Blink Movie: "ನಮ್ಮ ಅನ್ನಕ್ಕೆ ಕಲ್ಲು ಹಾಕಬೇಡಿ"; 'ಬ್ಲಿಂಕ್' ಚಿತ್ರಕ್ಕೆ ಪೈರಸಿ ಪೆಟ್ಟು
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಒಳ್ಳೆ ಒಳ್ಳೆ ಪ್ರಯತ್ನಗಳು ನಡೀತಿದೆ. ಹೊಸ ಪ್ರತಿಭೆಗಳೇ ಸೇರಿ ಮಾಡಿರುವ 'ಬ್ಲಿಂಕ್' ಸಿನಿಮಾ ಇತ್ತೀಚೆಗೆ ಅರ್ಧ ಶತಕ ಬಾರಿಸಿತ್ತು. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ.
ಮಾರ್ಚ್ 8ಕ್ಕೆ ತೆರೆಗಪ್ಪಳಿಸಿದ ಚಿತ್ರಕ್ಕೆ ಮೊದಲಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಬಳಿಕ ನಿಧಾನವಾಗಿ ಸಿನಿಮಾ ಚೇತರಿಸಿಕೊಂಡಿತ್ತು. ನಂತರ ಶೋಗಳ ಸಂಖ್ಯೆ ಹೆಚ್ಚಿಸಿಕೊಂಡು ಸಿನಿಮಾ ಒಂದು ಹಂತಕ್ಕೆ ಗೆದ್ದಿದೆ. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಈಗಾಗಲೇ ಯು, ಯೂಸ್‌ನಲ್ಲಿರುವ ಅಮೇಜಾನ್ ಪ್ರೈಂ ಚಂದಾದಾರರು ಸಿನಿಮಾ ನೋಡುವ ಅವಕಾಶ ಇದೆ.

ಭಾರತದಲ್ಲಿ ಇನ್ನು 'ಬ್ಲಿಂಕ್' ಸಿನಿಮಾ ಓಟಿಟಿಗೆ ಬಂದಿಲ್ಲ. ಶೀಘ್ರದಲ್ಲೇ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಆದರೆ ಅದಕ್ಕೂ ಮುನ್ನ ಸಿನಿಮಾ ಪೈರಸಿ ಆಗದೆ. ಚಿತ್ರದ ಹೆಚ್‌ಡಿ ಪ್ರಿಂಟ್ ಟೆಲಿಗ್ರಾಂ ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಸಿಗುತ್ತಿದೆ. ಇದು ಚಿತ್ರತಂಡಕ್ಕೆ ಆಘಾತ ತಂದಿದೆ. ಸಾಧ್ಯವಾದಷ್ಟು ಪೈರಸಿ ಲಿಂಕ್‌ಗಳನ್ನು ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗುತ್ತಿಲ್ಲ.
ಒಂದೊಳ್ಳೆ ಚಿತ್ರಕ್ಕೆ ಚಿತ್ರತಂಡದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಿದೆ. ಇದು ಡಿಜಿಟಲ್ ದುನಿಯಾ. ಇತ್ತೀಚಿನ ವರ್ಷಗಳಲ್ಲಿ ಪೈರಸಿ ಎನ್ನುವುದು ಸರ್ವೇ ಸಾಧಾರಣ ಎನ್ನುವಂತಾಗಿಬಿಟ್ಟಿದೆ. ಸಾಕಷ್ಟು ಜನ ಸಲೆಬ್ರೆಟಿಗಳು 'ಬ್ಲಿಂಕ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಿರ್ದೇಶಕ ಸುನಿ ಚಿತ್ರದ ಬಗ್ಗೆ ಪ್ರಚಾರ ಮಾಡಿದ್ದರು. ದಯವಿಟ್ಟು ಸಿನಿಮಾ ನೋಡಿ ಎಂದು ಮನವಿ ಮಾಡಿದ್ದರು.
ಸದ್ಯ 'ಬ್ಲಿಂಕ್' ಆನ್‌ಲೈನ್‌ನಲ್ಲಿ ಸೋರಿಕೆ ಆಗಿರುವ ಬಗ್ಗೆ ಚಿತ್ರದ ನಿರ್ಮಾಪಕ ರವಿಚಂದ್ರ ಎ.ಜೆ ಪ್ರತಿಕ್ರಿಯಿಸಿದ್ದಾರೆ. "ನಮ್ಮ ಸಿನಿಮಾ ಸತತ 56 ದಿನಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿತ್ತು. ಚೆನ್ನಾಗಿ ಹೋಗುತ್ತಿದೆ. ನಮ್ಮ ಸಿನಿಮಾ ನೋಡಿದ್ದಕ್ಕೆ ಮೆಚ್ಚಿಕೊಂಡಿದ್ದಕ್ಕೆ ಎಲ್ಲರಿಗೂ ಧನ್ಯವಾದ. ನಿಮ್ಮ ಪ್ರೀತಿಗೆ ಅಬಾರಿ"
"ಆದಷ್ಟು ಬೇಗ ಅಮೇಜಾನ್ ಪ್ರೈಂನಲ್ಲಿ 'ಬ್ಲಿಂಕ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಬೇಸರದ ಸಂಗತಿ ಏನು ಅಂದ್ರೆ ನಮ್ಮ ಚಿತ್ರದ ಹೆಚ್‌ಡಿ ಕಾಪಿ ಲೀಕ್ ಆಗಿದೆ. ಆನ್‌ಲೈನ್‌ನಲ್ಲಿ ಎಲ್ಲರೂ ನೋಡುತ್ತಿದ್ದಾರೆ. ಸಾಧ್ಯವಾದಷ್ಟು ಪೈರಸಿ ಲಿಂಕ್‌ಗಳನ್ನು ತೆಗೆಸಿದ್ದೇವೆ. ಇನ್ನು ತೆಗೆಸುತ್ತಲೇ ಇದ್ದೀವಿ. ಆದರೂ ನಮ್ಮ ಅಂಕೆಗೆ ಸಿಗದಂತೆ ವೈರಲ್ ಆಗುತ್ತಿದೆ. ಆದರೂ ಅಷ್ಟು ಜನ ನಮ್ಮ ಸಿನಿಮಾ ನೋಡುತ್ತಿರುವುದಕ್ಕೆ ಧನ್ಯವಾದ" ಎಂದಿದ್ದಾರೆ.
"ನೀವು ಸಿನಿಮಾ ನೋಡಿ ಇಷ್ಟವಾಗಿದ್ದರೆ ನಮ್ಮ ಯುಪಿಐ ಯುಆರ್ ಕೋಡ್ ಹಾಕಿದ್ದೇನೆ. ನೀವು ನನ್ನ ಸಿನಿಮಾ ನೋಡಿ ಎಷ್ಟು ಹಣ ಕೊಡಬೇಕು ಎಂದು ಅನ್ನಿಸುತ್ತದೋ ಅಷ್ಟು ಹಣವನ್ನು ನನಗೆ ಕಳುಹಿಸಿ. ಕಷ್ಟಪಟ್ಟು ಸಿನಿಮಾ ಮಾಡಿದ್ದೀವಿ. ನಾವು ಹಾಕಿರುವ ಬಂಡವಾಳ ಬರಬೇಕು ಅಂದ್ರೆ ಹಣ ಬೇಕು. ನೀವು ಥಿಯೇಟರ್‌ನಲ್ಲಿ ನೋಡಿಲ್ಲ, ಪ್ರೈನಲ್ಲಿ ಕೂಡ ನೋಡ್ತಿಲ್ಲ. ಅಂದ್ರೆ ನಮಗೆ ಹಣ ಬರಲ್ಲ."
"ಸ್ವಲ್ಪ ದಿನ ಕಾಯಿರಿ. ಪ್ರೈಂನಲ್ಲಿ ನೋಡಿ. ಪೈರಸಿ ಕಾಪಿ ನೋಡಿ ನಮ್ಮ ಅನ್ನಕ್ಕೆ ಅಲ್ಲು ಹಾಕಿದಂತೆ ಆಗುತ್ತದೆ. ದಯವಿಟ್ಟು ಹಾಗೆ ಮಾಡಬೇಡಿ" ಎಂದು ರವಿಚಂದ್ರ ಎಜೆ ಮನವಿ ಮಾಡಿದ್ದಾರೆ. 'ಬ್ಲಿಂಕ್' ಚಿತ್ರಕ್ಕೆ ಅವಿನಾಶ್ ಶಾಸ್ತ್ರಿ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತವಿದೆ. ದೀಕ್ಷಿತ್ ಶೆಟ್ಟಿ ಜೊತೆಗೆ ಚೈತ್ರಾ ಆಚಾರ್, ವಿಶಾಲ್ ಜೈವಿಕ್, ಸುರೇಶ್ ಅನಗಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.


Click it and Unblock the Notifications











