ಯುವ- ಶ್ರೀದೇವಿ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಸುದ್ದಿ ತಣ್ಣಗಾಗುವ ಮುನ್ನ ಮತ್ತೊಂದು ವಿಚ್ಛೇದನ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿದೆ. ದೊಡ್ಮನೆ ಹುಡುಗ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿಯಿಂದ ದೂರಾಗಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ಈಗಾಗಲೇ ಇಬ್ಬರೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
2019ರಲ್ಲಿ ಯುವ ಹಾಗೂ ಶ್ರೀದೇವಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನೆರವೇರಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ದೊಡ್ಮನೆ ಈ ಮದುವೆ ಸಂಭ್ರಮದಲ್ಲಿ ಖುಷಿಪಟ್ಟಿತ್ತು.

ಇತ್ತೀಚೆಗೆ ಯುವ ರಾಜ್‌ಕುಮಾರ್ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಯುವ' ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಜೂನ್ 6ರಂದು ಯುವ ರಾಜ್‌ಕುಮಾರ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು ಜುಲೈ 4ರಂದು ವಿಚಾರಣೆ ನಡೆಯಲಿದೆ. MC ಆಕ್ಟ್ ಸೆಕ್ಷನ್ 13(1)(IA) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕಳೆದ 6 ತಿಂಗಳಿಂದ ದಂಪತಿ ದೂರಾಗಿ ಜೀವನ ನಡೆಸುತ್ತಿದ್ದಾರೆ.
ಈಗಾಗಲೇ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿಗೆ ನೋಟಿಸ್ ಸಹ ನೀಡಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ. ಸದ್ಯ ಶ್ರೀದೇವಿ ವಿದೇಶದಲ್ಲಿದ್ದಾರೆ ಎನ್ನಲಾಗ್ತಿದೆ. ಕಳೆದ ಒಂದು ವರ್ಷದಿಂದ ದಾಂಪತ್ಯ ಕಲಹ ಶುರುವಾಗಿದ್ದು ಇದೀಗ ಯುವ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಕನ್ನಡ ಚಿತ್ರರಂಗದ ದೊಡ್ಮನೆಯಲ್ಲಿ ಇದೇ ಮೊದಲ ಬಾರಿಗೆ ಡಿವೋರ್ಸ್ ಎನ್ನುವ ವಿಚಾರ ಕೇಳಿಬಂದಿದೆ.
ಮೂಲತಃ ಮೈಸೂರಿನವರು ಶ್ರೀದೇವಿ ಭೈರಪ್ಪ. ಅಲ್ಲೇ ಓದಿ ಬೆಳೆದು ಉನ್ನತ ಶಿಕ್ಷಣ ಮುಗಿಸಿದ್ದಾರೆ. 10 ವರ್ಷಗಳ ಹಿಂದೆ ಇಬ್ಬರೂ ಸ್ನೇಹಿತರಾಗಿದ್ದರು. ಆ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಅಂತಿಮವಾಗಿ ಪೋಷಕರು ಒಪ್ಪಿಗೆ ಪಡೆದು ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರು. 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಉಸ್ತುವಾರಿಯನ್ನು ಕೂಡ ವಹಿಸಿಕೊಂಡಿದ್ದರು. ಮೈಸೂರಿನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಬಳಿಕೆ ಬೆಂಗಳೂರಿನಲ್ಲಿ ಹಸೆಮಣೆ ಏರಿದ್ದರು.
2019 ಮೇ 26ರಂದು ಅದ್ಧೂರಿಯಾಗಿ ಯುವ ಕಲ್ಯಾಣೋತ್ಸವ ನಡೆದಿತ್ತು. ತೆಲುಗು, ತಮಿಳು ಸಿನಿಮಾ ತಾರೆಯರು ಭಾಗಿ ಆಗಿ ಶುಭ ಕೋರಿದ್ದರು. ಸದ್ಯ ಯುವ ಡಿವೋರ್ಸ್ ಸುದ್ದಿ ಕೇಳಿ ದೊಡ್ಮನೆ ಅಭಿಮಾನಿಗಳು ಶಾಕ್ ಆಗಿದ್ದಾರೆ.


Click it and Unblock the Notifications











