ಯುವ 2ನೇ ಸಿನಿಮಾ ಎಲ್ಲಿಗೆ ಬಂತು? ಯಾವ ಬ್ಯಾನರ್‌ನಲ್ಲಿ ಹೊಸ ಪ್ರಾಜೆಕ್ಟ್?
ಅಣ್ಣಾವ್ರ ಮೊಮ್ಮಗ ಗುರುರಾಜ್ 'ಯುವ' ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ 'ಯುವ' ರಾಜ್‌ಕುಮಾರ್ ಸಕ್ಸಸ್ ಕಂಡಿದ್ದರು. ಮೊದಲ ಸಿನಿಮಾ ತೆರೆಕಂಡು 6 ತಿಂಗಳು ಕಳೆದರೂ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ.
ರಾಘಣ್ಣನ ಕಿರಿಮಗ 'ಯುವ' ಆಗಿ ಗೆದ್ದು ಬೀಗಿದ್ದಾರೆ. ಕನ್ನಡ ಚಿತ್ರರಂಗದ ಮುಂದಿನ ಸ್ಟಾರ್ ಎನ್ನುವ ನಿರೀಕ್ಷೆ ಹುಟ್ಟಾಕ್ಕಿದ್ದಾರೆ. ಜ್ಯೂ. ಪವರ್ ಸ್ಟಾರ್ ಎಂದು ಈಗಾಗಲೇ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ತಮ್ಮ ನೆಚ್ಚಿನ ಅಪ್ಪುನ ಯುವ ರಾಜ್‌ಕುಮಾರ್ ಅವರಲ್ಲಿ ನೋಡುತ್ತಿದ್ದಾರೆ. ಇನ್ನು ಚೊಚ್ಚಲ ಚಿತ್ರದಲ್ಲಿ ಯುವ ರಾಜ್‌ಕುಮಾರ್ ಡ್ಯಾನ್ಸ್, ಫೈಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ನಟನೆಯಲ್ಲಿ ಕೊಂಚ ಮಾಗಿದರೆ ಯುವ ರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿರುವ ಸ್ಟಾರ್ ನಟರ ಸಂಖ್ಯೆಯ ಕೊರತೆಯನ್ನು ಕೊಂಚ ನೀಗಿಸುತ್ತಾರೆ ಎನ್ನುವುದು ಕೆಲವರ ವಾದ. ಅದೇ ಕಾರಣಕ್ಕೆ ಕಥೆಗಳ ಆಯ್ಕೆಯಲ್ಲಿ ಅವರು ಬಹಳ ಚ್ಯೂಸಿ ಆಗಿದ್ದಾರೆ. 'ಯುವ' ಹಿಟ್ ಆದ ಬಳಿಕ ಸಾಕಷ್ಟು ಕಥೆಗಳನ್ನು ಕೇಳಿದ್ದಾರೆ. ಆದರೆ ಯಾವುದು ಫೈನಲ್ ಆಗಿಲ್ಲ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ ಆಗಲಿದೆ.
ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲೇ ಯುವ ರಾಜ್‌ಕುಮಾರ್ 2ನೇ ಸಿನಿಮಾ ಮೂಡಿಬರುವುದು ಬಹುತೇಕ ಖಚಿತವಾಗಿದೆ. 'ಯುವ' ಬಿಡುಗಡೆಗೂ ಮೊದ್ಲೆ ಇಂತಾದೊಂದು ಚರ್ಚೆ ನಡೆದಿತ್ತು. ಅದು ನಿಜವಾಗುವ ಸಮಯ ಹತ್ತಿರ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದ 'ಯುವ ರಣಧೀರ ಕಂಠೀರವ' ಚಿತ್ರದಲ್ಲಿ ಯುವ ಮೊದಲಿಗೆ ನಟಿಸಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತಿದೆ. ಸದ್ಯಕ್ಕೆ ಬೇರೆ ಕಥೆಗಳ ಬಗ್ಗೆ ಚರ್ಚೆ ನಡೀತಿದೆ.

ತಮ್ಮದೇ ಬ್ಯಾನರ್‌ನಲ್ಲಿ ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದಾರೆ. ಅದಕ್ಕಾಗಿ ಕಥೆಗಳನ್ನು ಕೇಳುತ್ತಿದ್ದು ಶೀಘ್ರದಲ್ಲೇ ಸಿನಿಮಾ ಘೋಷಣೆ ಆಗಲಿದೆ. ಒಂದು ಪಕ್ಕಾ ಕಮರ್ಷಿಯಲ್ ಚಿತ್ರವನ್ನು ಬಹಳ ಅದ್ಧೂರಿಯಾಗಿ ಕಟ್ಟಿಕೊಡುವ ಪ್ರಯತ್ನ ಶುರುವಾಗಿದೆ. ಈಗಾಗಲೇ ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಸಾಕಷ್ಟು ಸಿನಿಮಾಗಳು ನಿರ್ಮಾಣವಾಗಿವೆ.
ಈವರೆಗೆ ಪಿಆರ್‌ಕೆ ಸಂಸ್ಥೆಯಲ್ಲಿ ಬಂದಿರುವ ಎಲ್ಲಾ ಸಿನಿಮಾ ಕಥೆಗಳನ್ನು ಅಪ್ಪು ಫೈನಲ್ ಮಾಡಿದ್ದರು. ಒಂದಷ್ಟು ಸಿನಿಮಾಗಳು ತೆರೆಗೆ ಬಂದಿದ್ದವು. ಇನ್ನು ಕೆಲ ಚಿತ್ರಗಳ ಕಥೆ ಓಕೆ ಮಾಡಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಪುನೀತ್ ನಿಧನರಾಗಿದ್ದರು. ಬಳಿಕ ಇಡೀ ಜವಾಬ್ದಾರಿಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಹಿಸಿಕೊಂಡಿದ್ದರು. ಅರ್ಧಕ್ಕೆ ನಿಂತ ಸಿನಿಮಾಗಳನ್ನು ಪೂರ್ಣಗೊಳಿಸಿ ರಿಲೀಸ್ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಖುದ್ದು ಒಂದು ಕಥೆ ಕೇಳಿ ಓಕೆ ಮಾಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಯುವ ರಾಜ್‌ಕುಮಾರ್ 2ನೇ ಚಿತ್ರದಿಂದಲೇ ಅದು ಶುರುವಾಗುತ್ತಿದೆ. ಇನ್ನುಳಿದಂತೆ ತಮ್ಮ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲು ಮನಸ್ಸು ಮಾಡಿದ್ದಾರೆ. ಶೀಘ್ರದಲ್ಲೇ ಮತ್ತಷ್ಟು ಸಿನಿಮಾಗಳು ಘೋಷಣೆ ಆಗಲಿದೆ.
'ಯುವ' ರಾಜ್‌ಕುಮಾರ್ ಲಾಂಚಿಂಗ್ ಸಿನಿಮಾ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆ ವಹಿಸಿಕೊಂಡಿತ್ತು. ಸಂತೋಷ್ ಆನಂದ್ ರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕಾಲೇಜ್ ಹೀರೊ ಆಗಿ ಯುವ ಅಬ್ಬರಿಸಿದ್ದರು. ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದರೆ ಅಚ್ಯುತ್ ಕುಮಾರ್, ಸುಧಾರಾಣಿ ಸೇರಿ ದೊಡ್ಡ ತಾರಗಣ ಚಿತ್ರದಲ್ಲಿತ್ತು. ಜಬರ್ದಸ್ತ್ ಆಕ್ಷನ್, ಡೈಲಾಗ್ಸ್, ಡ್ಯಾನ್ಸ್ ಹಾಗೂ ಸಾಂಗ್ಸ್‌ನಿಂದ 'ಯುವ' ಸಿನಿಮಾ ಸದ್ದು ಮಾಡಿತ್ತು. ಆದರೆ ತಿಂಗಳಿಗೂ ಮುನ್ನ ಓಟಿಟಿಗೆ ಬಂದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.


Click it and Unblock the Notifications











