Yuva trailer: ಇವ್ನು ಪಕ್ಕಾ ಲೋಕಲ್; ಮಟ್ಟ ಹಾಕಲು ಬಂದವರನ್ನು ಮಣ್ಣುಮುಕ್ಕಿಸುವ 'ಯುವ'
ಅಂತೂ ಇಂತೂ ಅಭಿಮಾನಿಗಳ ಕಾಯುವಿಕೆ ಮುಗಿದಿದೆ. 'ಯುವ' ಟ್ರೈಲರ್ ರಿಲೀಸ್ ಆಗಿದೆ. ಅಣ್ಣಾವ್ರ ಮೊಮ್ಮಗನ ಚೊಚ್ಚಲ ಸಿನಿಮಾ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಂತೋಷ್ ಆನಂದ್ ರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಮುಂದಿನ ವಾರವೇ ಸಿನಿಮಾ ತೆರೆಗಪ್ಪಳಿಸಲಿದೆ.
'ಯುವ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ರಾಘಣ್ಣನ ಕಿರಿಮಗನ ಸಿನಿ ಆರಂಗೇಟ್ರಂ ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಪೋಸ್ಟರ್ಸ್, ಟೀಸರ್ ಹಾಗೂ ಸಾಂಗ್ಸ್‌ನಿಂದ 'ಯುವ' ಕಿಚ್ಚು ಹಚ್ಚಿದ್ದ. ಇದೀಗ ಅಸಲಿ ಆರ್ಭಟ ಶುರುವಾಗಿದೆ.

ಹೀರೊ ಆಗಿ ಯುವ ರಾಜ್‌ಕುಮಾರ್ ಪಾದಾರ್ಪಣೆಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ಸಂತೋಷ್ ಆನಂದ್ ರಾಮ್ ಬಲ ಸಿಕ್ಕಿದೆ. ಹಾಗಾಗಿ ಸೆಟ್ಟೇರುವ ಮುನ್ನವೇ 'ಯುವ' ಅಬ್ಬರ ಶುರುವಾಗಿತ್ತು. ಆದರೆ ಸಿನಿಮಾ ಕಥೆ ಏನು? ಎನ್ನುವ ಬಗ್ಗೆ ಭಾರೀ ಕುತೂಹಲವಿತ್ತು. ಟ್ರೈಲರ್‌ನಲ್ಲಿ ಅದಕ್ಕೆ ತೆರೆ ಬಿದ್ದಿದೆ. ಮಧ್ಯಮ ವರ್ಗದ ಯುವಕನ ಏಳುಬೀಳಿನ ಕಥೆ 'ಯುವ' ಚಿತ್ರದಲ್ಲಿದೆ.
ಮಂಗಳೂರಿನ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ 'ಯುವ' ಸಿಕ್ಕಾಪಟ್ಟೆ ರಗಡ್. ಕಾಲೇಜಿನಲ್ಲಿ ತನ್ನವರಿಗಾಗಿ ಯಾವುದೇ ಹಂತಕ್ಕೆ ಹೋಗುವ ಹುಂಬ. ಈ ಹಾದಿಯಲ್ಲಿ ಒಂದು ಸಮಸ್ಯೆಗೆ ಸಿಲುಕುತ್ತಾನೆ. ತಂದೆ-ತಾಯಿ ದೃಷ್ಟಿಯಲ್ಲಿ ತಪ್ಪಿತಸ್ಥನಾಗಿ ನಿಲ್ಲುವಂತಾಗುತ್ತದೆ. ಬಳಿಕ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲು 'ಯುವ' ನಡೆಸುವ ಹೋರಾಟದ ಕಥೆಯೇ ಸಿನಿಮಾ ಅನ್ನೋದು ಟ್ರೈಲರ್ ನೋಡಿದರೆ ಗೊತ್ತಾಗುತ್ತದೆ.
ಮೊದಲಾರ್ಧ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ಕಥೆ ಚಿತ್ರದಲ್ಲಿದೆ. ಅದೇ ಟ್ರೈಲರ್ ಕೂಡ ಸಾರಿ ಹೇಳುತ್ತಿದೆ. ಬಳಿಕ 'ಯುವ' ಡೆಲಿವರಿ ಬಾಯ್ ಆಗಿ ಕುಟುಂಬದ ಸಮಸ್ಯೆ ಪರಿಹರಿಸಲು ನಿಲ್ಲುತ್ತಾನೆ ಅನ್ನೋದು ಗೊತ್ತಾಗುತ್ತದೆ. ಕಥೆ ಹಳೆಯದ್ದೇ ಅನ್ನಿಸಿದರೂ ಟ್ರೀಟ್‌ಮೆಂಟ್ ಹೊಸತಾಗಿದೆ. ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ 'ಯುವ' ಅಬ್ಬರಿಸಿ ಬೊಬ್ಬರಿದಿದ್ದಾರೆ. ಸ್ಟಂಟ್ಸ್, ಡೈಲಾಗ್ಸ್ ಅಭಿಮಾನಿಗಳು ಸಖಕ್ ಕಿಕ್ ಕೊಡುವಂತಿದೆ.
ಯುವ ರಾಜ್‌ಕುಮಾರ್ ತಂದೆ ಪಾತ್ರದಲ್ಲಿ ಅಚ್ಯುತ್‌ಕುಮಾರ್ ಹಾಗೂ ತಾಯಿ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ಇನ್ನು 'ಯುವ' ಮೆಂಟರ್ ಆಗಿ ಕಿಶೋರ್ ಅವರನ್ನು ನೋಡಬಹುದು. ಬಹಳ ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಯಾವುದೇ ವಿಚಾರದಲ್ಲಿ ರಾಜಿಯಾಗದೇ ಸಿನಿಮಾ ನಿರ್ಮಿಸಿರುವುದು ಪ್ರತಿ ಫ್ರೇಮ್‌ನಲ್ಲೂ ಗೊತ್ತಾಗುತ್ತಿದೆ.
ಕಾಲೇಜ್ ಗ್ಯಾಂಗ್‌ವಾರ್, ತಂದೆ ಮಗನ ಸಂಘರ್ಷ, ಡೆಲಿವರಿ ಹುಡುಗರ ಬವಣೆಯ ವಿಚಾರಗಳನ್ನು ಸೊಗಸಾಗಿ ತೆರೆಗೆ ತಂದಿರುವಂತೆ ಕಾಣುತ್ತಿದೆ. ಮಂಗಳೂರಿನಲ್ಲಿ ಆರಂಭವಾಗುವ ಕಥೆ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗುತ್ತದೆ. ಯುವ ರಾಜ್‌ಕುಮಾರ್ ಸಿಗರೇಟ್ ಹಚ್ಚಿಕೊಳ್ಳುವ ರೀತಿ, ಜಂಪ್ ಮಾಡಿ ಕಾರಿನ ಗಾಜು ಪುಡಿಪುಡಿ ಮಾಡುವ ಸನ್ನಿವೇಶಗಳು ಥಿಯೇಟರ್‌ಗಳಲ್ಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡಲಿದೆ. ಗೋಪಾಲ್ ಕೃಷ್ಣ ದೇಶಪಾಂಡೆ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಗೊತ್ತಾಗುತ್ತಿದೆ.

"ಹೇಳೋರ್ ಕೇಳೋರ್ ಯಾರು ಇಲ್ಲಾ ಅಂತಾ ನೀವ್ ಆಡಿದ್ದೇ ಆಟ ಅನ್ಕೊಂಡ್ರಾ? ಹೆಸ್ರು ನೆನಪಿದ್ಯಲ್ಲ?" ಹಾಗೂ ಗೆಲ್ತಿರೋನ ಮಟ್ಟಹಾಕೋಕ್ಕೆ ಒಂದು ಗುಂಪಿರ್ತೈತೊ ಹಂಗ
ಗೆಲ್ತಾನೇ ಅನ್ನೋನನ್ನು ಮಟ್ಟ ಹಾಕೋಕ್ಕೆ ಒಂದು ಪಂಗಡ ಇರ್ತೈತಿ" ಎನ್ನುವ ಡೈಲಾಗ್‌ಗಳು ಟ್ರೈಲರ್‌ನಲ್ಲಿ ಹೈಲೆಟ್ ಆಗಿದೆ. ಕೆಲ ಡೈಲಾಗ್ಸ್ ಮೇಲ್ನೋಟಕ್ಕೆ ಚಿತ್ರಕ್ಕಾಗಿ ಬರೆದಿದ್ದು ಅನ್ನಿಸಿದರೂ ಯಾರಿಗೋ ಕೌಂಟರ್ ಕೊಡುವಂತಿದೆ ಎನ್ನುವ ಚರ್ಚೆ ಶುರುವಾಗಿದೆ.
ಮಾಸ್ 'ಯುವ' ಆರ್ಭಟದ ನಡುವೆ ಲವ್ ಸ್ಟೋರಿ ಕೊಂಚ ಹಿಂದೆ ಉಳಿದಂತೆ ಕಾಣುತ್ತಿದೆ. ಟ್ರೈಲರ್‌ನಲ್ಲಿ ಸಪ್ತಮಿ ಗೌಡ ಸನ್ನಿವೇಶಗಳು ಕಮ್ಮಿ ಇವೆ. ಸಿನಿಮಾದಲ್ಲಿ ಆಕೆಗೆ ಹೆಚ್ಚು ಅವಕಾಶ ಸಿಕ್ಕಿದ್ಯಾ? ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ನಲ್ಲಿ 'ಯುವ' ಟ್ರೈಲರ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾನೆ. ಮಾರ್ಚ್ 29ಕ್ಕೆ ಸಿನಿಮಾ ಹೇಗಿದೆ ಎನ್ನುವ ಕಂಪ್ಲೀಟ್ ಪಿಕ್ಚರ್ ಸಿಗಲಿದೆ.


Click it and Unblock the Notifications











