700 ಕೋಟಿ ಲಾಟರಿಯನ್ನು ಎಡಗಾಲಿನಲ್ಲಿ ಒದ್ದ 'ರಾಮಾಯಣ' ನಿರ್ಮಾಪಕ ; 1000 ಕೋಟಿ ಮೇಲೆ ಕಣ್ಣು
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು.
ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ.

ಚಿತ್ರ ಇನ್ನೂ ಚಿತ್ರಮಂದಿರದಲ್ಲಿಯೇ ಇರುತ್ತೆ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ. ಚಿತ್ರಮಂದಿರ ಮತ್ತು ಪ್ರೇಕ್ಷಕರ ನಡುವೆ ಇದ್ದ ಭಾವನಾತ್ಮಕವಾದ ಸಂಬಂಧವನ್ನು ಓಟಿಟಿ ವೇದಿಕೆಗಳು ಕಡಿತಗೊಳಿಸಿವೆ.
ಚಿತ್ರರಂಗದಲ್ಲಿ ಕೂಡ ಅನೇಕರು ಈ ಸತ್ಯವನ್ನು ಒಪ್ಪಿಕೊಂಡು ಕಾಲದ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಾ ಮನರಂಜನೆಯ ಕೀಲಿ ಕೈಯನ್ನು ಓಟಿಟಿಯವರ ಕೈಗೆ ನೀಡಿ ಸುಮ್ಮನಾಗಿದ್ದಾರೆ.
ಹೀಗಿರುವಾಗ ರಾಮಾಯಣದ ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರಾ 700 ಕೋಟಿಯ ಆಫರ್ ನ ಎಡಗಾಲಿನಲ್ಲಿ ಒದ್ದಿದ್ದಾರೆ ಎಂದರೆ ನೀವು ನಂಬ್ತೀರಾ..? ನಂಬ್ಲೇಬೇಕು. ಯಾಕಂದರೆ ಇದೇ ಸತ್ಯ ಎನ್ನುವ ಸುದ್ದಿಯೊಂದು ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ.
ಹೌದು, ಸಾಮಾನ್ಯವಾಗಿ ನಿರ್ಮಾಪಕ ಯಾರೇ ಆಗಿರಲಿ, ಚಿತ್ರದ ಬಿಡುಗಡೆಗೆ ಮುನ್ನ ಸೇಫ್ ಝೋನ್‌ಗೆ ಬರುವ ಪ್ರಯತ್ನ ಮಾಡುತ್ತಾರೆ. ಆಡಿಯೋ.. ಸ್ಯಾಟ್‌ಲೈಟ್.. ಮತ್ತು ಇನ್ನಿತರೆ ಹಕ್ಕುಗಳಿಗೆ ಒಳ್ಳೆಯ ಡಿಮ್ಯಾಂಡ್ ಬಂದರೆ ಮಾರುತ್ತಾರೆ. ಈ ಮೂಲಕ ಬಿಡುಗಡೆಗೆ ಮುನ್ನವೇ ಹಾಕಿದ ಅರ್ಧ ಬಂಡವಾಳವನ್ನು ಮಾರುಕಟ್ಟೆಯಿಂದ ಎತ್ತುತ್ತಾರೆ.

ಆದರೆ, ನಮಿತ್ ಮಲ್ಹೋತ್ರಾ ಅವರದ್ದು ಇದಕ್ಕೆ ತದ್ವಿರುದ್ದವಾದ ವ್ಯಕ್ತಿತ್ವ. ''ರಾಮಾಯಣ ಚಿತ್ರದ 1 ಮತ್ತು 2''. ಇವೆರಡು ಭಾಗದ ಹಕ್ಕು ನಮಗೆ ಕೊಡಿ ಎಂದು ದೊಡ್ಡ ಒಟಿಟಿ ಸಂಸ್ಥೆಯೊಂದು ಬರೋಬ್ಬರಿ ₹700 ಕೋಟಿ ರೂಪಾಯಿ ಆಫರ್ ನೀಡಿದ್ದರು ಕೂಡ ನಮಿತ್ ಮಲ್ಹೋತ್ರಾ ಈ ಡೀಲ್‌ನ ತಿರಸ್ಕರಿಸಿದ್ದಾರೆ ಎಂದು ''ಬಾಲಿವುಡ್ ಹಂಗಾಮ'' ವರದಿ ಮಾಡಿದೆ.
ಓಟಿಟಿ ವೇದಿಕೆಯಿಂದ ₹700 ಅಲ್ಲ ಬದಲಿಗೆ ನಮಿತ್ ಮಲ್ಹೋತ್ರಾ ₹1000 ಕೋಟಿ ದುಡಿಯುವ ಆಸೆಯಲ್ಲಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ನಮಿತ್ ಮಲ್ಹೋತ್ರಾ ಕೇವಲ ಈ ಬಂಪರ್ ಆಫರ್ ನ ರಿಜೆಕ್ಟ್ ಮಾಡಿಲ್ಲ. ಬದಲಿಗೆ ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಿನಿಮಾದ ಮೌಲ್ಯವನ್ನು ಮರು ವ್ಯಾಖ್ಯಾನಿಸುವ ಒಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಬಾಲಿವುಡ್‌ನ ಒಂದು ವರ್ಗ ಸದ್ಯ ಮಾತನಾಡಿಕೊಳ್ಳುತ್ತಿದೆ.
ಇನ್ನು ''ಧುರಂಧರ್'' ಮೊದಲ ಭಾಗ ಮತ್ತು ಎರಡನೇ ಭಾಗದ ಓಟಿಟಿ ವ್ಯಾಪಾರ-ವ್ಯವಹಾರದ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಮೊದಲ ಭಾಗ ಗೆದ್ದ ಹಿನ್ನೆಲೆ ಎರಡನೇ ಭಾಗವನ್ನು ಕೇಳಿದಷ್ಟು ಹಣ ನೀಡಿ ಓಟಿಟಿ ವೇದಿಕೆಗಳು ಖರೀದಿ ಮಾಡಿವೆ. ನಮೀತ್ ಮಲ್ಹೋತ್ರಾ ಈಬಿಸಿನೆಸ್ ಡೀಲ್‌ದಿಂದ ಪ್ರಭಾವಿತರಾದಂತೆ ಕಾಣಿಸುತ್ತಿದೆ. ಇದಕ್ಕೆ ಪೂರಕವಾಗಿ ಸಿನಿಮಾದ ಮೊದಲ ಭಾಗವನ್ನು ಮೊದಲಿಗೆ ಮಾರಾಟ ಮಾಡಿ ಅದು ಯಶಸ್ವಿ ಆದ ಬಳಿಕ ಎರಡನೇ ಭಾಗದ ಮಾರಾಟ ಮಾಡುವ ಯೋಜನೆಯೂ ನಮಿತ್ ಮಲ್ಹೋತ್ರಾ ಅವರಿಗಿದೆ ಎಂದು ''ಬಾಲಿವುಡ್ ಹಂಗಾಮ'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಒಟ್ನಲ್ಲಿ ''ರಾಮಾಯಣ'' ಕೇವಲ ಬಾಲಿವುಡ್ ಸಿನಿಮಾ ಅಲ್ಲ, ಬದಲಿಗೆ ಹಾಲಿವುಡ್ ಸಿನಿಮಾ ಎನ್ನುವ ಮಾತುಗಳನ್ನು ಮೊದಲಿಂದ ಚಿತ್ರತಂಡ ಹೇಳುತ್ತಾ ಬಂದಿದೆ. ಉತ್ತರ ಭಾರತದ ಮಾರುಕಟ್ಟೆಯ ಜೊತೆಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಈ ಚಿತ್ರಕ್ಕೆ ಡಿಮ್ಯಾಂಡ್ ಇದೆ. ಇನ್ನೂ ಸಪ್ತಸಾಗರದಾಚೆ ಕೂಡ ''ರಾಮಾಯಣ'' ಕಣ್ತುಂಬಿಕೊಳ್ಳಲು ಬಹುದೊಡ್ಡ ವರ್ಗ ಕಾದು ಕುಂತಿದೆ. ಇದೆಲ್ಲದರ ಪರಿಣಾಮ ಈಗ ಓಟಿಟಿ ಹಕ್ಕು ₹1,000 ಕೋಟಿ ಗಡಿ ತಲುಪಿದೆ. ಹಾಗೊಂದು ವೇಳೆ ''ರಾಮಾಯಣ''ದ ಹಕ್ಕುಗಳು ₹1,000 ಕೋಟಿಗೆ ಬಿಕರಿಯಾದರೆ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಾಣವಾದಂತೆ ಆಗಲಿದೆ.


Click it and Unblock the Notifications











