ವಿಚ್ಛೇದನ ವಿಚಾರ; ವಿದೇಶದಿಂದ ಫಿಲ್ಮಿಬೀಟ್‌ಗೆ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಫಸ್ಟ್ ರಿಯಾಕ್ಷನ್
ನಟ ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಛೇದನ ವಿಚಾರ ಸಂಚಲನ ಸೃಷ್ಟಿಸಿದೆ. ವಿಚ್ಛೇದನ ಕೋರಿ ಈಗಾಗಲೇ ಯುವ ರಾಜ್‌ಕುಮಾರ್ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈಗಾಗಲೇ ಶ್ರೀದೇವಿ ಅವರಿಗೆ ನೋಟಿಸ್ ನೀಡಲಾಗಿದೆ.
ಶ್ರೀದೇವಿ ಭೈರಪ್ಪ ಸದ್ಯ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದಲ್ಲಿದ್ದಾರೆ. ಆಕೆ ಇನ್ನು ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ ಎನ್ನಲಾಗಿತ್ತು. "ತಮ್ಮ ಪತ್ನಿಯ ವಿರುದ್ದ ಕ್ರೌರ್ಯದ ಆರೋಪ ಮಾಡಿದ್ದಾರೆ. ಆಕೆ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ಆಕೆಯೊಂದಿಗೆ ಬದುಕಲು ಸಾಧ್ಯವಿಲ್ಲ" ಎಂದು ಯುವ ರಾಜ್‌ಕುಮಾರ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದೀಗ ಈ ಬಗ್ಗೆ ಶ್ರೀದೇವಿ ಭೈರಪ್ಪ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ವಿಷಯ ಏನೆಂದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ legal ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನಗೆ ತಲುಪಿಲ್ಲ, ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ" ಎಂದು ತಿಳಿಸಿದ್ದಾರೆ.
"ಈ ಸಮಯದಲ್ಲಿ ನೀವು ನನ್ನ ಮತ್ತು ನನ್ನ ಕುಟುಂಬದ ಗೌಪ್ಯತೆಯನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. 7 ವರ್ಷಗಳ ಕಾಲ ಯುವ ಹಾಗೂ ಶ್ರೀದೇವಿ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಅದ್ಧೂರಿಯಾಗಿ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಅಕ್ಕ ಪಕ್ಕದ ಇಂಡಸ್ಟ್ರಿ ತಾರೆಯರು ಬಂದು ಶುಭ ಕೋರಿದ್ದರು.
ಮೈಸೂರಿನಲ್ಲಿ ಹುಟ್ಟಿ ಬೆಳೆದ ಶ್ರೀದೇವಿ ಭೈರಪ್ಪ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಇನ್ನು ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಸ್ನೇಹಿತರಾಗಿದ್ದರು. ಬಳಿಕ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕಳೆದ ಒಂದು ವರ್ಷದಿಂದ ಗಂಡ - ಹೆಂಡತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಅದು ಈಗ ಡಿವೋರ್ಸ್‌ಗೆ ಅರ್ಜಿ ಸಲ್ಲಿಸುವ ಮಟ್ಟಿಗೆ ಬಂದು ನಿಂತಿದೆ.

ಪತ್ನಿಯಿಂದ ವಿಚ್ಛೇದನ ಕೋರಿ ನಟ ಯುವ ರಾಜ್‌ಕುಮಾರ್ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. MC ಆಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು 6 ತಿಂಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. 4 ವರ್ಷಗಳ ಹಿಂದೆ ಇಬ್ಬರ ಮದುವೆ ನಡೆದಿತ್ತು. ಇನ್ನು ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿಯೊಬ್ಬಳು ಕಾರಣ ಎನ್ನುವ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಯುವ- ಶ್ರೀದೇವಿ ಮದುವೆ ಆಗುವುದು ರಾಘವೇಂದ್ರ ರಾಜ್‌ಕುಮಾರ್ ಅವರಿಗೂ ಇಷ್ಟವಿರಲಿಲ್ಲ, ಆದರೆ ಪುನೀತ್ ಎಲ್ಲರನ್ನು ಒಪ್ಪಿಸಿ ಇಬ್ಬರ ಮದುವೆ ಮಾಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ರಾಘವೇಂದ್ರ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವುದಾಗಿ ಯುವ ರಾಜ್‌ಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಶಿವರಾಜ್‌ಕುಮಾರ್ ದಂಪತಿ ಕೂಡ ಯುವ ರಾಜ್‌ಕುಮಾರ್ ಡಿವೋರ್ಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಯುವ ವಿಚ್ಛೇದನ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಮಾಹಿತಿ ಇಲ್ಲದೇ ಪ್ರತಿಕ್ರಿಯಿಸುವುದು ಸರಿಯಿಲ್ಲ. ಈ ಬಗ್ಗೆ ಮೊಬೈಲ್‌ನಲ್ಲಿ ನೋಡಿ ತಿಳಿದುಕೊಂಡೆ. ಆ ರೀತಿ ಏನಾದರೂ ಆಗಿದ್ದರೆ ಮನಸ್ಸಿಗೆ ಬೇಜಾರಾಗುತ್ತದೆ" ಎಂದಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಸಹ ದನಿ ಗೂಡಿಸಿದ್ದಾರೆ.


Click it and Unblock the Notifications











