ಪುನೀತ್ ರಾಜ್‌ಕುಮಾರ್ ಅನ್ನು ಹಿರಿಯ ನಟರು ನೆನಪಿಸಿಕೊಂಡಿದ್ದು ಹೀಗೆ
ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಅವರ ಅಭಿಮಾನಿಗಳು ಮಾತ್ರವಲ್ಲ, ಅವರ ಸಹನಟರೂ ಸಹ ಪುನೀತ್ ಅವರನ್ನು ಇನ್ನಿಲ್ಲದಂತೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಪುನೀತ್ ಅಗಲಿ ವರ್ಷವಾಗಿರುವ ಹಿನ್ನೆಲೆಯಲ್ಲಿ ವೂಟ್ ಒಟಿಟಿಯಲ್ಲಿ ಪುನೀತ್ ನಮನದ ಅಂಗವಾಗಿ ಅವರ ನಟನೆಯ ಕೆಲವು ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದ್ದು, ಅಪ್ಪುವಿಗೆ ಅವರದ್ದೇ ಸಿನಿಮಾಗಳ ಮೂಲಕ ಗೌರವ ಸಲ್ಲಿಸುವ ವೂಟ್‌ನ ಈ ನಿರ್ಣಯವನ್ನು ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ನಟಿಸಿರುವ ಹಿರಿಯ ನಟರು ಮೆಚ್ಚಿದ್ದು, ಪುನೀತ್ ಅವರೊಟ್ಟಿಗಿನ ತಮ್ಮ ಒಡನಾಟ ನೆನಪಿಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವಿನಾಶ್, ಪುನೀತ್ ಅವರೊಬ್ಬ 'ಇಂಟೆಲಿಜೆಂಟ್ ನಟ' ಎಂದು ಬಣ್ಣಿಸಿದ್ದು, ಹಿರಿಯ ನಟರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ನೆನಪು ಮಾಡಿಕೊಂಡಿದ್ದಾರೆ.

ಅಪ್ಪುವನ್ನು ಅವಿನಾಶ್ ನೆನಪಿಸಿಕೊಂಡಿದ್ದು ಹೀಗೆ
'ಆಕಾಶ್' ಸಿನಿಮಾದ ಚಿತ್ರೀಕರಣದ ಸಮಯದ ಘಟನೆಯೊಂದನ್ನು ಅವಿನಾಶ್ ನೆನಪಿಸಿಕೊಂಡಿದ್ದು, ''ಬೆಂಗಳೂರಿನ ಜೆ.ಪಿ. ನಗರದ ಒಂದು ಮನೆಯಲ್ಲಿಯೇ ಆಕಾಶ್ ಸಿನೆಮಾದ ಚಿತ್ರೀಕರಣ ಹಲವು ದಿನಗಳ ಕಾಲ ನಡೆಯಿತು. ಆ ಸಿನೆಮಾದಲ್ಲಿ ಮನೆಯಲ್ಲಿಯೇ ಒಂದು ಫೈಟ್ ಸೀನ್ ಇದೆ. ಅದರ ಚಿತ್ರೀಕರಣದ ಸಮಯ. ರಾಮ್ ಶೆಟ್ಟಿ ಫೈಟ್ ಮಾಸ್ಟರ್ ಆಗಿದ್ದರು. ಮಹಡಿ ಮೇಲಿಂದ ಕೆಳಗೆ ಬೆಡ್ ಮೇಲೆ ಬೀಳುವ ಒಂದು ಸನ್ನಿವೇಶ ಇತ್ತು. ಆಗ ಅಪ್ಪು ನನ್ನನ್ನು ಕರೆದು, 'ಅವಿನಾಶ್ ಅವರೇ ದಯವಿಟ್ಟು ನೀವು ಹಾಗೆಲ್ಲ ಜಂಪ್ ಮಾಡೋಕೆ ಹೋಗ್ಬೇಡಿ. ರಿಸ್ಕ್ ತಗೋಬೇಡಿ. ಆಗಲ್ಲ ಅಂತ ಹೇಳಿ' ಅಂತ ಹೇಳಿದ್ರು. ನಾನು ಹಾಗೆಯೇ ಹೇಳಿದ್ದೆ. ನಂತರ ಆ ದೃಶ್ಯವನ್ನು ಕಿಶೋರ್ ಮಾಡಿದ್ರು. ಅಪ್ಪುವಿಗೆ ಹಿರಿಯ ಕಲಾವಿದರ ಬಗ್ಗೆ ಇದ್ದ ಗೌರವ, ಕಾಳಜಿ ಹಾಗಿತ್ತು'' ಎಂದಿದ್ದಾರೆ.

ಆತ್ಮೀಯ ಒಡನಾಟ ಹೊಂದಿದ್ದ ಸುಂದರ್ ರಾಜು
ಅಪ್ಪು ಜೊತೆ ಆತ್ಮೀಯ ಒಡನಾಟ ಹೊಂದಿದ್ದ ಹಿರಿಯ ನಟ ಸುಂದರ್ ರಾಜು ಮಾತನಾಡಿ, '''ಅಪ್ಪು' ಸಿನೆಮಾ ಶೂಟಿಂಗ್‌ಗೆ ಹೋಗಿದ್ದಾಗ ಸೆಟ್‌ನಲ್ಲಿ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ನನ್ನ ಕಣ್ಣುಮುಚ್ಚಿದರು. ಯಾರು ಎಂದು ತಿರುಗಿ ನೋಡಿದರೆ ಅಪ್ಪು! 'ಮಾಮ, ನಾನು' ಎಂದು ಮಾತಾಡಿಸಿದರು. ನನಗೆ ದಿಗ್ಭ್ರಮೆಯಾಯಿತು. ಅಪ್ಪು ಬಂದು ನನ್ನ ಅಪ್ಪಿಕೊಂಡು ನನ್ನ ಪ್ರೀತಿಯಿಂದ ಮಾತಾಡಿಸಿದ್ದು ನಾನು ಇಂದಿಗೂ ಮರೆತಿಲ್ಲ, ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಹಾಗಾಗಿಯೇ ಅಪ್ಪು ಎಂದರೆ ಇಂದಿಗೂ ನನಗೆ ಆ ಬೆಚ್ಚನೆಯ ಅಪ್ಪುಗೆ'' ಎಂದು ನೆನಪು ಮಾಡಿಕೊಂಡಿದ್ದಾರೆ.

ಬಿರಾದರ್ ನೆನಪು ಮಾಡಿಕೊಂಡಿದ್ದು ಹೀಗೆ
ಅಪ್ಪು ಜೊತೆ 'ಜಾಕಿ' ಸಿನಿಮಾದಲ್ಲಿ ನಟಿಸಿದ್ದ ಬಿರಾದರ್ ಸಹ ಅಪ್ಪು ಅವರನ್ನು ನೆನಪಿಸಿಕೊಂಡಿದ್ದು, '''ಅಪ್ಪು ಅವರ ಜೊತೆ ನಾನು ಮಾಡಿದ ಮೊದಲ ಸಿನೆಮಾ "ಅಭಿ'. ಯಾರನ್ನೂ ಇವನು ಸಣ್ಣವನು ನಾನು ದೊಡ್ಡವನು ಎಂಬ ಭಾವದಲ್ಲಿ ಅವರು ನಡೆಸಿಕೊಳ್ಳುತ್ತಿರಲಿಲ್ಲ. ಒಬ್ಬ ಲೈಟ್‌ಬಾಯ್ ಸಿಗಲಿ, ಊಟ ಕೊಡುವವರು ಸಿಗಲಿ, ಪೊಷಕ ನಟ ಇರಲಿ ಯಾರಿದ್ದರೂ ಅವರು ತುಂಬ ಪ್ರೀತಿಯಿಂದ ಬಂದು ಅಪ್ಪಿಕೊಂಡು "ನಮಸ್ಕಾರ ಹೇಗಿದ್ದೀರಿ?' ಎಂದು ಮಾತಾಡಿಸುತ್ತಿದ್ದರು. ಕರ್ನಾಟಕ ಜನತೆ ಒಪ್ಪಿದ ಒಬ್ಬ ಕಲಾವಿದ ಎಲ್ಲರ ಜೊತೆಗೆ ಬೆರೆಯುವುದಿದೆಯಲ್ಲ, ಅದು ಎಲ್ಲರಲ್ಲಿಯೂ ಬರುವುದಿಲ್ಲ. ನಾನು, 'ನಮಸ್ಕಾರ ಸರ್' ಎಂದರೆ, 'ಯಜಮಾನ್ರೇ ನೀವು ನನ್ನ ಸರ್ ಅನ್ನಬೇಡಿ, ಪುನೀತ್ ಅನ್ನಿ. ನಿಮ್ಮ ಎಷ್ಟೋ ಪಾತ್ರಗಳನ್ನು ನಾನು ನೋಡಿ ಎಂಜಾಯ್ ಮಾಡಿದ್ದೀನಿ' ಎನ್ನುತ್ತಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ.

ವೂಟ್‌ನಲ್ಲಿ ಸಿನಿಮಾಗಳು
ಪುನೀತ್ ರಾಜ್‌ಕುಮಾರ್ ನಾಯಕನಾಗಿ ವೃತ್ತಿಜೀವನ ಆರಂಭಿಸಿದ ಕಾಲದ ಆರು ಸೂಪರ್ ಹಿಟ್ ಸಿನೆಮಾಗಳು ಈಗ ವೂಟ್ ಸೆಲೆಕ್ಟ್‌ನಲ್ಲಿ ಲಭ್ಯವಿದೆ. ಈ ಮೂಲಕ ಪುನೀತ್ ಅಭಿನಯದ ವೈವಿಧ್ಯಮಯ ಆಯಾಮಗಳನ್ನು ಆಸ್ವಾದಿಸಲು ವೂಟ್ ಸೆಲೆಕ್ಟ್ ಅವಕಾಶ ಮಾಡಿಕೊಟ್ಟಿದೆ. ಪುನೀತ್ ನಿಧನರಾಗಿ ವರ್ಷವಾಗಿರುವ ಕಾರಣ ಅವರ ಸಿನಿಮಾಗಳ ಮೂಲಕ ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.


Click it and Unblock the Notifications











