆ. 'ಯುವ' ಚಿತ್ರದ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಬಂದಿದ್ದರು. ಈಗ 2ನೇ ಸಿನಿಮಾದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
"ನಿನ್ ಒಳಿಗೆ ಮಗೀನು ಐತೆ, ಮೃಗಾನು ಐತೆ" ಅದೇ ರೀತಿ ನೆನಪಾಗೋ ಅಮ್ಮ, ಕಾಡೋ ಗುಮ್ಮ ರೀತಿಯ ಡೈಲಾಗ್‌ಗಳು ಗಮನ ಸೆಳೆಯುವಂತಿದೆ. "ಇದು ಇಲ್ಲಿಗೆ ಮುಗಿಯಲ್ಲ, ಆಟ ಶುರು ಮಾಡ್ದೋನು ರಾಜ, ಅವ್ನ ಮೇಲಿದ್ದು ಮುಗ್ಸೋನು ಎಕ್ಕ" ಎನ್ನುವಂತಹ ಡೈಲಾಗ್ಸ್ ಸದ್ದು ಮಾಡುವ ಸುಳಿವು ಸಿಕ್ತಿದೆ. ಮುಂದಿನ ವಾರವೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಕಳೆದ 6 ತಿಂಗಳಲ್ಲಿ ಯಾವುದೇ ಕನ್ನಡ ಸಿನಿಮಾ ಪ್ರೇಕ್ಷಕರನ್ನು ದೊಡ್ಡದಾಗಿ ಚಿತ್ರಮಂದಿರಕ್ಕೆ ಸೆಳೆಯಲಿಲ್ಲ. ಆ ಭರವನ್ನು 'ಎಕ್ಕ' ಸಿನಿಮಾ ನೀಗಿಸುವಂತಿದೆ. ಅಭಿಮಾನಿಗಳು ಟ್ರೈಲರ್ ನೋಡಿ ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಎನ್ನುತ್ತಿದ್ದಾರೆ.


Click it and Unblock the Notifications











