'ಎಕ್ಕ' ರಿಲೀಸ್ ಕೊಂಚ ಮುಂದಕ್ಕೆ ಹೋಗುತ್ತೆ"; ನಿರ್ಮಾಪಕ ಜಯಣ್ಣ ಮಾತು
ಯುವರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಜೂನ್ 6ಕ್ಕೆ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಜಯಣ್ಣ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ 'ಎಕ್ಕ'. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ನಟ ಯುವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು.

ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ 'ಎಕ್ಕ' ಚಿತ್ರ ನಿರ್ಮಾಣ ಮಾಡುತ್ತಿವೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಸಂಪದಾ ಹಾಗೂ ಸಂಜನಾ ಆನಂದ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಅತುಲ್ ಕುಲಕರ್ಣಿ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ರಾಜ್ಯೋತ್ಸವ ಸಂಭ್ರಮದಲ್ಲಿ 'ಎಕ್ಕ' ಸಿನಿಮಾ ಘೋಷಣೆಯಾಗಿತ್ತು.
ನವೆಂಬರ್ 28ರಂದು 'ಎಕ್ಕ' ಸಿನಿಮಾ ಮುಹೂರ್ತ ನೆರವೇರಿತ್ತು. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಅದೇ ದಿನ ಜೂನ್ 6ಕ್ಕೆ ಸಿನಿಮಾ ಬಿಡುಗಡೆ ಎಂದು ಚಿತ್ರತಂಡ ಘೋಷಿಸಿತ್ತು. ಕನ್ನಡದಲ್ಲಿ ಸಿನಿಮಾ ಸೆಟ್ಟೇರುವ ದಿನವೇ ಬಿಡುಗಡೆ ದಿನಾಂಕ ಕೂಡ ಘೋಷಣೆ ಮಾಡುವುದು ಅಪರೂಪ. ಹಾಗಾಗಿ ಚಿತ್ರತಂಡದ ಧೈರ್ಯವನ್ನು ಮೆಚ್ಚಿಕೊಳ್ಳಲಾಗಿತ್ತು. ಇನ್ನು ಹೇಳಿದ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಪಕ್ಕಾ ಶೆಡ್ಯೂಲ್ ಪ್ರಕಾರ ಚಿತ್ರೀಕರಣ ಮಾಡುತ್ತಾ ಬರಲಾಗಿತ್ತು.

ಚಿತ್ರೀಕರಣದ ಜೊತೆ ಜೊತೆಗೆ ಎಡಿಟಿಂಗ್ ಸೇರಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ನಡೆಯುತ್ತಿದೆ. ಜೂನ್ 6ಕ್ಕೆ ಇನ್ನು 15 ದಿನ ಮಾತ್ರ ಬಾಕಿಯಿದೆ. ಆದರೆ ಸಿನಿಮಾ ಬಿಡುಗಡೆಗೆ ಸಜ್ಜಾದಂತೆ ಕಾಣುತ್ತಿಲ್ಲ. ಇನ್ನು ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿಲ್ಲ. ಪ್ರಚಾರ ಆರಂಭವಾಗಿಲ್ಲ. ಹಾಗಾಗಿ ಸಿನಿಮಾ ರಿಲೀಸ್ ಮುಂದೂಡುವ ಸುಳಿವು ಸಿಕ್ಕಿತ್ತು. ಇದೀಗ ಈ ಬಗ್ಗೆ ನಿರ್ಮಾಪಕ ಜಯಣ್ಣ ಮಾತನಾಡಿದ್ದಾರೆ.
"ಎಕ್ಕ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಸಾಂಗ್ ಶೂಟಿಂಗ್ ಮಾತ್ರ ಬಾಕಿಯಿದೆ. ಅದು ಕೂಡ ಈ ಶೂಟ್ ಮಾಡುತ್ತಿದ್ದೇವೆ. ಮಳೆಯ ಕಾರಣ ಕೊಂಚ ಚಿತ್ರೀಕರಣಕ್ಕೆ ಹಿನ್ನಡೆ ಆಗಿತ್ತು. ಜೊತೆಗೆ ಗ್ರಾಫಿಕ್ಸ್ ಕೆಲಸ ತಡವಾಗುತ್ತಿದೆ. ಬಹಳ ಮುಂದಕ್ಕೆ ಹೋಗಲ್ಲ, ರಿಲೀಸ್ ಕೊಂಚ ತಡವಾಗಬಹುದು. ಶೂಟಿಂಗ್, ಎಡಿಟಿಂಗ್ ಮುಗಿದಿದೆ, ರೀ-ರೆಕಾರ್ಡಿಂಗ್‌ಗೆ ಹೋಗಬೇಕು. ಒಂದು ಸಾಂಗ್ ಶೂಟಿಂಗ್ ನಡೀತಿದೆ. ಇನ್ನುಳಿದಂತೆ ಬಹುತೇಕ ಸಿನಿಮಾ ಸಿದ್ಧ. ರಿಲೀಸ್ ಡೇಟ್ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡುತ್ತೇವೆ" ಎಂದು ಜಯಣ್ಣ ತಿಳಿಸಿದ್ದಾರೆ.
'ಯುವ' ಚಿತ್ರದ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಬಂದು ಗೆದ್ದಿದ್ದು ಗೊತ್ತೇಯಿದೆ. ಡ್ಯಾನ್ಸ್ ಹಾಗೂ ಸ್ಟಂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಹಾಗಾಗಿ ಯುವರಾಜ್‌ಕುಮಾರ್ 2ನೇ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಪಿಆರ್‌ಕೆ, ಕೆಆರ್‌ಜಿ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಒಟ್ಟಾಗಿ ಈಗಾಗಲೇ ಮತ್ತೊಂದು ಸಿನಿಮಾ ಆರಂಭಿಸಿವೆ. ಈ ಚಿತ್ರದಲ್ಲಿ ಕೂಡ ಯುವ ರಾಜ್‌ಕುಮಾರ್ ಹೀರೊ ಆಗಿ ನಟಿಸುತ್ತಿದ್ದು ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ.
'ಎಕ್ಕ' ಚಿತ್ರದ ವಿಚಾರಕ್ಕೆ ಬಂದರೆ ಇದು ಪಕ್ಕಾ ರಾ ಕಮರ್ಷಿಯಲ್ ಸಿನಿಮಾ. ಮಾಸ್ ಪ್ರೇಕ್ಷರಕನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. 'ರತ್ನನ್ ಪ್ರಪಂಚ' ಸಿನಿಮಾ ಬಳಿಕ 'ಉತ್ತರಕಾಂಡ' ಚಿತ್ರವನ್ನು ರೋಹಿತ್ ಪದಕಿ ಕೈಗೆತ್ತಿಕೊಂಡಿದ್ದರು. ಒಂದಷ್ಟು ದಿನ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಪಕ್ಕಕ್ಕಿಟ್ಟು 'ಎಕ್ಕ' ಚಿತ್ರಕ್ಕೆ ಕೈ ಹಾಕಿದ್ದರು. ಶಿವಾಜಿ ನಗರದಲ್ಲಿ ಚಿತ್ರದ ಟೀಸರ್ ಶೂಟ್ ಮಾಡಲಾಗಿತ್ತು.
ಬೆಂಗಳೂರಿನ ಅಂಡರ್‌ವರ್ಲ್ಡ್ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ. ಯುವ ರಾಜ್‌ಕುಮಾರ್ ಸಿಕ್ಕಾಪಟ್ಟೆ ರಡಗ್ ಲುಕ್‌ನಲ್ಲಿ ನಟಿಸಿದ್ದಾರೆ. 'ಜಾಕಿ' ಚಿತ್ರದಲ್ಲಿ 'ಎಕ್ಕ ರಾಜ ರಾಣಿ' ಎಂಬ ಸಾಂಗ್ ಬಂದು ಹಿಟ್ ಆಗಿದ್ದು ಗೊತ್ತೇಯಿದೆ. ಇನ್ನು 'ಜಾಕಿ' ಚಿತ್ರದ ದೃಶ್ಯವೊಂದರಲ್ಲಿ ಅಪ್ಪು ವಿಭಿನ್ನ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. 'ಎಕ್ಕ' ಟೀಸರ್‌ನಲ್ಲಿ ಯುವ ಕೂಡ ಅಂಥದ್ದೇ ಲುಕ್‌ನಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದ್ದೇವೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಅಭಿಮಾನಿಗಳಿಗೆ ಹೇಳಿಮಾಡಿಸಿದಂತಹ ಸಿನಿಮಾ ಇದು ಎನ್ನುವುದು ಗೊತ್ತಾಗುತ್ತಿದೆ.
ಜೂನ್ ಅಲ್ಲದೇ ಇದ್ದರೂ ಜುಲೈನಲ್ಲಿ 'ಎಕ್ಕ' ಸಿನಿಮಾ ಬಿಡುಗಡೆ ಆಗಲಿದೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗಿತ್ತು. ಈಗ ಕೊಂಚ ಮುಂದೆಕ್ಕೆ ಹೋಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಲೇಟ್ ಆದರೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ಭರವಸೆ ಚಿತ್ರತಂಡಕ್ಕಿದೆ.


Click it and Unblock the Notifications











