Yuddhakaanda- 2 OTT: ಸದ್ದಿಲ್ಲದೇ ಓಟಿಟಿಗೆ ಬಂತು 'ಯುದ್ಧಕಾಂಡ'-2; ಈಗ್ಲೇ ನೋಡಿ
ಅಜಯ್ ರಾವ್ ನಿರ್ಮಿಸಿ ನಟಿಸಿದ್ದ 'ಯುದ್ಧಕಾಂಡ'-2 ಸಿನಿಮಾ ಗೆಲುವಿನ ನಗೆ ಬೀರಿತ್ತು. ತಕ್ಕಮಟ್ಟಿಗೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಏಪ್ರಿಲ್ 18ಕ್ಕೆ ಈ ಕೋರ್ಟ್ ಡ್ರಾಮಾ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಸದ್ದಿಲ್ಲದೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ಪವನ್ ಭಟ್ ನಿರ್ದೇಶನದ 'ಯುದ್ಧಕಾಂಡ'-2 ಚಿತ್ರದಲ್ಲಿ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ ಹಾಗೂ ಟಿ. ಎಸ್ ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಂದ ಮಾತ್ರವಲ್ಲ ವಿಮರ್ಶಕರಿಂದಲೂ ಚಿತ್ರಕ್ಕೆ ಒಳ್ಳೆ ಅಂಕ ಸಿಕ್ಕಿತ್ತು. ಅತ್ಯಾಚಾರ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿ ಏನೆಲ್ಲಾ ಆಗುತ್ತದೆ ಎನ್ನುವುದ ಸಂಗತಿಗಳ ಸುತ್ತಾ ಸಿನಿಮಾ ಸಾಗುತ್ತದೆ. ಬಹಳ ಭಾವುಕರವಾಗಿ ಕಥೆ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು.

ನ್ಯಾಯಾಲಯದ ಆವರಣದಲ್ಲಿ ನಿವೇದಿತಾ (ಅರ್ಚನಾ ಜೋಯಿಸ್) ಎಂಬಾಕೆ ಆರೋಪಿಯೊಬ್ಬನನ್ನು ಶೂಟ್ ಮಾಡಿ ಕೊಲ್ಲುವುದರೊಂದಿಗೆ 'ಯುದ್ಧಕಾಂಡ'-2 ಕಥೆ ಶುರುವಾಗುತ್ತದೆ. ಅದಕ್ಕೆ ಕಾರಣ ಏನು? ಆಕೆ ಮಾಡಿದ್ದು ಸರೀನಾ ತಪ್ಪಾ? ವಕೀಲ ಭರತ್(ಅಜಯ್ ರಾವ್) ಪ್ರಕರಣದಲ್ಲಿ ನಿವೇದಿತಾಗೆ ಶಿಕ್ಷೆಯಾಗುವುದನ್ನು ಹೇಗೆ ತಡೆಯುತ್ತಾನೆ? ಎನ್ನುವುದು ಚಿತ್ರದ ಇನ್ನುಳಿದ ಕಥೆ. ಸತತ ಸೋಲುಗಳಿಮದ ಕಂಗೆಟ್ಟಿದ್ದ ನಟ ಅಜಯ್ ರಾವ್‌ಗೆ ಈ ಸಿನಿಮಾ ಒಂದೊಳ್ಳೆ ಬ್ರೇಕ್ ಕೊಟ್ಟಿದ್ದು ಸುಳ್ಳಲ್ಲ.
ಈ ವರ್ಷ ಕನ್ನಡದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಇದ್ದಿದ್ದರಲ್ಲಿ 'ಯುದ್ಧಕಾಂಡ'-2 ಸೇರಿ ಒಂದೆರಡು ಸಿನಿಮಾಗಳು ಹಾಕಿದ ಬಂಡವಾಳಕ್ಕೆ ಮೋಸ ಮಾಡಲಿಲ್ಲ. ವಕೀಲ ಭರತ್ ಪಾತ್ರದಲ್ಲಿ ಅಜಯ್ ರಾವ್ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇನ್ನು ಎದುರಾಳಿ ಬಣದ ವಕೀಲನಾಗಿ ಪ್ರಕಾಶ್ ಬೆಳವಾಡಿ ಗಮನ ಸೆಳೆದಿದ್ದರು. ನ್ಯಾಯಾಲಯದಲ್ಲಿ ಇವರಿಬ್ಬರ ಏಟು ಎದಿರೇಟು ಚಿತ್ರದ ಜೀವಾಳ.

ಸಣ್ಣಪುಟ್ಟ ತಪ್ಪುಗಳ ಹೊರತಾಗಿಯೂ 'ಯುದ್ಧಕಾಂಡ'-2 ಸಿನಿಮಾ ಗೆದ್ದಿತ್ತು. ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕಳೆದ ಎರಡು ವಾರಗಳಿಂದ ಓಟಿಟಿಯಲ್ಲಿ ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗಿರಲಿಲ್ಲ. ಈ ವೀಕೆಂಡ್ ಮನೆಯಲ್ಲೇ ಅಜಯ್ ರಾವ್ ಸಿನಿಮಾ ನೋಡಿ. ಕನ್ನಡ ಜೊತೆಗೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ.
ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಹೇಮಂತ್ ಜೋಯಿಸ್ ಹಾಗೂ ಪ್ರವೀಣ್ ಸಂಗೀತ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು. ಮೊದಲ ವಾರವೇ ಸಿನಿಮಾ 2 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಒಟ್ಟಾರೆ 'ಯುದ್ಧಕಾಂಡ'-2 ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ನಟ, ನಿರ್ಮಾಪಕ ಅಜಯ್ ರಾವ್ ಖುಷಿಯಾಗಿದ್ದರು. ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ್ದ ಸಿನಿಮಾ ಇದೀಗ ಓಟಿಟಿ ಮೂಲಕ ಮತ್ತಷ್ಟು ದೊಡ್ಡದಾಗಿ ಜನರನ್ನು ತಲುಪುತ್ತಿದೆ.
ಟ್ರೈಲರ್ ನೋಡಿದಾಗಲೇ ಸಿನಿಮಾ ಕಥೆ ಏನು ಎನ್ನುವುದು ಗೊತ್ತಾಗಿ ಹೋಗಿತ್ತು. ಆದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆದಿತ್ತು. ಎಂಗೇಜಿಂಗ್ ಆಗಿ 'ಯುದ್ಧಕಾಂಡ'-2 ಸಿನಿಮಾ ನೋಡುಗರನ್ನು ಆವರಿಸಿಕೊಂಡು ಗೆದ್ದಿತ್ತು. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಕಮ್ಮಿ ಆಗುತ್ತಲೇ ಇಲ್ಲ. ಇಂತಹ ಪ್ರಕರಣಗಳಲ್ಲಿ ಅಪರಾಧಿಗಳು ಹಣಬಲ, ತೋಳ್ಬಲದಿಂದ ತಪ್ಪಿಸಿಕೊಳ್ಳುತ್ತಾರೆ ಎನ್ನುವ ಆರೋಪವಿದೆ. ಇಂಥದ್ದೇ ವಿಷಯವನ್ನು ಈ ಚಿತ್ರದಲ್ಲಿ ಚರ್ಚಿಸಲಾಗಿದೆ.
'ಯುದ್ಧಕಾಂಡ'-2 ಚಿತ್ರದ ಸಕ್ಸಸ್ ಬೆನ್ನಲ್ಲೇ ನಟ ಅಜಯ್ ರಾವ್ ಹೊಸ ಸಿನಿಮಾ ಆರಂಭಿಸುತ್ತಿದ್ದಾರೆ. ಶೀಘ್ರದಲ್ಲೇ ಮುಂದಿನ ಸಿನಿಮಾ ಮುಹೂರ್ತ ನಡೆಯಲಿದೆ. ಬಾಹುಬಲಿ ಎಸ್. ಕೆ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದೆ. ಚಿತ್ರದ ಪೋಸ್ಟರ್‌ವೊಂದು ಸಖತ್ ವೈರಲ್ ಆಗುತ್ತಿದೆ. ತಲೆ ಬೋಳಿಸಿಕೊಂಡ ಲುಕ್‌ನಲ್ಲಿ ಅಜಯ್ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಕಿರಣ್ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪೋಸ್ಟರ್ ನೋಡಿದರೆ ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.


Click it and Unblock the Notifications











