'ಯುವ' ಟ್ರೆಂಡ್ ಜೋರು, ಮನೆ ಮುಂದೆ ಫ್ಯಾನ್ಸ್ ಕಾರುಬಾರು, ಹೊಸ ಪರ್ವ ಶುರು
ಡಾ. ರಾಜ್‌ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್ ಪಾದಾರ್ಪಣೆಗೆ ದಿನಗಣನೆ ಶುರುವಾಗಿದೆ. ಚೊಚ್ಚಲ ಸಿನಿಮಾ 'ಯುವ' ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಪ್ಪು ಬಳಿಕ ಆ ಸ್ಥಾನದಲ್ಲಿ ಯುವರಾಜ್‌ಕುಮಾರ್‌ನ ಅಭಿಮಾನಿಗಳು ನೋಡುತ್ತಿದ್ದಾರೆ. ಹಾಗಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ.
ಸಂತೋಷ್ ಆನಂದ್ ರಾಮ್ ಈ ರೊಮ್ಯಾಂಟಿಕ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದು ಮಾರ್ಚ್ 28ಕ್ಕೆ 'ಯುವ' ಸಿನಿಮಾ ತೆರೆಗೆ ಬರಲಿದೆ. ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಸಂದೀಪ್ ಮಲನಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಸಣ್ಣ ಟೀಸರ್ ಸಮೇತ 'ಯುವ' ಚಿತ್ರದ ಮುಹೂರ್ತ ನೆರವೇರಿಸಿತ್ತು ಚಿತ್ರತಂಡ. ಡಿಸೆಂಬರ್ 22ಕ್ಕೆ ಸಿನಿಮಾ ಬಿಡುಗಡೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಹೊಂಬಾಳೆ ಸಂಸ್ಥೆಯ 'ಸಲಾರ್' ಆ ದಿನ ಬಿಡುಗಡೆ ಆಗಿದ್ದರಿಂದ 'ಯುವ' ರಿಲೀಸ್ ಡೇಟ್ ಮುಂದೂಡಲಾಗಿತ್ತು. ಸದ್ಯ ಸಿನಿಮಾ ಬಿಡುಗಡೆಗೆ 75 ದಿನ ಮಾತ್ರ ಬಾಕಿಯಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಮಾನಿಗಳು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
ಇನ್ನು ಸಾಕಷ್ಟು ಸಂಖ್ಯೆಯ ದೊಡ್ಮನೆ ಅಭಿಮಾನಿಗಳು ಯುವರಾಜ್‌ಕುಮಾರ್ ನೋಡಲು ಸದಾಶಿವನಗರದ ಮನೆ ಮುಂದೆ ಜಮಾಯಿಸಿದ್ದರು. ನೆಚ್ಚಿನ ನಟನನ್ನು ನೋಡಿ ಜೈಕಾರ ಹಾಕಿ, ಫೋಟೊ ಕ್ಲಿಕ್ಕಿಸಿಕೊಂಡು 'ಯುವ' ಸಿನಿಮಾ ನೋಡಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ವೈರಲ್ ಆಗ್ತಿದೆ.
ಬಿಗ್‌ಬಾಸ್ ಖ್ಯಾತಿಯ ನವಾಜ್ ರೀತಿ ಅಭಿಮಾನಿಯೊಬ್ಬರು ಯುವ ಹಾಗೂ ಅಪ್ಪು ಕುರಿತು ಹೇಳಿರುವ ಡೈಲಾಗ್ ವೈರಲ್ ಆಗುತ್ತಿದೆ. 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಯುವರಾಜ್‌ಕುಮಾರ್ ಚಿತ್ರರಂಗಕ್ಕೆ ಬರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಬಳಿಕ ಹೊಂಬಾಳೆ ಸಂಸ್ಥೆ ಚಿತ್ರರಂಗದಲ್ಲಿ 'ಯುವ' ಲಾಂಚಿಂಗ್ ಜವಾಬ್ದಾರಿ ತೆಗೆದುಕೊಂಡಿತ್ತು. ಹೊಸ ಪರ್ವ ಎಂದು ಹೇಳಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 'ಮಿ. & ಮಿ. ರಾಮಾಚಾರಿ', 'ರಾಜಕುಮಾರ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ಸಂತೋಷ್ ಆನಂದ್ ರಾಮ್ ಹೊಸ ಪ್ರಯತ್ನ 'ಯುವ'.

ಚಿತ್ರದಲ್ಲಿ ರಾಘಣ್ಣ ಕಿರಿ ಮಗನನ್ನು ರಗಡ್ ಲುಕ್‌ನಲ್ಲಿ ತೋರಿಸಿವ ಪ್ರಯತ್ನ ನಡೀತಿದೆ. ಟೀಸರ್‌ನಲ್ಲಿದ್ದ "ನೀವು ದಾಟಿರೋದು ಬ್ಲಡ್ ಲೈನ್, ರಕ್ತ ಹರಿದೆ ಹರಿಯುತ್ತದೆ" ಎನ್ನುವ ಡೈಲಾಗ್ ಬಹಳ ಕುತೂಹಲ ಮೂಡಿಸಿದೆ. "ಅವನ್ನ ಹೊಡಿಯೋಕೆ ಅಂತಾನೇ ಒಂದು ಗ್ಯಾಂಗ್ ಕಾಯ್ತಾ ಇತ್ತು. ಅವನ್ನ ತಡಿಯೋಕೂ ಒಂದು ಗ್ಯಾಂಗ್ ಇತ್ತು. ಗ್ಯಾಂಗ್‌ವಾರ್ ಅವನು ಶುರು ಮಾಡಲಿಲ್ಲ. ಆದರೆ ಮುಗುಸ್ತಾನೆ" ಎನ್ನುವ ಪ್ರಕಾಶ್ ರಾಜ್ ಡೈಲಾಗ್ ಕೂಡ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು.
ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್‌ಗಳನ್ನು ನಿರ್ಮಿಸಿ 'ಯುವ' ಚಿತ್ರದ ಸಾಕಷ್ಟು ಸನ್ನಿವೇಶಗಳನ್ನು ಚಿತ್ರೀಕರಣ ನಡೆಸಲಾಗಿದೆ. ಒಂದು ಹಾಡು ಹೊರತುಪಡಿಸಿ ಸಿನಿಮಾ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಯುವ ಡ್ಯಾನ್ಸ್ ಹಾಗೂ ಸ್ಟಂಟ್ಸ್ ಚೆನ್ನಾಗಿ ಮಾಡುತ್ತಾರೆ. ಹಾಗಾಗಿ ಚಿತ್ರದಲ್ಲಿ ಅದಕ್ಕೆ ಹೆಚ್ಚಿನ ಮಹತ್ವ ಇರುವ ಸಾಧ್ಯತೆಯಿದೆ.
ಸಂತೋಷ್ ಆನಂದರ್ ರಾಮ್ ಕಥೆ ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲಿ 'ಯುವ' ಕ್ರೇಜ್ ಜೋರಾಗಿದ್ದು ಯಾವುದೇ ನಟನ ಚೊಚ್ಚಲ ಚಿತ್ರಕ್ಕೆ ಸಿಗದಂತಹ ಓಪನಿಂಗ್ ಈ ಚಿತ್ರಕ್ಕೆ ಸಿಗಲಿದೆ. ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











