ಒಟಿಟಿ ಹೆಸರಲ್ಲಿ 'ಕಾಲವೇ ಮೋಸಗಾರ' ಸಿನಿಮಾ ತಂಡಕ್ಕೆ ಭಾರಿ ಮೋಸ
ಸಣ್ಣ-ಮಧ್ಯಮ ಬಜೆಟ್‌ನ ಸಿನಿಮಾಗಳಿಗೆ ಒಟಿಟಿ ಲಾಭದ ಖಣಜವಾಗಿದೆ. ಒಳ್ಳೆಯ ಮೊತ್ತ ನೀಡಿ ಸಿನಿಮಾಗಳನ್ನು ಖರೀದಿಸುತ್ತಿವೆ ಒಟಿಟಿಗಳು. ಕೆಲವರಂತೂ ಒಟಿಟಿಗಾಗಿಯೇ ಸಿನಿಮಾಗಳನ್ನು ತಯಾರಿಸುತ್ತಿರುವುದೂ ಇದೆ.
ಒಟಿಟಿಗೆ ತಮ್ಮ ಸಿನಿಮಾ ಮಾರಲು ಕೆಲವು ನಿರ್ಮಾಪಕರು, ಸಿನಿಮಾ ತಂಡವರು ಪಡಬಾರದ ಪಾಡುಗಳನ್ನು ಸಹ ಪಡುತ್ತಿದ್ದಾರೆ. ಇದರ ಬೆನ್ನಲ್ಲೆ ಕೆಲವರು ಮಧ್ಯವರ್ತಿಗಳು ಹಾಗೂ ಮೋಸಗಾರರು ಹುಟ್ಟಿಕೊಂಡಿದ್ದು, ಸಿನಿ ತಂಡಗಳಿಗೆ ಮೋಸ ಮಾಡುತ್ತಿವೆ.
ಕಾಲವೇ ಮೋಸಗಾರ ಎಂಬ ಸಿನಿಮಾದ ತಂಡವು, ತಮ್ಮ ಸಿನಿಮಾವನ್ನು ಒಟಿಟಿಗೆ ಮಾರಲು ನಿರ್ಣಯಿಸಿತ್ತು. ಮಿಸ್ಟಿಕ್ ಸ್ಟುಡಿಯೋಸ್‌ನವರು ಎಂದು ಹೇಳಿಕೊಂಡಿದ್ದ ವೆಂಕಟೇಶ್ ಆಚಾರ್ಯ ಎಂಬಾತ, 'ನಾನು ಕಾಲವೇ ಮೋಸಗಾರ' ಸಿನಿಮಾವನ್ನು ಒಟಿಟಿಗೆ ಐದು ಕೋಟಿಗೆ ಮಾರಿಸಿಕೊಡುವುದಾಗಿ ಹೇಳಿದ್ದಾನೆ.

ವೆಂಕಟೇಶ್ ಆಚಾರ್ಯ ಎಂಬಾತನಿಂದ ಮೋಸ
ವೆಂಕಟೇಶ್ ಆಚಾರ್ಯನನ್ನು ನಂಬಿ, ಆತನೇ ಕೇಳಿದಂತೆ ಆತನ ಓಡಾಡಕ್ಕೆ ಇತರ ಖರ್ಚಿಗೆಂದು ನಿರ್ಮಾಪಕರು 1.30 ಲಕ್ಷ ಹಣ ಆತನಿಗೆ ನೀಡಿದ್ದಾರೆ. 45 ದಿನಗಳಲ್ಲಿ ಡೀಲ್ ಮುಗಿದು ನಿಮಗೆ ಐದು ಕೋಟಿ ಬರುತ್ತದೆ ಎಂದು ಹೇಳಿದ್ದ ವೆಂಕಟೇಶ್ ಆ ನಂತರ ನಾಪತ್ತೆ! ಹಣ ಕೊಟ್ಟು 150 ದಿನವಾದರೂ ಸಿನಿಮಾವನ್ನು ಒಟಿಟಿ ಕೊಂಡುಕೊಂಡಿಲ್ಲ.

ಫಿಲ್ಮ್ ಚೇಂಬರ್ ಮೆಟ್ಟಿಲೇರಿರುವ ತಂಡ
ಇದೀಗ ಕಾಲವೇ ಮೋಸಗಾರ ಸಿನಿಮಾದ ತಂಡವು ಫಿಲ್ಮ್ ಚೇಂಬರ್‌ನ ಮೊರೆ ಹೋಗಿದ್ದು, ತಮಗೆ ಮೋಸವಾಗಿದೆ ನ್ಯಾಯ ಕೊಡಿಸಿ ಎಂದು ಕೇಳಿದ್ದಾರೆ. ಅಷ್ಟೆ ಅಲ್ಲದೆ, ಪೊಲೀಸ್ ಠಾಣೆ ಮೆಟ್ಟಿಲೇರಲು ಸಹ ಸಿದ್ಧವಾಗಿದ್ದಾರೆ.

ಐದು ಭಾಷೆಯಲ್ಲಿ ಬಿಡುಗಡೆ ಮಾಡಲು ತಯಾರಿ
ಸಿನಿಮಾವನ್ನು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 'ಲಾಸ್ಟ್ ಪೆಗ್' ಹೆಸರಲ್ಲಿ ಬಿಡುಗಡೆ ಮಾಡಲು ಸಿನಿತಂಡ ಸಜ್ಜಾಗಿತ್ತು. ಕೊರೊನಾ ಕಾರಣಕ್ಕೆ ಒಟಿಟಿಯಲ್ಲಿ ಬಿಡುಗಡೆ ಮಾಡುವ ಯತ್ನದಲ್ಲಿ ಮೋಸಹೋಗಿ ಕೈಸುಟ್ಟುಕೊಂಡಿದೆ.

ತ್ರಿಕೋನ ಪ್ರೇಮ ಕತೆ ಸಿನಿಮಾ
ರಜತ್ ದರ್ಗೋಜಿ ಸಾಲಂಕಿ ನಿರ್ಮಿಸಿರುವ ಈ ಸಿನಿಮಾವನ್ನು ಸಂಜಯ್ ವದತ್ ಎಂಬುವರು ನಿರ್ದೇಶಿಸಿದ್ದಾರೆ. ಭರತ್ ಸಾಗರ್, ಯಶಸ್ವಿನಿ ರವೀಂದ್ರ, ಶಂಕರ್ ಮೂರ್ತಿ ಮುಖ್ಯಪಾತ್ರಗಳಲ್ಲಿದ್ದಾರೆ.


Click it and Unblock the Notifications











