ದೊಡ್ಡ ವಿವಾದ ನೀವೇ ಮಾಡಿದೀರಾ, ನನಗೆ ಅದು ಸಂಬಂಧ ಇಲ್ಲ ; ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಬಗ್ಗೆ ಜಮೀರ್ ಹೇಳಿದ್ದೇನು..?
ಇರುಳು ಕಂಡ ಬಾವಿಗೆ ಹಗಲು ಬಿದ್ದವರಂತೆ, ಅದ್ಯಾರೋ ತೋಡಿದ ಖೆಡ್ಡಾಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟ್ ಸಮೇತ ಬಿದ್ದು, ಇದ್ದ ಇಮೇಜ್‌ನ ಇನ್ನೂ ಡ್ಯಾಮೇಜ್ ಮಾಡಿಕೊಂಡ ದರ್ಶನ್, ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ಸುದ್ದಿ ಹೊರ ಬಂದಾಗ ಅನೇಕರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಡೆ ನೋಡಲು ಶುರು ಮಾಡಿದ್ದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪ್ರಭಾವಳಿಯಿಂದನೇ ಬೆಳಗಾವಿಯತ್ತ ಹೋಗಬೇಕಿದ್ದ ದರ್ಶನ್ ಅವರನ್ನು ಬಳ್ಳಾರಿಯತ್ತ ಕಳಿಸಿದ್ದಾರೆ ಎಂದು ಅನೇಕರು ಮಾತನಾಡಿಕೊಂಡರು. ಜಮೀರ್ ಅಹ್ಮದ್ ಖಾನ್ ಅವರ ಕೃಪಾ ಕಟಾಕ್ಷದಿಂದ ದರ್ಶನ್ ಅವರಿಗೆ ಬಳ್ಳಾರಿಯಲ್ಲಿ ಕೂಡ ರಾಜಾತಿಥ್ಯ ಸಿಗಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಇದು ನಮ್ಮ ವ್ಯವಸ್ಥೆಯೆಂದು ಕೆಂಡವನ್ನೂ ಕಾರಿದ್ದರು. ಅವರೆಲ್ಲರಿಗೆ ಈಗ ಖುದ್ದು ಜಮೀರ್ ಅಹ್ಮದ್ ಖಾನ್ ಅವರೇ ಉತ್ತರವನ್ನು ನೀಡಿದ್ದಾರೆ. ನನಗೂ ಮತ್ತು ದರ್ಶನ್ ಬಳ್ಳಾರಿ ಜೈಲಿಗೆ ಬಂದಿದ್ದಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

ಹೌದು, ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿರುವ ಸಚಿವರಾದ ಜಮೀರ್ ಅಹ್ಮದ್ ಖಾನ್, ನಾನು ಜಿಲ್ಲಾ ಉಸ್ತುವಾರಿ ಸಚಿವ ಮಾತ್ರ, ಡಿಜಿ ಅಲ್ಲ ಎಂದಿದ್ದಾರೆ. ಜೈಲಿನಲ್ಲಿರುವ ಫೋಟೋ ಮಾಧ್ಯಮದಲ್ಲೇ ಬಂದಿದೆ, ನೀವೇ ಅದನ್ನು ದೊಡ್ಡ ವಿವಾದವನ್ನಾಗಿ ಮಾಡಿದ್ದೀರಾ. ಈ ಕಾರಣಕ್ಕೆ ಅವರನ್ನು ಬೇರೆ ಜೈಲಿಗೆ ಅವರನ್ನು ವರ್ಗಾವಣೆ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪೊಲೀಸ್ ಇಲಾಖೆಯೇ ತೀರ್ಮಾನ ಮಾಡಿದೆ ಎಂದು ಕೂಡ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಅಂದ್ಹಾಗೇ ದರ್ಶನ್ ಮತ್ತು ಜಮೀರ್ ಅಹ್ಮದ್ ಖಾನ್ ಅವರ ನಡುವೆ ತುಂಬಾ ಆತ್ಮೀಯ ಸಂಬಂಧ ಇದೆ. ಎಷ್ಟರ ಮಟ್ಟಿಗೆ ಅಂದರೆ ಜಮೀರ್ ಅಹ್ಮದ್ ಖಾನ್ ಅವರ ಮಗ ಝೈದ್ ಖಾನ್ ಕನ್ನಡ ಚಿತ್ರರಂಗಕ್ಕೆ ಬನಾರಸ್ ಚಿತ್ರದ ಮೂಲಕ ನಾಯಕನ ಸ್ಥಾನ ಅಲಂಕರಿಸಿದಾಗ ಇದೇ ದರ್ಶನ್, ಝೈದ್ ಖಾನ್ ಬೆನ್ನ ಹಿಂದೆ ಬಂಡೆ ಗಲ್ಲಿನಂತೆ ನಿಂತುಕೊಂಡಿದ್ದರು. ಬನಾರಸ್ ಚಿತ್ರದ ಪ್ರಚಾರದಲ್ಲಿ ಕೈ ಜೋಡಿಸಿದ್ದರು.

ಝೈದ್ ಒಂದು ರೀತಿ ಬೇತಾಳದ ತರಹ, ಹಿಂದೆ ಅವನಿಗೆ ಚಿತ್ರ ನೋಡುವುದಾಗಿ ಭರವಸೆ ನೀಡಿದ್ದೆ. ಅದೊಂದು ದಿನ ರಾತ್ರಿ ಪೂರ್ತಿ ಕ್ರಾಂತಿ ಚಿತ್ರದ ಸಾಹಸ ಸನ್ನಿವೇಶದಲ್ಲಿ ಭಾಗಿಯಾಗಿ ಆ ನಂತರ ಬೆಳ್ಳಿಗ್ಗೆ ಮನೆಗೆ ಬಂದು ಸ್ನಾನ ಮಾಡಿ, ತಿಂಡಿ ತಿಂದು ಮಲಗೋಣ ಎಂದುಕೊಂಡಿದ್ದೆ, ಅಷ್ಟರಲ್ಲಿ ಝೈದ್ ಬಂದ ಚಿತ್ರ ನೋಡುವುದಾಗಿ ನಾನು ಮಾಡಿದ್ದ ಪ್ರಾಮಿಸ್ ನೆನಪಿಸಿದ, ಇನ್ನೊಂದು ದಿನ ನೋಡೋಣ ಸದ್ಯಕ್ಕೆ ಸುಸ್ತಾಗಿದೆ ಎಂದರೂ ಕೂಡ ಕರೆದುಕೊಂಡು ಹೋದ ಎಂದು ದರ್ಶನ್ ಹೇಳಿದ್ದರು. ಝೈದ್ ದೊಡ್ಮನೆ ಹುಡುಗ, ಶೋಕಿಗಾಗಿ ಸಿನಿಮಾ ಮಾಡಿರಬಹುದು ಅಂತಂದುಕೊಂಡಿದ್ದೆ ಆದರೆ ಝೈದ್ ನಿಜಕ್ಕೂ ಪ್ರತಿಭಾವಂತ ಎಂದೆಲ್ಲ ಹಾಡಿ ಹೊಗಳಿದ್ದರು.
ಇನ್ನೂ ರಂಜಾನ್ ಮತ್ತು ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ಸಂಭ್ರಮವನ್ನು ಇದೇ ದರ್ಶನ್ ಹೆಚ್ಚು ಮಾಡುತ್ತಿದ್ದರು. ನನ್ನ ಮನೆಗೆ ಹಲವಾರು ಹನ ಸಹಾಯ ಕೇಳಿಕೊಂಡು ಬರುತ್ತಾರೆ ಆಗ ನನ್ನ ಕೈಯಲ್ಲಿ ಆಗದೇ ಇರುವುದನ್ನು ನಾನು ಜಮೀರ್ ಭಾಯ್ ಬಳಿ ಮನವಿ ಮಾಡಿಕೊಂಡು ಮಾಡಿಸಿಕೊಡುತ್ತಿದ್ದೆ ಎಂದು ದರ್ಶನ್ ತುಂಬಾ ಅಭಿಮಾನದಿಂದ ಹೇಳುತ್ತಿದ್ದರು.

ಈ ಎಲ್ಲ ಕಾರಣಗಳಿಂದ ಬಳ್ಳಾರಿಗೆ ದರ್ಶನ್ ವರ್ಗಾವಣೆಯಾಗಿರುವ ಹಿಂದೆ ಜಮೀರ್ ಕೈ ಇದೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಈಗ ಜಮೀರ್ ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಖಂಡತುಂಡವಾಗಿ ಹೇಳಿ ಕೈ ತೊಳೆದುಕೊಂಡಿದ್ಧಾರೆ


Click it and Unblock the Notifications











