ಟಾಲಿವುಡ್‌ನಲ್ಲೀಗ 2 ಕನ್ನಡ ಚಿತ್ರಗಳ ಆರ್ಭಟ; ತೆಲುಗಿಗೆ ಡಬ್ ಆಗಿ ಓಟಿಟಿಯಲ್ಲಿ ಸ್ಟ್ರೀಮಿಂಗ್
ಪ್ಯಾನ್ ಇಂಡಿಯಾ ಹಾಗೂ ಓಟಿಟಿ ಟ್ರೆಂಡ್ ಶುರುವಾಗಿ ರೀಮೇಕ್ ಸಿನಿಮಾಗಳ ಹಾವಳಿ ಕಮ್ಮಿ ಆಗಿದೆ. ಇದೀಗ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾಗಳು ತೆರೆಗೆ ಬರ್ತಿದೆ. ತೆರೆಗೆ ಬರದಿದ್ದರೂ ಡಬ್ ಮಾಡಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುವ ಪ್ರಯತ್ನ ಧಾರಾಳವಾಗಿ ನಡೆಯುತ್ತಿದೆ.
ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರೋದು ಮಾತ್ರವಲ್ಲ, ಕನ್ನಡದ ಕೆಲ ಸಿನಿಮಾಗಳು ಬೇರೆ ಭಾಷೆಗಳಿಗೆ ಡಬ್ ಆಗಿ ಹೋಗುತ್ತಿವೆ. ಕೆಲ ದಿನಗಳ ಹಿಂದೆ ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾ ಕನ್ನಡ ಮಾತ್ರವಲ್ಲದೇ ಇನ್ನು 4 ಭಾಷೆಗೆ ಡಬ್ ಆಗಿ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಕನ್ನಡದ ಮತ್ತೆರಡು ಸಿನಿಮಾಗಳು ತೆಲುಗಿಗೆ ಡಬ್ ಆಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿವೆ.

ಕನ್ನಡದಲ್ಲಿ ಇತ್ತೀಚೆಗೆ ಸದ್ದು ಮಾಡಿದ ಎರಡು ಸಿನಿಮಾಗಳು ಅಂದ್ರೆ 'ಬ್ಲಿಂಕ್' ಮತ್ತು 'ಶಾಖಾಹಾರಿ'. ತೆರೆಮೇಲೆ ಸಿನಿಮಾ ನೋಡಿದವರು ಮೆಚ್ಚಿಕೊಂಡರೂ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಎರಡೂ ಸಿನಿಮಾಗಳು ಗೆಲ್ಲಲಿಲ್ಲ. ಎಲೆಕ್ಷನ್ ಹಾಗೂ ಐಪಿಎಲ್ ಎಫೆಕ್ಟ್ ಕೂಡ ಎರಡೂ ಚಿತ್ರಗಳ ಮೇಲಾಗಿತ್ತು. ಆದರೆ ಓಟಿಟಿಯಲ್ಲಿ ಎರಡೂ ಸಿನಿಮಾಗಳು ಹಿಟ್ ಆಗಿದ್ದವು.
ಇದೀಗ 'ಬ್ಲಿಂಕ್' ಹಾಗೂ 'ಶಾಖಾಹಾರಿ' ಚಿತ್ರಗಳು ತೆಲುಗಿಗೆ ಡಬ್ ಆಗಿ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಸಿಗ್ತಿದೆ. ಸಿನಿಮಾಗಳನ್ನು ನೋಡಿದ ಕೆಲವರು ಮೆಚ್ಚಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಸೈನ್ಸ್ ಫಿಕ್ಷನ್ ಥ್ರಿಲ್ಲರ್ 'ಬ್ಲಿಂಕ್' ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಹೀರೊ ಆಗಿ ನಟಿಸಿದ್ದಾರೆ. ಮಾರ್ಚ್ 8ಕ್ಕೆ ಸಿನಿಮಾ ಕರ್ನಾಟಕದಲ್ಲಿ ತೆರೆಗಪ್ಪಳಿಸಿತ್ತು.
ನಾಯಕ ಅಪೂರ್ವ(ದೀಕ್ಷಿತ್ ಶೆಟ್ಟಿ) ಟೈಮ್ ಟ್ರಾವೆಲಿಂಗ್‌ನಲ್ಲಿ ಸಿಲುಕಿ ತನ್ನ ಹಿನ್ನೆಲೆ ತಿಳಿದುಕೊಳ್ಳುವುದು. ತನ್ನ ಜೀವನದಲ್ಲಿ ಈ ಹಿಂದೆ ನಡೆದ ಘಟನೆಗಳನ್ನು ಸರಿಮಾಡಿಕೊಳ್ಳುವ ಪ್ರಯತ್ನವನ್ನು ಚಿತ್ರದಲ್ಲಿ ತೋರಿಸಲಾಗಿತ್ತು. ದೀಕ್ಷಿತ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್ ಸೇರಿ ದೊಡ್ಡ ತಾರಾಗಣ 'ಬ್ಲಿಂಕ್' ಚಿತ್ರದಲ್ಲಿದೆ.

ಇನ್ನು ಸಂದೀಪ್ ಸುಂಕದ್ ನಿರ್ದೇಶನದ ಮರ್ಡರ್ ಮಿಸ್ಟರಿ 'ಶಾಖಾಹಾರಿ' ಕೂಡ ಒಂದು ಒಳ್ಳೆಯ ಪ್ರಯತ್ನ. ರಂಗಾಯಣ ರಘು ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಫೆಬ್ರವರಿ 16ಕ್ಕೆ ಈ ಸಿನಿಮಾ ತೆರೆಗೆ ಬಂದಿತ್ತು. ಮಲೆನಾಡ ಭಾಗದ 'ಶಾಖಾಹಾರಿ' ದುರ್ಗ ಪ್ರಸಾದ್ ಹೋಟೆಲ್‌ನಲ್ಲಿ ನಡೆಯುವ ಕಥೆಯಿದು.
ಚಿತ್ರದಲ್ಲಿ ಅಡುಗೆ ಭಟ್ಟ ಮಾಸ್ತಿಕಟ್ಟೆ ಸುಬ್ಬಣ್ಣ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ತನ್ನದೇ ಹೋಟೆಲ್‌ನಲ್ಲಿ ಸುಬ್ಬಣ್ಣನೇ ಬಾಣಸಿಗನಾಗಿಯೂ ಇರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆಗಂತುಕನೊಬ್ಬ ಆ ಹೋಟೆಲ್ ಹೊಕ್ಕುತ್ತಾನೆ. ಆತನ ಹಿನ್ನೆಲೆ ಏನು? ಆತನಿಂದ ಹೇಗೆ ಆ ಹೋಟೆಲ್ ಚಿತ್ರಣವೇ ಬದಲಾಗಿ ಹೋಗುತ್ತದೆ ಎನ್ನುವುದೇ ಇನ್ನುಳಿದ ಸಿನಿಮಾ ಕಥೆ.
'ಬ್ಲಿಂಕ್' ಚಿತ್ರದ ತೆಲುಗು ವರ್ಷನ್‌ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಚಿತ್ರತಂಡ ಖುಷಿಯಾಗಿದೆ. ಮಲಯಾಳಂ, ಹಿಂದಿ ಹಾಗೂ ತಮಿಳಿಗೆ ಸಿನಿಮಾ ಡಬ್ ಮಾಡಲು ಕೆಲಸಗಳು ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ಸಿನಿಮಾ ಇನ್ನಿತರೆ ಭಾಷೆಗಳಲ್ಲಿ ಓಟಿಟಿಯಲ್ಲಿ ವೀಕ್ಷಣೆಗೆ ಸಿಗುತ್ತದೆ ಎಂದು ನಿರ್ಮಾಪಕ ರವಿಚಂದ್ರ ತಿಳಿಸಿದ್ದಾರೆ. ಒಟ್ನಲ್ಲಿ ಕನ್ನಡ ಸಿನಿಮಾಗಳು ಬೇರೆ ಭಾಷೆಗಳಲ್ಲಿ ಸದ್ದು ಮಾಡುತ್ತಿರುವುದು ಉತ್ತಮ ಬೆಳವಣಿಗೆ.


Click it and Unblock the Notifications