ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದ 'ಬನಾರಸ್'
ಮಾಜಿ ಸಚಿವ ಜಮೀರ್ ಅಹ್ಮದ್ ಪುತ್ರ, ಝೈದ್ ಖಾನ್‌ರ ಮೊದಲ ಸಿನಿಮಾ 'ಬನಾರಸ್' ನಿನ್ನೆ (ನವೆಂಬರ್ 04)ರಂದು ಬಿಡುಗಡೆ ಆಗಿದ್ದು, ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ಟೈಮ್ ಲೂಪ್ ಕತೆ ಹೊಂದಿರುವ 'ಬನಾರಸ್' ಸಿನಿಮಾವನ್ನು ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಮೊದಲ ದಿನ ಉತ್ತಮ ಓಪನಿಂಗ್ ಅನ್ನೇ ಪಡೆದುಕೊಂಡಿದೆ. ಕೆಲವೆಡೆ ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಬೆಂಗಳೂರಿನ ಕೆಲವು ಭಾಗಗಳಲ್ಲಿ ಚಿತ್ರಮಂದಿರಗಳಲ್ಲಿ ಹೆಚ್ಚಿನ ಜನರಿಲ್ಲ.
ಸಿನಿಮಾದ ಬಗ್ಗೆ ತುಸು ಮಿಶ್ರ ಪ್ರತಿಕ್ರಿಯೆಗಳಿದ್ದರೂ ಸಹ ಸಿನಿಮಾವು ಮೊದಲ ದಿನ ಉತ್ತಮ ಎನ್ನಬಹುದಾದ ಕಲೆಕ್ಷನ್ ಅನ್ನೇ ಮಾಡಿದೆ. ಶನಿವಾರ-ಭಾನುವಾರ ಇನ್ನಷ್ಟು ಉತ್ತಮ ಕಲೆಕ್ಷನ್ ಮಾಡುವ ಭರವಸೆಯನ್ನೂ ಮೂಡಿಸಿದೆ.

ಮೊದಲ ದಿನ ಮಾಡಿರುವ ಕಲೆಕ್ಷನ್ ಎಷ್ಟು?
ಚಿತ್ರತಂಡದವರ ಅಧಿಕೃತ ಮಾಹಿತಿಯಂತೆ 'ಬನಾರಸ್' ಸಿನಿಮಾವು ಬಿಡುಗಡೆ ಆದ ಮೊದಲ ದಿನ ಸುಮಾರು ಮೂರು ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಹೊಸ ನಟನ ಸಿನಿಮಾ ಒಂದು ಮೊದಲ ದಿನ ಮೂರು ಕೋಟಿ ಕಲೆಕ್ಷನ್ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಮೂರು ಕೋಟಿ ಕಲೆಕ್ಷನ್ ಮಾಡಿರುವ 'ಬನಾರಸ್' ಉತ್ತಮ ಆರಂಭ ಪಡೆದುಕೊಂಡಿದೆ ಎಂದೇ ಹೇಳಬೇಕಾಗುತ್ತದೆ.

ಕೆಲವು ಚಿತ್ರಮಂದಿರಗಳಲ್ಲಿ ಒಳ್ಳೆಯ ಬುಕಿಂಗ್
ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ವಿಮರ್ಶೆಗಳಂತೆ 'ಬನಾರಸ್' ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿಯೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೀರೇಶ್, ಸ್ವಾಗತ್ ಮಾಲ್ ಇನ್ನಿತರೆ ಚಿತ್ರಮಂದಿರಗಳಲ್ಲಿ ಟಿಕೆಟ್‌ಗಳು ಚೆನ್ನಾಗಿ ಬುಕ್ ಆಗುತ್ತಿವೆ. ಆದರೆ ಮಾಗಡಿ ರಸ್ತೆ, ಒರಾಯನ್ ಮಾಲ್ ಇನ್ನಿತರೆ ಚಿತ್ರಮಂದಿರಗಳಲ್ಲಿ ಈ ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಕೆಲವು ಚಿತ್ರಮಂದಿರಗಳಲ್ಲಿ ತೀರ ಹೆಚ್ಚು ಅಲ್ಲದೆ, ತೀರ ಕಡಿಮೆಯೂ ಅಲ್ಲದಂತೆ ಟಿಕೆಟ್ ಮಾರಾಟವಾಗುತ್ತಿರುವುದು ಬುಕ್ ಮೈ ಶೋನಿಂದ ಗೊತ್ತಾಗುತ್ತಿದೆ.

ಒಳ್ಳೆಯ ಕಲೆಕ್ಷನ್ ಮಾಡುವ ಭರವಸೆ
ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿರುವ 'ಬನಾರಸ್' ಶನಿವಾರ ಹಾಗೂ ಭಾನುವಾರಗಳಂದು ಇನ್ನೂ ಒಳ್ಳೆಯ ಕಲೆಕ್ಷನ್ ಮಾಡುವ ಭರವಸೆ ಮೂಡಿಸಿದೆ. ಸಿನಿಮಾದ ಬಗ್ಗೆ ನಿಧಾನವಾಗಿ ಧನಾತ್ಮಕ ಪ್ರತಿಕ್ರಿಯೆ ಬಾಯಿಂದ ಬಾಯಿಗೆ ಹರಡುತ್ತಿದ್ದು, ಇದು ಶನಿವಾರ ಹಾಗೂ ಭಾನುವಾರಗಳಂದು ಚಿತ್ರಮಂದಿರಕ್ಕೆ ಜನರನ್ನು ಕರೆತರುವ ಸಾಧ್ಯತೆ ಇದೆ. ಸಿನಿಮಾಕ್ಕೆ ಮೊದಲ ದಿನ ಸಿಕ್ಕಿರುವ ಜನರ ಪ್ರತಿಕ್ರಿಯೆಯಿಂದ ಖುಷಿಯಾಗಿರುವುದಾಗಿ ಈಗಾಗಲೇ ನಟ ಝೈದ್ ಖಾನ್ ಹಾಗೂ ನಿರ್ದೇಶಕ ಜಯತೀರ್ಥ ಹೇಳಿದ್ದಾರೆ.

ಗಮನ ಸೆಳೆದಿರುವ ಝೈದ್ ಖಾನ್
'ಬನಾರಸ್' ಸಿನಿಮಾವನ್ನು ಬಹುತೇಕ ಕಾಶಿಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ಒಂದು ಪ್ರೇಮಕತೆಯ ಜೊತೆಗೆ ಟೈಮ್ ಲೂಪ್‌ನ ಕತೆಯೂ ಇದೆ. ಸಮಯದ ಹಿಂದೆ ಓಡುವ ನಾಯಕನ ಪಾತ್ರದಲ್ಲಿ ಝೈದ್ ಖಾನ್ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ನಾಯಕಿಯಾಗಿ ಸೊನೆಲ್ ಮೊಂತೆರೊ ನಟಿಸಿದ್ದಾರೆ. ಸಿನಿಮಾದ ನಿರ್ದೇಶನ ಜಯತೀರ್ಥ ಅವರದ್ದು, ಸಂಗೀತ ಅಜನೀಶ್ ಲೋಕನಾಥ್. ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಹೆಚ್ಚಿನ ಬಿಲ್ಡಪ್ ಇಲ್ಲದೆ ಝೈದ್ ಖಾನ್ ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದಾರೆ ಎಂದು ಕೆಲವು ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











