ನನಗೆ ಯಾರೂ ಕನ್ನಡ ಪಾಠ ಹೇಳಿಕೊಡುವ ಅವಶ್ಯಕತೆ ಇಲ್ಲ; ಡಾಲಿ ಧನಂಜಯ್
ಕನ್ನಡ ನಟ ಧನಂಜಯ್ ಈಗ ಪರಭಾಷಾ ಸಿನಿಮಾಗಳಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಬಣ್ಣ ಹಚ್ಚಿ ಗಮನ ಸೆಳೆಯುತ್ತಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ಡಾಲಿಗೆ ಕೆಲ ಅವಕಾಶಗಳು ಮಿಸ್ ಆಗುತ್ತಿದೆ. ಈ ವಾರ ಧನು ನಟನೆಯ 'ಜೀಬ್ರಾ' ಸಿನಿಮಾ ತೆರೆಗೆ ಬರ್ತಿದೆ.
ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ 'ಜೀಬ್ರಾ' ಸಿನಿಮಾ ನಿರ್ಮಾಣವಾಗಿದೆ. ತೆಲುಗು ನಟ ಸತ್ಯದೇವ್ ಹೀರೊ ಆಗಿ ನಟಿಸಿದ್ದರೆ ಧನಂಜಯ್ ಒಂದು ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿ ನಟಿಸಿದ್ದಾರೆ. ಶ್ರೀಮಂತ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಚಿತ್ರದಲ್ಲಿ ಬಹಳ ಮಹತ್ವ ಇದೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಡಾಲಿ ತಲ್ಲೀನರಾಗಿದ್ದಾರೆ.

ಇತ್ತೀಚೆಗೆ ನಟ ಧನಂಜಯ್ ಮದುವೆ ನಿಶ್ಚಯವಾಗಿದೆ. ವೈದ್ಯೆ ಧನ್ಯತಾ ಜೊತೆ ಶೀಘ್ರದಲ್ಲೇ ಹೊಸ ಬಾಳಿಗೆ ಕಾಲಿಡಲಿದ್ದಾರೆ. 15 ದಿನಗಳಲ್ಲಿ ಡಾಲಿ ನಟನೆಯ ತೆಲುಗಿನ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. ಮತ್ತೊಮ್ಮೆ ಆ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ನಟ ಧನಂಜಯ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ 'ಪುಷ್ಪ'-2 ಟ್ರೈಲರ್ ಲಿಂಕ್ ಶೇರ್ ಮಾಡಿದ್ದಾರೆ. ಆದರೆ ತೆಲುಗು ಟ್ರೈಲರ್ ಲಿಂಕ್ ಹಾಕಿಕೊಂಡಿದ್ದಕ್ಕೆ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದರು. ಈ ಬಗ್ಗೆ 'ಜೀಬ್ರಾ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಧನಂಜಯ್ ಪ್ರತಿಕ್ರಿಯಿಸಿದ್ದಾರೆ. ನನಗೆ ಯಾರೂ ಕನ್ನಡ ಪಾಠ ಮಾಡುವುದು ಬೇಡ ಎಂದಿದ್ದಾರೆ.
"ಪುಷ್ಪ-2 ಚಿತ್ರದ ತೆಲುಗು ಟ್ರೈಲರ್ ಫಸ್ಟ್ ರಿಲೀಸ್ ಆಗಿತ್ತು. ಅದೇ ಲಿಂಕ್ ಸಿಕ್ತು. ಹಾಗಾಗಿ ಅದನ್ನೇ ನಾನು ಮೊದಲು ಶೇರ್ ಮಾಡಿದ್ದೆ. ತುಂಬಾ ಜನ ಕಾಮೆಂಟ್ ಬಾಕ್ಸ್‌ನಲ್ಲಿ ನೀನು ಕನ್ನಡ ಟ್ರೈಲರ್ ಹಾಕಿಲ್ಲ, ನೀನು ಕನ್ನಡದವನಾ? ಎಂದು ಕಾಮೆಂಟ್ ಮಾಡಿದ್ದರು. ನಾನು ಕಾಮೆಂಟ್ಸ್ ಓದಲ್ಲ. ಆದರೆ ಸ್ನೇಹಿತರು ಕಳುಹಿಸಿಕೊಟ್ಟರು. ಹಾಗಾಗಿ ನೋಡಿದೆ ಗೊತ್ತಾಯ್ತು" ಎಂದು ಧನಂಜಯ್ ಹೇಳಿದ್ದಾರೆ.
"ಆ ರೀತಿ ಕಾಮೆಂಟ್ ಮಾಡುವವರಿಗೆ ಒಂದು ಮಾತು ಹೇಳ್ತೀನಿ. 'ಜೀಬ್ರಾ' ಚಿತ್ರದ ಟ್ರೈಲರ್, ಹಾಡು ಎಲ್ಲವೂ ಕನ್ನಡದಲ್ಲಿ ಬಂದಿದೆ. ಬಹಳ ಚೆನ್ನಾಗಿ ನಾನೇ ಕನ್ನಡಕ್ಕೆ ಡಬ್ ಮಾಡಿಸಿದ್ದೀನಿ. ನಮ್ಮ ಟೀಂ ಡಬ್ ಮಾಡಿದೆ. ಕನ್ನಡ ಸಿನಿಮಾ ಎನ್ನುವಷ್ಟು ಚೆನ್ನಾಗಿ ಡಬ್ ಮಾಡಿದ್ದೀವಿ. ನೀನು ನೋಡಬೇಕಾಗಿರುವುದು ಏನು ಮಾಡ್ತಿದ್ದೀವಿ ಎನ್ನುವುದರ ಬಗ್ಗೆ. ಸುಮ್ನೆ ಯಾವ್ದೋ ಸಣ್ಣ ವಿಚಾರಕ್ಕೆ ಕಾಮೆಂಟ್ ಮಾಡೋದಲ್ಲ, ಅದರಿಂದ ಉಪಯೋಗವಿಲ್ಲ" ಎಂದು ಡಾಲಿ ಬೇಸರ ವ್ಯಕ್ತಪಡಿಸಿದ್ದಾರೆ.
"ಡಬ್ಬಿಂಗ್ ಎನ್ನುವುದು ವ್ಯಾಪಾರ. ಒರಿಜಿನಲ್ ಲಾಂಗ್ವೇಜ್‌ನಲ್ಲಿ ಜನ ಜಾಸ್ತಿ ಸಿನಿಮಾ ನೋಡಿದರೆ ಅದೇ ಶೋಗಳನ್ನು ಜಾಸ್ತಿ ಹಾಕ್ತಾರೆ. ಕನ್ನಡದಲ್ಲಿ ಜಾಸ್ತಿ ಜನ ಸಿನಿಮಾ ನೋಡಿದರೆ ಸಹಜವಾಗಿಯೇ ಕನ್ನಡ ಶೋ, ಸ್ಕ್ರೀನ್ಸ್ ಜಾಸ್ತಿ ಹಾಕ್ತಾರೆ. ಕೆಲಸವನ್ನು ನೋಡಿ, ಮಾತಿಂದ, ಕಾಮೆಂಟ್ ಇಂದ ಅಲ್ಲ, ನನಗೆ ಯಾರೂ ಕನ್ನಡ ಪಾಠ ಹೇಳಿಕೊಡುವ ಅವಶ್ಯಕತೆ ಇಲ್ಲ. ನಾನು ಒಳ್ಳೆ ವಿದ್ಯಾರ್ಥಿ, ನನ್ನ ಕನ್ನಡ ಪ್ರೀತಿ ಗೊತ್ತು. ಅದನ್ನು ನಾನು ಯಾರಿಗೂ ತಿಳಿಹೇಳಬೇಕಾಗಿಲ್ಲ. ಈ ಸಿನಿಮಾ ಕನ್ನಡ, ತೆಲುಗಿನಲ್ಲಿ ಬರ್ತಿದೆ. ಹೋಗಿ ನೋಡಿ" ಧನಂಜಯ್ ವಿವರಿಸಿದ್ದಾರೆ.
'ಪುಷ್ಪ'-2 ಚಿತ್ರದಲ್ಲಿ ನಟಿಸಿರುವ ಕನ್ನಡ ನಟ ನೀವು. ನೀವೇ ಕನ್ನಡ ಲಿಂಕ್ ಶೇರ್ ಮಾಡದಿದ್ದರೆ ಹೇಗೆ? ಕನ್ನಡ ಡಬ್ಬಿಂಗ್‌ಗೆ ಹೇಗೆ ಪ್ರೋತ್ಸಾಹ ಸಿಗುತ್ತದೆ? ಎಂದು ಧನಂಜಯ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.


Click it and Unblock the Notifications











