ಅಮೆಜಾನ್ ಪ್ರೈಂಗೆ ಬಂತು 'ಆಕ್ಟ್-1978': ಮತ್ತೆ ಹರಸಿ ಎಂದರು ಮಂಸೋರೆ
ಕೋವಿಡ್ ಕಾರಣಕ್ಕೆ ಚಿತ್ರಮಂದಿರಗಳೆಲ್ಲ ಬಂದ್ ಆಗಿ ಸುಮಾರು ಹತ್ತು ತಿಂಗಳ ಬಳಿಕ ಕೆಲವು ನಿಯಮಗಳೊಂದಿಗೆ ಪುನಃ ತೆರೆದಾಗ ಬಹುತೇಕ ನಿರ್ಮಾಪಕರು, ನಟರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕಿದರು. ಆದರೆ ಆ ಸಮಯದಲ್ಲಿ ತಮ್ಮ ಸಿನಿಮಾದ ಬಗ್ಗೆ ನಂಬಿಕೆ ಇಟ್ಟು ಬಿಡುಗಡೆ ಮಾಡಿದ್ದು 'ಆಕ್ಟ್-1978' ಸಿನಿಮಾ ತಂಡ.
2020 ರ ನವೆಂಬರ್ 20 ರಂದು ಚಿತ್ರಮಂದಿರಗಳಲ್ಲಿ 'ಆಕ್ಟ್-1978' ಸಿನಿಮಾ ಬಿಡುಗಡೆ ಆಯಿತು. ಮಂಸೋರೆ ನಿರ್ದೇಶನದ ಈ ಸಿನಿಮಾ ಅದ್ಭುತವಾದ ವಿಮರ್ಶೆಗಳನ್ನು ಗಳಿಸಿ ಕೋವಿಡ್‌ನ ಬಿಗುವಿನ ಪರಿಸ್ಥಿತಿಯಲ್ಲಿಯೂ ಜನರನ್ನು ಸಿನಿಮಾ ಮಂದಿರಕ್ಕೆ ಕರೆತಂದಿತು.
ಇದೀಗ ಇದೇ ಸಿನಿಮಾ ಒಟಿಟಿ ಫ್ಲ್ಯಾಟ್‌ಫಾರ್ಮ್‌ಗೆ ಬಂದಿದೆ. ಅಮೆಜಾನ್ ಪ್ರೈಂ ವಿಡಿಯೋಸ್ ನಲ್ಲಿ ಆಕ್ಟ್-1978 ಸಿನಿಮಾ ಬಿಡುಗಡೆ ಆಗಿದೆ. ಭಾರತ, ಯುಕೆ, ಅಮೆರಿಕಗಳಲ್ಲಿ ಅಮೆಜಾನ್ ಪ್ರೈಂ ವಿಡಿಯೋಸ್ ನಲ್ಲಿ 'ಆಕ್ಟ್-1978' ಸಿನಿಮಾವನ್ನು ನೋಡಬಹುದಾಗಿದೆ.

ಭ್ರಷ್ಟ ವ್ಯವಸ್ಥೆಯಿಂದ ರೋಸಿಹೋಗುವ ಹೆಣ್ಣೊಬ್ಬಳು ತನ್ನ ಹಕ್ಕು ಪಡೆದುಕೊಳ್ಳಲು ಅಂತಿಮವಾಗಿ ಹಿಂಸೆಯ ದಾರಿ ಹಿಡಿದು ತನ್ನನ್ನೇ ಬಲಿಕೊಟ್ಟುಕೊಳ್ಳುವ ಮೂಲಕ ಭ್ರಷ್ಟರ ಕಣ್ಣುತೆರೆಸಲು ಕಾರಣವಾಗುತ್ತಾಳೆ ಎಂಬುದು ಸಿನಿಮಾದ ಕತೆ.
ಯಜ್ಞಾ ಶೆಟ್ಟಿ, ಬಿ ಸುರೇಶ್, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಪ್ರಮೋದ್ ಶೆಟ್ಟಿ, ಸುಧಾ ಬೆಳವಾಡಿ ಇನ್ನೂ ಹಲವರು ನಟಿಸಿರುವ ಈ ಸಿನಿಮಾವನ್ನು ಮಂಸೋರೆ ನಿರ್ದೇಶಿಸಿದ್ದು, ಸಿನಿಮಾವನ್ನು ನಿರ್ಮಾಣ ಮಾಡಿರುವುದು ದೇವರಾಜ್ ಆರ್.


Click it and Unblock the Notifications











