ಒಂದಕ್ಕಿಂತ ಒಂದು ಬೆಸ್ಟ್; ಓಟಿಟಿಯಲ್ಲಿರುವ 2023ರ ಈ 3 ಹೊಸ ಮಲಯಾಳಂ ಚಿತ್ರಗಳನ್ನು ನೀವು ನೋಡಲೇಬೇಕು!
ಓಟಿಟಿಯಲ್ಲಿ ವೀಕ್ಷಿಸಲು ಭಾರತದ ಒಳ್ಳೆಯ ಚಿತ್ರಗಳಿದ್ದರೆ ಸೂಚಿಸು ಎಂದು ಸಿನಿಮಾ ಪ್ರೇಮಿಯಾದ ಯಾವುದೇ ಸ್ನೇಹಿತರನ್ನು ಕೇಳಿದರೂ ಸಹ ಅವರು ಹೇಳುವ ಒಂದಷ್ಟು ಚಿತ್ರಗಳ ಪಟ್ಟಿಯಲ್ಲಿ ಕಡ್ಡಾಯವಾಗಿ ಮಲಯಾಳಂ ಚಿತ್ರಗಳು ಇದ್ದೇ ಇರುತ್ತವೆ. ಹೌದು, ಮಲಯಾಳಂ ಚಿತ್ರರಂಗಗಳಲ್ಲಿ ಅಂತಹ ಚಿತ್ರಗಳು ಹೆಚ್ಚಿವೆ. ಕುಟುಂಬ ಸಮೇತ ಕುಳಿತು ನೋಡಬಹುದಾದಂತಹ ಸಸ್ಪೆನ್ಸ್ ಹಾಗೂ ಹಾರರ್ ಥ್ರಿಲ್ಲರ್ ಕಥೆಗಳನ್ನು ಕಟ್ಟಿಕೊಡುವಲ್ಲಿ ಮಲಯಾಳಂ ಚಿತ್ರರಂಗದವರು ನಿಸ್ಸೀಮರು.
ಇಷ್ಟು ವರ್ಷಗಳಲ್ಲಿ ಅಂತಹ ಹಲವಾರು ಚಿತ್ರಗಳನ್ನು ನೀಡುತ್ತಾ ಬಂದಿರುವ ಮಲಯಾಳಂ ಚಿತ್ರರಂಗದಿಂದ ಈ ವರ್ಷದ ಮೊದಲ ಕ್ವಾರ್ಟರ್‌ನಲ್ಲಿಯೂ ಸಹ ನೋಡಲೇಬೇಕಾದ ಚಿತ್ರಗಳು ಬಿಡುಗಡೆಗೊಂಡಿವೆ. ಹೌದು, ಈ ವರ್ಷ ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿಯೂ ಗೆದ್ದಿರುವ ಈ ಚಿತ್ರಗಳು ಸದ್ಯ ಓಟಿಟಿಯಲ್ಲಿ ಲಭ್ಯವಿದ್ದು ಸಸ್ಪೆನ್ಸ್, ಹಾರರ್ ಕಾಮಿಡಿ ಹಾಗೂ ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರು ಈ ಚಿತ್ರಗಳನ್ನು ನೋಡಲೇಬೇಕು ಎಂದೇ ಹೇಳಬಹುದು. ಆ ಚಿತ್ರಗಳು ಯಾವುವು ಹಾಗೂ ಯಾವ ಓಟಿಟಿ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಇರಟ್ಟ
ಫೆಬ್ರವರಿ 3ರಂದು ಬಿಡುಗಡೆಯಾದ ಇರಟ್ಟ ಚಿತ್ರದಲ್ಲಿ ಜೋಜು ಜಾರ್ಜ್ ನಾಯಕನಾಗಿ ಅವಳಿಜವಳಿ ಸೋದರರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಹ ಪೊಲೀಸ್ ಅಧಿಕಾರಿಗಳಾಗಿದ್ದು, ಒಬ್ಬ ನಿಷ್ಠಾವಂತ ಪೊಲೀಸ್ (ಪ್ರಮೋದ್) ಆದರೆ, ಮತ್ತೊಬ್ಬ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಕಿಡಿಗೇಡಿ ಪೊಲೀಸ್ (ವಿನೋದ್) ಪಾತ್ರವಾಗಿದೆ. ಇನ್ನು ಅಣ್ಣ ಹಾಗೂ ತಮ್ಮ ಇಬ್ಬರಿಗೂ ಅಷ್ಟಕ್ಕಷ್ಟೇ. ತಮ್ಮ ಠಾಣೆಯಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿರುವಾಗ ಪೊಲೀಸ್ ಆಗಿ ಅಕ್ರಮ ಎಸಗುತ್ತಾ ವಿಕೃತಿ ಮೆರೆಯುತ್ತಿದ್ದ ವಿನೋದ್‌ಗೆ ಅದೇ ಠಾಣೆಯೊಳಗೆ ಗನ್ ಶಾಟ್ ಬಿದ್ದು ಮೃತಪಟ್ಟಿರುತ್ತಾನೆ.
ಅಲ್ಲಿ ಕೆಲಸ ಮಾಡುತ್ತಿದ್ದ ಉಳಿದ ಎಲ್ಲಾ ಪೊಲೀಸರಿಗೂ ವಿನೋದ್ ಜತೆ ಜಗಳವಾಗಿರುತ್ತದೆ. ಪುಟ್ಟ ಬಾಲಕಿಗೂ, ವಯಸ್ಸಾದ ಹೆಂಗಸಿಗೂ ವ್ಯತ್ಯಾಸವಿಲ್ಲ ಎಂಬಂತೆ ವರ್ತಿಸುತ್ತಿದ್ದ ವಿನೋದ್ ಕೊಂದವರಾರು ಎಂಬುದನ್ನು ಪ್ರಮೋದ್ ಬೆನ್ನತ್ತಿ ಪತ್ತೆ ಹಚ್ಚುವುದೇ ಚಿತ್ರದ ಕಥೆ. ಇನ್ನು ಈ ತನಿಖೆಯಲ್ಲಿ ಕೊನೆಗೆ ವಿನೋದ್ ಸಾವಿಗೆ ಕಾರಣ ಏನೆಂಬುದು ಪ್ರಮೋದ್‌ಗೆ ತಿಳಿದಾಗ ಪ್ರಮೋದ್ ಜತೆಗೆ ಪ್ರೇಕ್ಷಕನಿಗೂ ಸಹ ಒಂದು ನಿಮಿಷ ಶಾಕ್ ಆಗುತ್ತೆ ಹಾಗೂ ಸಸ್ಪೆನ್ಸ್ ಕಥೆಯನ್ನು ಇಷ್ಟರ ಮಟ್ಟಿಗೆ ಕಾಡುವ ಹಾಗೆ ಹೆಣೆಯಬಹುದಾ ಎಂಬ ಆಲೋಚನೆ ಶುರುವಾಗುತ್ತೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ವೀಕ್ಷಿಸುವವರಿಗೆ ಈ ಚಿತ್ರ ಬೆಸ್ಟ್‌ಗಳಲ್ಲಿಯೇ ಬೆಸ್ಟ್ ಎಂದರೆ ತಪ್ಪಾಗಲಾರದು. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

2. ನಾನ್‌ಪಾಕಳ್ ನೇರದು ಮಾಯಕ್ಕಮ್
ಈ ಚಿತ್ರದಲ್ಲಿ ಸಹ ನಾಯಕನದ್ದು ಎರಡು ಪಾತ್ರ. ಆದರೆ ಇಲ್ಲಿ ದ್ವಿಪಾತ್ರವಲ್ಲ ಬದಲಾಗಿ ಎರಡು ಶೇಡ್ ಎನ್ನಬಹುದು. ಮಮ್ಮೂಟ್ಟಿ ಜೇಮ್ಸ್ ಹಾಗೂ ಸುಂದರಂ ಎಂಬ ಪಾತ್ರದಲ್ಲಿ ತುಂಬಾ ಮನೋಜ್ಞವಾಗಿ ನಟಿಸಿದ್ದಾರೆ. ಕೇರಳದ ಜೇಮ್ಸ್ ತನ್ನ ಕುಟುಂಬ ಹಾಗೂ ಅಕ್ಕಪಕ್ಕದ ನಿವಾಸಿಗಳ ಜತೆ ತಮಿಳುನಾಡಿನ ವೆಳಂಕಣ್ಣಿಗೆ ಪ್ರವಾಸ ಕೈಗೊಂಡು ಹಿಂದಿರುಗುವಾಗ ಒಂದು ಜಾಗದಲ್ಲಿ ನಿಲ್ಲಿಸಲು ಹೇಳಿ ಪಕ್ಕದ ಊರಿಗೆ ಹೋಗ್ತಾನೆ. ಅಲ್ಲಿ ಕುಟುಂಬವೊಂದರ ಮನೆಗೆ ಹೋಗಿ ತಾನು ಅದೇ ಮನೆಯ ಮಗ ಎಂಬಂತೆ ನಡೆದುಕೊಳ್ತಾನೆ.
ಮನೆಯಲ್ಲಿನ ಅಜ್ಜ ಹಾಗೂ ಅಜ್ಜಿಯನ್ನು ತನ್ನ ತಂದೆ ಹಾಗೂ ತಾಯಿ ಎಂದು ಕರೆಯುತ್ತಾನೆ. ಅಲ್ಲದೇ ಮನೆಯಲ್ಲಿದ್ದ ಮಹಿಳೆಯನ್ನು ತನ್ನ ಪತ್ನಿ ಹಾಗೂ ಆಕೆಯ ಮಗಳನ್ನು ತನ್ನ ಮಗಳೆಂದು ಕರೆಯುತ್ತಾನೆ. ಕೇರಳದಿಂದ ಬಂದಿದ್ದ ಜೇಮ್ಸ್ ಇಲ್ಲಿ ಸುಂದರಂ ಎಂದು ಹೇಳಿಕೊಂಡು ಅದೇ ಮನೆಯಲ್ಲಿದ್ದು ಸಾವನ್ನಪ್ಪಿದ್ದ ಸುಂದರಂ ರೀತಿಯೇ ಬದುಕಲಾರಂಭಿಸುತ್ತಾನೆ. ಹೀಗೆ ಈತನ ವರ್ತನೆಯಿಂದ ಆ ಕುಟುಂಬಕ್ಕೆ ಹಾಗೂ ತನ್ನ ನಿಜವಾದ ಕುಟುಂಬಗಳೆರಡಕ್ಕೂ ತೊಂದರೆಯಾಗಲಿದ್ದು, ಇದಕ್ಕೆ ಕಾರಣವೇನು ಹಾಗೂ ಬಳಿಕ ಏನೆಲ್ಲಾ ಆಗುತ್ತೆ ಎಂಬುದೇ ಚಿತ್ರ.
ಇಲ್ಲಿ ಕಾರಣಗಳನ್ನು ತಮಿಳಿನ ಕವಿಗಳ ಕವನಗಳ ಮೂಲಕ, ದೃಶ್ಯಗಳು ನಡೆಯುವಾಗ ಕೇಳಿ ಬರುವ ದೂರದರ್ಶನ ಹಾಗೂ ರೇಡಿಯೋಗಳಲ್ಲಿನ ಸಂಭಾಷಣೆಗಳ ಮೂಲಕ ತಿಳಿಸಲಾಗಿದ್ದು, ಕೆಲವೊಮ್ಮೆ ನೆರಳಿನ ಮೂಲಕ ನಿರ್ದೇಶಕರು ಕಾರಣವನ್ನು ಬಹಿರಂಗಪಡಿಸುತ್ತಾರೆ. ಹೀಗಾಗಿ ಇದೊಂದು ವಿಭಿನ್ನ ಸಿನಿಮಾವಾಗಿದ್ದು, ಈ ಅಂಶಗಳನ್ನು ಗಮನಿಸದೇ ಸಾಮಾನ್ಯ ಥ್ರಿಲ್ಲರ್‌ನಂತೆ ಈ ಸಿನಿಮಾವನ್ನು ನೋಡಿದರೆ ಅರ್ಥವೂ ಆಗುವುದಿಲ್ಲ, ಇಷ್ಟವೂ ಆಗುವುದಿಲ್ಲ. ಈ ಚಿತ್ರವೂ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
3. ರೋಮಾಂಚಂ
ರೋಮಾಂಚಂ.. ನಮ್ಮ ಬೆಂಗಳೂರಿನಲ್ಲಿಯೇ ನಡೆದ ನೈಜ ಘಟನೆಗಳ ಮೇಲೆ ಮಾಡಲಾಗಿರುವ ಚಿತ್ರ. 2007ರಲ್ಲಿ ಕೇರಳ ಮೂಲದ ಏಳು ಸ್ನೇಹಿತರು ಬೆಂಗಳೂರಿನಲ್ಲಿ ತಾವು ವಾಸವಿದ್ದ ಮನೆಯಲ್ಲಿ ಊಜಾ ಬೋರ್ಡ್ ಬಳಸಿ ಆತ್ಮವನ್ನು ಕರೆಸುವ ಕೆಟ್ಟ ಪ್ರಯತ್ನಕ್ಕೆ ಮುಂದಾಗ್ತಾರೆ. ಮೊದಲಿಗೆ ವಿಫಲವಾದ ಬಳಿಕ ಗುಂಪಿನ ಸದಸ್ಯನೋರ್ವ ತಾನು ಕೊಟ್ಟ ಐಡಿಯಾ ಫ್ಲಾಪ್ ಆಗಬಾರದು ಎಂಬ ಕಾರಣಕ್ಕೆ ಯಾವುದೋ ಒಂದು ಹೆಸರು ಬರುವ ಹಾಗೆ ನಾಟಕ ಮಾಡುತ್ತಾನೆ. ವಿಪರ್ಯಾಸಕ್ಕೆ ಆತ ಮಾಡಿದ ನಾಟಕವೇ ನಂತರ ನಿಜವಾಗಿಬಿಡುತ್ತದೆ. ಹೀಗೆ ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಬ್ಯಾಚುಲರ್ಸ್ ಪಾಡು ಏನಾಗುತ್ತದೆ ಎಂಬುದೇ ಚಿತ್ರದ ಕಥೆ. ಈ ಚಿತ್ರ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.


Click it and Unblock the Notifications











