9 ತಿಂಗಳ ನಂತರ ಓಟಿಟಿಗೆ ಬಂದ 'ಸಿತಾರೆ ಜಮೀನ್ ಪರ್' ; ಥಿಯೇಟರ್, ಯೂಟ್ಯೂಬ್ ಈಗ ಓಟಿಟಿ - ಬುದ್ದಿವಂತ ಆಮಿರ್ ಖಾನ್ ಮಾಲಾಮಾಲ್
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ.
ಚಿತ್ರ ಇನ್ನೂ ಚಿತ್ರಮಂದಿರದಲ್ಲಿಯೇ ಇರುತ್ತೆ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ. ಚಿತ್ರಮಂದಿರ ಮತ್ತು ಪ್ರೇಕ್ಷಕರ ನಡುವೆ ಇದ್ದ ಭಾವನಾತ್ಮಕವಾದ ಸಂಬಂಧವನ್ನು ಓಟಿಟಿ ವೇದಿಕೆಗಳು ಕಡಿತಗೊಳಿಸಿವೆ. ಚಿತ್ರರಂಗದಲ್ಲಿ ಕೂಡ ಅನೇಕರು ಈ ಸತ್ಯವನ್ನು ಒಪ್ಪಿಕೊಂಡು ಕಾಲದ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಾ ಮನರಂಜನೆಯ ಕೀಲಿ ಕೈಯನ್ನು ಓಟಿಟಿಯವರ ಕೈಗೆ ನೀಡಿ ಸುಮ್ಮನಾಗಿದ್ದಾರೆ.

ಆದರೆ, ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಇದಕ್ಕೆ ತದ್ವಿರುದ್ಧ. ಇದಕ್ಕೆ ಕೈಗನ್ನಡಿ ಎಂಬಂತೆ ಆಮಿರ್ ಖಾನ್ ಕಳೆದ ವರ್ಷ ತಮ್ಮ ''ಸಿತಾರೆ ಜಮೀನ್ ಪರ್'' ಚಿತ್ರವನ್ನು ಓಟಿಟಿಯವರ ಮಡಿಲಿಗೆ ಹಾಕಿರಲಿಲ್ಲ. ಬದಲಿಗೆ ಓಟಿಟಿಯಲ್ಲಿ ತಮ್ಮ ಚಿತ್ರವನ್ನು ಮಾಡದಿರಲು ನಿರ್ಧಾರ ಮಾಡಿದ್ದರು. ಚಿತ್ರವನ್ನು ಪ್ರೇಕ್ಷಕರು ಮೊದಲಿನಂತೆ ಚಿತ್ರಮಂದಿರದಲ್ಲಿಯೇ ನೋಡಬೇಕೆನ್ನುವುದು ನನ್ನ ಆಸೆ ಎಂದು ಹೇಳಿದ್ದರು.
ಆಮಿರ್ ಖಾನ್ ಅವರ ಈ ನಿರ್ಧಾರ ಹಲವರನ್ನು ಅಚ್ಚರಿಗೆ ದೂಡಿತ್ತು. ಯಾಕೆಂದರೆ, ಆಮಿರ್ ಖಾನ್ ಒಬ್ಬರೇ ಈ ಚಿತ್ರಕ್ಕೆ ಹಣ ಹೂಡಿರಲಿಲ್ಲ. ಬದಲಿಗೆ ಓಟಿಟಿ ಹಕ್ಕಿನ ಆಸೆ ತೋರಿಸಿ ''ಸೋನಿ ಲಿವ್'' ಸಂಸ್ಥೆಯಿಂದ ಹಣ ಹೂಡಿಸಿದ್ದರು. ಆಮಿರ್ ಖಾನ್ ನಿರ್ಮಾಣದಲ್ಲಿ ಶೇಕಡಾ 75 % ಹಣ ಹೂಡಿದ್ದರೆ ''ಸೋನಿ ಲಿವ್'' 25 % ಹಣ ಹೂಡಿಕೆ ಮಾಡಿತ್ತು.
ಆದರೆ, ಆ ನಂತರ ಆಮಿರ್ ತಮ್ಮ ನಿರ್ಧಾರ ಬದಲಿಸಿದರು. ಯಾವುದೇ ಕಾರಣಕ್ಕೂ ನಾನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ, ಬದಲಿಗೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದರು. 8 ವಾರದ ಓಟಿಟಿ ನಿಯಮದಿಂದ ತಪ್ಪಿಸಿಕೊಳ್ಳಲು ಮತ್ತು ಬೇರೆಯವರನ್ನು ಪಾರು ಮಾಡಲು ಈ ಹಾದಿ ತುಳಿದಿರುವುದಾಗಿ ಹೇಳಿದಿದ್ದರು.
ಆಶ್ಚರ್ಯ ಅಂದರೆ ಹೀಗೆ ಹೇಳಿದ್ದ ಆಮಿರ್ ಖಾನ್ ಖುದ್ದು ಆರು ವಾರದಲ್ಲಿಯೇ ತಮ್ಮ ''ಸಿತಾರೆ ಜಮೀನ್ ಪರ್'' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಆಮಿರ್ ಖಾನ್ ಕೇವಲ ನಿರ್ಮಾಪಕ, ನಿರ್ದೇಶಕ ಮಾತ್ರ ಅಲ್ಲ. ಬುದ್ದಿವಂತ ವ್ಯಾಪಾರಸ್ಥ ಕೂಡ ಹೌದು.

ಹೀಗಾಗಿಯೇ ಯೂಟ್ಯೂಬ್‌ನಲ್ಲಿ ತಮ್ಮ ಚಿತ್ರವನ್ನು ಅಪ್ಲೋಡ್ ಮಾಡಿದ್ದ ಆಮಿರ್ ಖಾನ್ ತಮ್ಮ ಚಿತ್ರವನ್ನು ನೋಡಬೇಕಂದರೆ 100 ರೂಪಾಯಿಯನ್ನು ಪಾವತಿ ಮಾಡಬೇಕು ಎಂಬ ಷರತ್ತನ್ನು ಪ್ರೇಕ್ಷಕರ ಮುಂದಿಟ್ಟರು. ಪೇ-ಪರ್-ವ್ಯೂ ಮಾದರಿಯಲ್ಲಿ ಬಿಡುಗಡೆ ಮಾಡಿದರು.
ಇಷ್ಟೇ ಅಲ್ಲ ''ಸೋನಿ'' ಜೊತೆ ಒಪ್ಪಂದ ಮುರಿದುಕೊಂಡ ಹಿನ್ನೆಲೆ ಅವರಿಗೆ ಮರಳಿ ನೀಡಬೇಕಿದ್ದ 25-30 ಕೋಟಿ ಹಣವನ್ನು ಕೂಡ ಮರಳಿ ನೀಡಿದರು. ಇಂಥಾ ಆಮಿರ್ ಖಾನ್ ಯೂಟ್ಯೂಬ್‌ದಿಂದ ಗಳಿಸಿದ್ದೆಷ್ಟು ಎಂದು ಖುದ್ದು ಅವರಿಗೆ ಗೊತ್ತಾದರೂ ಚಿತ್ರಮಂದಿರದಲ್ಲಿಯೇ ಆಮಿರ್ ಹಾಕಿದ ಬಂಡವಾಳದ ಮೇಲೆ ಲಾಭ ಮಾಡಿದ್ದರು.
₹125 ರಿಂದ ₹135 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ''ಸಿತಾರೆ ಜಮೀನ್ ಪರ್'' ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿಯೇ ₹167.46 ಕೋಟಿ ಹಣ ದೋಚಿತ್ತು. ಇನ್ನೂ ಹೊರದೇಶದಲ್ಲಿ ₹66.75 ಕೋಟಿಯನ್ನು ಈ ಚಿತ್ರ ಗಳಿಸಿತ್ತು. ಈ ಮೂಲಕ ₹234.21 ಕೋಟಿಯನ್ನು ಆಮಿರ್ ಖಾನ್ ಗಳಿಸಿದ್ದರು.
ಈಗ ಚಿತ್ರ ಬಿಡುಗಡೆಯಾಗಿ 9 ತಿಂಗಳ ನಂತರ ಆಮಿರ್ ಖಾನ್ ಓಟಿಟಿಯಲ್ಲಿ ತಮ್ಮ ''ಸಿತಾರೆ ಜಮೀನ್ ಪರ್'' ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಅದು ಕೂಡ ಬೇರೆ ವೇದಿಕೆಯಲ್ಲಿ ಅಲ್ಲ. ಬದಲಿಗೆ ''ಸೋನಿ ಲಿವ್''ನಲ್ಲಿಯೇ ಎನ್ನುವುದೇ ಮತ್ತೊಂದು ವಿಶೇಷ. ಈ ಮೂಲಕ ಈ ಹಿಂದೆ ''ಸೋನಿ ಲಿವ್''ಗೆ ತಾವೇ ಹಣ ನೀಡಿ ಆ ಹಣವನ್ನು ಮತ್ತೆ ಈಗ ಅವರಿಂದಲೇ ಪಡೆದಿದ್ದಾರೆ ಆಮಿರ್ ಖಾನ್.

ಈ ಒಪ್ಪಂದಕ್ಕೆ ಮತ್ತೆ ''ಸೋನಿ ಲಿವ್'' ಒಪ್ಪಿಕೊಂಡಿದ್ದೇಕೆ..? ಒಪ್ಪಿಕೊಂಡಿದ್ಹೇಗೆ..? ಆಮಿರ್ ಖಾನ್ ಅವರಿಗೆ ಎಷ್ಟು ಹಣ ನೀಡಿದೆ ಎನ್ನುವುದು ಸದ್ಯ ನಿಗೂಢವಾಗಿದ್ದರು ಕೂಡ ಆಗಲೇ ಹೇಳಿದಂತೆ ಆಮಿರ್ ಖಾನ್ ವ್ಯಾಪಾರ ಚತುರ. ಈ ಹಿನ್ನೆಲೆ ಕಡಿಮೆ ಹಣಕ್ಕಂತೂ ಆಮಿರ್ ತಮ್ಮ ಚಿತ್ರವನ್ನು ಮಾರಲು ಸಾಧ್ಯ ಇಲ್ಲ ಎನ್ನುವ ಮಾತು ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ.
ಅಂದ್ಹಾಗೇ ''ಸಿತಾರೆ ಜಮೀನ್ ಪರ್'' ಬಿಡುಗಡೆಯಾಗಿ 9 ತಿಂಗಳಾಗಿವೆ. 9 ತಿಂಗಳ ನಂತರ ಓಟಿಟಿಗೆ ತಮ್ಮ ಚಿತ್ರದ ಹಕ್ಕನ್ನು ಈಗ ಮಾರಿರುವ ಆಮಿರ್ ಖಾನ್ ಇನ್ನೂ ತಮ್ಮ ಚಿತ್ರದ ಸ್ಯಾಟ್‌ಲೈಟ್ ಹಕ್ಕುಗಳನ್ನು ವಾಹಿನಿಯವರಿಗೆ ಮಾರಿಲ್ಲ. ಈ ಹಿನ್ನೆಲೆ ಸ್ಯಾಟ್ ಲೈಟ್ ಹಕ್ಕುಗಳಿಂದ ಆಮಿರ್ ಖಾನ್ ಎಷ್ಟು ಹಣ ಗಳಿಸಬಹುದು ಎನ್ನುವ ಕುತೂಹಲ ಸದ್ಯ ಹಲವರಲ್ಲಿದೆ.
ಇನ್ನುಳಿದಂತೆ ಓಟಿಟಿಗೆ ತಮ್ಮ ಚಿತ್ರವನ್ನು ನೀಡುವುದಿಲ್ಲ ಎಂದು ಹೇಳಿ ಈಗ ಆಮಿರ್ ಖಾನ್ ಯುಟರ್ನ್ ತೆಗೆದುಕೊಂಡ ಹಿನ್ನೆಲೆ ಹಲವರು ಆಮಿರ್ ಖಾನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಮೊದಲು ಚಿತ್ರಮಂದಿರ ಮತ್ತು ಯೂಟ್ಯೂಬ್ ಪೇ-ಪರ್-ವ್ಯೂ ಮೂಲಕ ಬರುವ ಲಾಭವನ್ನೆಲ್ಲಾ ಪಡೆದ ಆಮಿರ್ ಈಗ ಓಟಿಟಿ ಮೂಲಕ ಮತ್ತಷ್ಟು ಪ್ರೇಕ್ಷಕ ವರ್ಗವನ್ನು ತಲುಪಲು ಮುಂದಾಗಿದ್ದಾರೆ. ಈ ಮೂಲಕ ಹಾಲಿನ ಮೇಲಿನ ಕೆನೆಯನ್ನು ಮೊದಲು ತೆಗೆದು, ನಂತರ ಇಡೀ ಮಾರುಕಟ್ಟೆಗೆ ಹಾಲನ್ನು ಹಂಚುತ್ತಿದ್ದಾರೆ.


Click it and Unblock the Notifications











