Agnyathavasi OTT: 'ಅಜ್ಞಾತವಾಸಿ' ಓಟಿಟಿ ಹಾಗೂ ಟಿವಿ ರಿಲೀಸ್ ಡೇಟ್!
ವಿದೇಶಗಳಲ್ಲಿ ಕೂಡ 'ಅಜ್ಞಾತವಾಸಿ' ಸಿನಿಮಾ ಇದೀಗ ಬಿಡುಗಡೆಯಾಗಿದೆ. ಹೇಮಂತ್ ರಾವ್ ನಿರ್ಮಾಣದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಏಪ್ರಿಲ್ 11ರಂದು ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಅದ್ಭುತ ಎಂದರೆ ಮತ್ತೆ ಕೆಲವರು ಬೋರಿಂಗ್ ಎಂದುಬಿಟ್ಟರು. ಸದ್ಯ ಸಿನಿಮಾ 18 ದಿನ ಪೂರೈಸಿದೆ.
ಹೆಚ್ಚು ಪ್ರಚಾರ ಇಲ್ಲದೇ 'ಅಜ್ಞಾತವಾಸಿ' ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಮೌತ್ ಟಾಕ್‌ನಿಂದಲೇ ಜನ ಸಿನಿಮಾ ನೋಡೋಕೆ ಬರ್ತಾರೆ ಎಂದು ಚಿತ್ರತಂಡ ಭಾವಿಸಿತ್ತು. ಕೊಂಚ ಮಟ್ಟಿಗೆ ಅದು ನಿಜವಾಗಿತ್ತು. ಹೆಚ್ಚು ಪ್ರಚಾರ ಮಾಡಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚುವಂತೆ ಮಾಡುವ ಬದಲು ಪ್ರೇಕ್ಷಕರೇ ಸಿನಿಮಾ ನೋಡಿ ಜನರಿಗೆ ತಲುಪಿಸುತ್ತಾರೆ ಎಂದು ಹೇಮಂತ್ ರಾವ್ ಊಹಿಸಿದ್ದರು. ಇನ್ನು ಸಿನಿಮಾ ತೆರೆಗೆ ಬರೋಕು ಮುನ್ನ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಸೋಲ್ಡ್ ಆಗಿತ್ತು.

ಈ ಹಿಂದೆ 'ಗುಲ್ಟು' ಎಂಬ ಸೈಬರ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದ ಜನಾರ್ಧನ್ ಚಿಕ್ಕಣ್ಣ 'ಅಜ್ಞಾತವಾಸಿ' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಕೃಷ್ಣರಾಜ್ ಕಥೆ ಚಿತ್ರಕಥೆ ಬರೆದಿದ್ದಾರೆ. ರಂಗಾಯಣ ರಘು, ಪಾವನಾ ಗೌಡ, ರವಿಶಂಕರ್ ಗೌಡ, ಸಿದ್ದು ಮೂಲಿಮನಿ ಹಾಗೂ ಶರತ್ ಲೋಹಿತಾಶ್ವ ಚಿತ್ರದ ತಾರಾಗಣದಲ್ಲಿದ್ದಾರೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಮಲೆನಾಡಿನ ಭಾಗದ ನಾಲ್ಕೇರಿ ಎಂಬ ಊರಿನಲ್ಲಿ ಎಸ್ಟೇಟ್ ಮಾಲೀಕನ ಕೊಲೆಯಾಗುತ್ತದೆ. ಆ ಊರಿನ ಪೊಲೀಸ್ ಅಧಿಕಾರಿ ಕೊಲೆಯ ರಹಸ್ಯ ಭೇದಿಸುತ್ತಾನೆ. ಅಷ್ಟಕ್ಕೂ ಆ ಕೊಲೆ ಮಾಡಿದ್ದು ಯಾರು? ಮುಂದೆ ಏನೆಲ್ಲಾ ಆಗುತ್ತದೆ? ಅಷ್ಟಕ್ಕೂ 'ಅಜ್ಞಾತವಾಸಿ' ಯಾರು? ಎನ್ನುವುದು ಇನ್ನುಳಿದ ಕಥೆ. 90 ದಶಕದಲ್ಲಿ ಹೊಸದಾಗಿ ಬಂದಿದ್ದ ಕಂಪ್ಯೂಟರ್‌ಗಳು, ಈಮೇಲ್ ರೀತಿಯ ವಿಷಯಗಳನ್ನು ಬಹಳ ಚೆನ್ನಾಗಿ ಬಳಸಿಕೊಂಡು ಚಿತ್ರತಂಡ ಗೆದ್ದಿದೆ.
ಸಣ್ಣ ಕಥೆಯನ್ನು ಬಹಳ ಎಳೆದಾಡಿ ಬೇಸರ ಮೂಡಿಸಿರುವುದು ಸುಳ್ಳಲ್ಲ. ಇದೇ ಕಾರಣಕ್ಕೆ 'ಅಜ್ಞಾತವಾಸಿ' ಸಿನಿಮಾ ಕೆಲವರಿಗೆ ಬೋರಿಂಗ್ ಎನಿಸಿಬಿಡುತ್ತದೆ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಅಬ್ಬರದ ಪ್ರಚಾರಕ್ಕೆ ಚಿತ್ರತಂಡ ಮನಸ್ಸು ಮಾಡಿಲ್ಲ. ಸಿನಿಮಾ ಉತ್ತಮ ರೀತಿಯಲ್ಲಿ ಕಲೆಕ್ಷನ್ ಕೂಡ ಮಾಡ್ತಿದೆ. ಕೆಲ ಶೋಗಳು ಹೌಸ್‌ಫುಲ್ ಆಗಿದ್ದವು.
ಸ್ಟಾರ್ ನಟರು ಇಲ್ಲದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ದೊಡ್ಡದಾಗಿ 'ಅಜ್ಞಾತವಾಸಿ' ಸಿನಿಮಾ ಬಿಡುಗಡೆ ಮಾಡಲಿಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಣ್ಣ ಸಣ್ಣ ಸ್ಕ್ರೀನ್‌ಗಳಲ್ಲಿ ಮಾತ್ರ ಪ್ರದರ್ಶನ ಮಾಡಲಾಗಿತ್ತು. ಪ್ರೇಕ್ಷಕರು ಹುಡುಕಿಕೊಂಡು ಹೋಗಿ ಸಿನಿಮಾ ನೋಡಿದ್ದಾರೆ. ಇನ್ನು ನೋಡುತ್ತಿದ್ದಾರೆ. ವೀಕೆಂಡ್‌ಗಳಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಇತ್ತೀಚೆಗೆ ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ಕೆಲವು ಕಡೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.
ಜೀ ಸಂಸ್ಥೆಗೆ 'ಅಜ್ಞಾತವಾಸಿ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಹಾಗಿದ್ದರೆ ಯಾವ ಸ್ಟ್ರೀಮಿಂಗ್ ಎನ್ನುವ ಪ್ರಶ್ನೆ ಮೂಡುವುದು ಸಹಜ. ಮೇ 16ರಂದು ಸಿನಿಮಾ ಓಟಿಟಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಅಂದರೆ ಸಿನಿಮಾ ತೆರೆಕಂಡು 33 ದಿನಗಳ ಬಳಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ. ಇನ್ನು ಅದೇ ದಿನ ಅದೇ ಸಮಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗುವ ಸಾಧ್ಯತೆಯಿದೆ.
ಓಟಿಟಿಯಲ್ಲಿ ಸಿನಿಮಾ ನೋಡಿದ ಬಳಿಕ ಜನ ಕಿರುತೆರೆ ವಾಹಿನಿಯಲ್ಲಿ ನೋಡಲು ಹಿಂದೇಟು ಹಾಕುತ್ತಾರೆ. ಇದರಿಂದ ಸಿನಿಮಾ ನಂಬಿ ಜಾಹೀರಾತು ಪ್ರಸಾರ ಮಾಡಲು ಮುಂದಾಗುವವರಿಗೆ ಸಮಸ್ಯೆ ಆಗುತ್ತಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಜೀ ಸಂಸ್ಥೆ ಹೊಸ ಲೆಕ್ಕಾಚಾರ ಶುರುಮಾಡಿದೆ. ಒಮ್ಮೆಲೆ ಓಟಿಟಿ ಹಾಗೂ ಟಿವಿಯಲ್ಲಿ ಸಿನಿಮಾ ಪ್ರಸಾರ ಮಾಡುತ್ತದೆ. ಮೊದಲ ಬಾರಿ ಟಿವಿಯಲ್ಲಿ ನೋಡುವವರು ನೋಡೇ ನೋಡುತ್ತಾರೆ ಎನ್ನುವ ನಿರೀಕ್ಷೆಯಿದೆ. ಇತ್ತೀಚೆಗೆ 'ಮ್ಯಾಕ್ಸ್' ಹಾಗೂ 'ಸಂಕ್ರಾಂತಿಗೆ ವಸ್ತುನ್ನಾಂ' ಚಿತ್ರಗಳನ್ನು ಇದೇ ರೀತಿ ಜೀ ಸಂಸ್ಥೆ ಓಟಿಟಿ ಹಾಗೂ ಟಿವಿಗೆ ತಂದಿತ್ತು.
ವಿಶೇಷ ಸೂಚನೆ: 'ಅಜ್ಞಾತವಾಸಿ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ. ಮೇ 16ರಂದು ಸ್ಟ್ರೀಮಿಂಗ್ ಆಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.


Click it and Unblock the Notifications











