ಶಿವಣ್ಣನ ಈ 5 ಹಿಟ್ ಸಿನಿಮಾಗಳನ್ನು ಯಾವ ಓಟಿಟಿಯಲ್ಲಿ ವೀಕ್ಷಿಸಬಹುದು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. 'ಆನಂದ್' ಸಿನಿಮಾ ಮೂಲಕ ಹೀರೋ ಆಗಿ ಚಂದನವನಕ್ಕೆ ಕಾಲಿಟ್ಟ ಶಿವಣ್ಣ ಮತ್ತೆ ಹಿಂತಿರುಗಿ ನೋಡಲಿಲ್ಲ. 125ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ಧಾರೆ. ಇವತ್ತಿಗೂ ಕನ್ನಡದ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಏಳುಬೀಳು ಕಂಡಿರುವ ಶಿವಣ್ಣ ಸೋತಾಗಲೆಲ್ಲಾ ಗೆದ್ದು ಬಂದಿದ್ದಾರೆ. ಕೆಲ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಡಾ. ರಾಜ್, ವಿಷ್ಣು, ಅಂಬಿ ಬಳಿಕ 100 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ತರಹೇವಾರಿ ಪಾತ್ರಗಳಲ್ಲಿ ಬಣ್ಣ ಹಚ್ಚಿ ರಂಜಿಸಿ ಗೆದ್ದವರು ಶಿವಣ್ಣ. ಕ್ಲಾಸ್, ಮಾಸ್ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಹ್ಯಾಟ್ರಿಕ್ ಹೀರೊನ ನೋಡಿ ಪ್ರೇಕ್ಷಕರು ಮೆಚ್ಚಿದ್ದಾರೆ. ಡ್ಯಾನ್ಸ್ ವಿಚಾರದಲ್ಲಿ ಇವತ್ತಿಗೂ ಅದೇ ಗ್ರೇಸ್ ಉಳಿಸಿಕೊಂಡಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ.

ಶಿವಣ್ಣ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಕ್ಕೆ ದಕ್ಷಿಣ ಭಾರತದ ಖ್ಯಾತ ಕಲಾವಿದರು ಅಭಿನಂದನೆ ತಿಳಿಸಿದ್ದಾರೆ. ನಾಗಾರ್ಜುನ, ಕಮಲ್ ಹಾಸನ್ ಸೇರಿದಂತೆ ಹಲವರು ಈ ಬಗ್ಗೆ ವೀಡಿಯೋ ಮಾಡಿ ಮಾತನಾಡಿದ್ದಾರೆ. ಶಿವಣ್ಣ 125ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಅವರ ಟಾಪ್ 5 ಸಿನಿಮಾಗಳನ್ನು ಯಾವ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದು ಬನ್ನಿ ನೋಡೋಣ.
ಆನಂದ್
1986ರಲ್ಲಿ ತೆರೆಗೆ ಬಂದ 'ಆನಂದ್' ಹೀರೊ ಆಗಿ ಶಿವಣ್ಣ ನಟಿಸಿದ ಚೊಚ್ಚಲ ಸಿನಿಮಾ. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಜೋಡಿಯಾಗಿ ಸುಧಾರಾಣಿ ನಟಿಸಿದ್ದರು. ಅವತ್ತಿನ ಕಾಲಕ್ಕೆ ಈ ಸಿನಿಮಾ ಅಂದಾಜು 16 ಲಕ್ಷ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಎರಡೂವರೆ ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಸ್ವತಃ ಶಿವರಾಜ್‌ಕುಮಾರ್ ಹೇಳಿದ್ದರು. ದಾಕ್ಷಾಯಣಿ ಕಂಬೈನ್ಸ ಬ್ಯಾನರ್ ಅಡಿಯಲ್ಲಿ ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ನಿರ್ಮಿಸಿದ್ದರು. ಸನ್ ನೆಕ್ಸ್ಟ್ ಓಟಿಟಿಯಲ್ಲಿ 'ಆನಂದ್' ಸಿನಿಮಾ ವೀಕ್ಷಿಸಬಹುದು.

ಓಂ
ಉಪೇಂದ್ರ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ 'ಓಂ' ಹೊಸ ಇತಿಹಾಸ ನಿರ್ಮಿಸಿದ್ದ ಸಿನಿಮಾ. 500ಕ್ಕೂ ಅಧಿಕ ಬಾರಿ ಈ ಸಿನಿಮಾ ರೀ-ರಿಲೀಸ್ ಆಗಿ ದಾಖಲೆ ಬರೆದಿತ್ತು. ಆ ಚಿತ್ರದಲ್ಲಿ ಶಿವಣ್ಣ ನಟನೆ, ಹಂಸಲೇಖ ಹಾಡುಗಳನ್ನು ಮರೆಯೋಕೆ ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳಿಗೆ ಬುನಾದಿ ಹಾಕಿದ್ದ ಸಿನಿಮಾ 'ಓಂ'. ಶಿವರಾಜ್‌ಕುಮಾರ್ ನಟನೆಯ ಸಾಕಷ್ಟು ಸಿನಿಮಾಗಳ ಸ್ಯಾಟಲೈಟ್ ರೈಟ್ಸ್ ಉದಯ ಟಿವಿ(ಸನ್ ನೆಟ್‌ವರ್ಕ್) ಬಳಿಯಿದೆ. ಹಾಗಾಗಿ ಸನ್ ನೆಕ್ಸ್ಟ್‌ನಲ್ಲೇ 'ಓಂ' ಸಿನಿಮಾ ಕೂಡ ವೀಕ್ಷಣೆಗೆ ಲಭ್ಯವಿದೆ. ಯೂಟ್ಯೂಬ್‌ನಲ್ಲಿ ಕೂಡ ಸಂಪೂರ್ಣ ಸಿನಿಮಾ ವೀಕ್ಷಿಸಬಹುದು.
AK 47
ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ 'AK 47'. ದೇಶಪ್ರೇಮದ ಸಂದೇಶ ಕೂಡ ಚಿತ್ರದಲ್ಲಿತ್ತು. ಹಂಸಲೇಖ ಸಂಗೀತದ ಆಲ್ಬಮ್ ಹಿಟ್ ಆಗಿ ಚಿತ್ರಕ್ಕೆ ಬಲ ತುಂಬಿತ್ತು. ಈ ಚಿತ್ರವನ್ನು ಅಮೇಜಾನ್ ಪ್ರೈಂ ವೀಡಿಯೋದಲ್ಲಿ ನೋಡಬಹುದು.
ಜೋಗಿ
ಪ್ರೇಮ್ ನಿರ್ದೇಶನದಲ್ಲಿ ಬಂದಿದ್ದ 'ಜೋಗಿ' ಚಿತ್ರವನ್ನು ಮರೆಯೋಕೆ ಸಾಧ್ಯವೇ? 'ಓಂ' ಬಳಿಕ ಅಂಥದ್ದೇ ಹೊಸ ಟ್ರೆಂಡ್ ಹುಟ್ಟಾಕ್ಕಿದ್ದ ಸಿನಿಮಾ ಇದು. ಮಾದೇಶ ಹಾಗೂ ರೌಡಿ ಜೋಗಿ ಹೀಗೆ ಎರಡು ಶೇಡ್‌ಗಳಿದ್ದ ಪಾತ್ರದಲ್ಲಿ ಶಿವಣ್ಣ ಕಮಾಲ್ ಮಾಡಿದ್ದರು. ಜೀ ಕನ್ನಡ ವಾಹಿನಿ ಬಳಿಕ ಚಿತ್ರದ ಸ್ಯಾಟಲೈಟ್ ರೈಟ್ಸ್ ಇದೆ. ಆದರೆ ಸಿನಿಮಾ ಜೀ5ನಲ್ಲಿ ಇಲ್ಲ. ಆದರೆ ಯೂಟ್ಯೂಬ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
ಮಫ್ತಿ
ನರ್ತನ್ ನಿರ್ದೇಶನದಲ್ಲಿ ಶಿವಣ್ಣ ಹಾಗೂ ಶ್ರೀಮುರಳಿ ನಟಿಸಿದ್ದ 'ಮಫ್ತಿ' ಸಿನಿಮಾ ಕೂಡ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಕಳೆದ ವರ್ಷ ಇದರ ಪ್ರೀಕ್ವೆಲ್ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಜೀ5ನಲ್ಲಿ ಸಿನಿಮಾ ನೋಡಬಹುದು.


Click it and Unblock the Notifications











