ಅಂತು ಇಂತು ಓಟಿಟಿಗೆ ಬಂತು ಹೀನಾಯವಾಗಿ ಸೋತಿದ್ದ ಅಕ್ಷಯ್ ಕುಮಾರ್ ಸಿನಿಮಾ, ಇಲ್ಲಾದ್ರೂ ಜನ ನೋಡ್ತಾರಾ..?
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಇದಕ್ಕೆ ಸದ್ಯದ ಉದಾಹರಣೆ.
ಹೌದು, ಹಿಂದೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ, ಆಕಾಶಕ್ಕೆ ಏಣಿ ಹಾಕಿ ಕುಂತಿದ್ದ ಅಕ್ಕಿ ಈಗ ಇದೇ ಬಾಲಿವುಡ್ ಪಾಲಿಗೆ ಅನ್‌ಲಕ್ಕಿಯಾಗಿದ್ದಾರೆ. ಸೋತು ಸುಣ್ಣವಾಗಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಐವತ್ತು ಕೋಟಿಯ ಗಡಿಯನ್ನು ಕೂಡ ದಾಟಲು ಅಕ್ಷಯ್ ಕುಮಾರ್ ಹೆಣಗಾಡುತ್ತಿದ್ದಾರೆ.

ಇನ್ನೂ ಈ ಹಿಂದೆ ಅಕ್ಷಯ್ ಕುಮಾರ್ ಚಿತ್ರಕ್ಕೆ ಓಟಿಟಿಯಲ್ಲಿ ಬೆಲೆ ಇತ್ತು. ಖರೀದಿ ಮಾಡಲು ಪೈಪೋಟಿ ಕೂಡ ನಡೆಯುತ್ತಿತ್ತು. ಆದರೆ ಈಗ ಅಕ್ಷಯ್ ಕುಮಾರ್ ಅಭಿನಯದ ಚಿತ್ರಗಳನ್ನು ಓಟಿಟಿಯವರು ಕೂಡ ಖರೀದಿ ಮಾಡಲು ಹಿಂದೆ ಮುಂದೆ ನೋಡುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಒಂದು ಉದಾಹರಣೆ ಎನ್ನುವಂತೆ ಅಕ್ಷಯ್ ಕುಮಾರ್ ಅಭಿನಯದ ಸರ್ಫಿರಾ ಚಿತ್ರದ ಓಟಿಟಿ ಹಕ್ಕು ಚಿತ್ರ ತೆರೆಗೆ ಬಂದು ಎರಡು ತಿಂಗಳ ನಂತರ ಈಗ ಬಿಕರಿಯಾಗಿದೆ. ಅಕ್ಟೋಬರ್ ಹನ್ನೊಂದರಂದು ಸರ್ಫಿರಾ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
ಅಂದ್ಹಾಗೆ ಸರ್ಫಿರಾ ಕರ್ನಾಟಕದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಕಥೆಯನ್ನಾಧರಿಸಿದ್ದ ಚಿತ್ರ. ತಮಿಳಿನಲ್ಲಿ ಸೂರ್ಯ 'ಸೂರರೈ ಪೋಟ್ರು' ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಗೋಪಿನಾಥ್ ಅವರ ಪಾತ್ರಕ್ಕೆ ಖುದ್ದು ಜೀವವನ್ನು ತುಂಬಿದ್ದರು. ಸುಧಾ ಕೊರಂಗ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಪ್ರೇಕ್ಷಕರ ಹೃದಯವನ್ನೂ ಕೂಡ ಗೆದ್ದಿತ್ತು.
ಇನ್ನೂ ಇದು ಪ್ಯಾನ್ ಇಂಡಿಯಾ ಕಾಲ. ಈ ಕಾಲದಲ್ಲಿ ಎಲ್ಲ ಭಾಷೆಯ ಚಿತ್ರಗಳು ಡಬ್ ಆಗುತ್ತಿವೆ. 'ಸೂರರೈ ಪೋಟ್ರು' ಕೂಡ ಇದರಿಂದ ಹೊರತಾಗಿರಲಿಲ್ಲ. ಹಿಂದಿಗೆ ಈ ಚಿತ್ರ ಉಡಾನ್ ಹೆಸರಿನಲ್ಲಿ ಡಬ್ ಆಗಿತ್ತು. ಅಮೆಜಾನ್‌ನಲ್ಲಿ ಪ್ರಸಾರವೂ ಆಗಿತ್ತು. ಆದರೂ, ಆ ನಂತರ ಸೂರ್ಯ ತಲೆಯನ್ನು ಯಾರು ಕೆಡಿಸಿದರೋ ಗೊತ್ತಿಲ್ಲ. ಸೂರ್ಯ ಈ ಚಿತ್ರವನ್ನು ಹಿಂದಿಯಲ್ಲಿ ಮರು ನಿರ್ಮಾಣ ಮಾಡುವ ದುಸಾಹಸಕ್ಕೆ ಮುಂದಾದರು. ಇನ್ನೂ ಅಕ್ಷಯ್ ಕುಮಾರ್ ನಸೀಬು ಮೊದಲೇ ಸರಿಯಿರದ ಕಾರಣ, ಅಕ್ಷಯ್ ಕುಮಾರ್ ಕೂಡ ಈ ಚಿತ್ರವನ್ನು ಮಾಡಲು ಕಣ್ಮುಚ್ಚಿ ಒಪ್ಪಿಕೊಂಡರು. ನಿರೀಕ್ಷೆಯಂತೆ ಸರ್ಫಿರಾ ಹಿಂದಿಯಲ್ಲಿ ಮಕಾಡೆ ಮಲಗಿತು. ಈ ಮೂಲಕ ಅಕ್ಷಯ್ ಕುಮಾರ್ ಹೆಸರಿಗೆ ಮತ್ತೊಂದು ಸೋಲು ಸೇರಿಕೊಂಡಿತು.
ನಿರೀಕ್ಷೆಯ ಭಾರವನ್ನೊತ್ತು ಬಂದ ಸರ್ಫಿರಾ ಕೇವಲ 22 ಕೋಟಿಯನ್ನಷ್ಟೇ ಗಳಿಸಿತು. ಉಳಿದಂತೆ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎದುರು ನಾಯಕಿಯಾಗಿ ರಾಧಿಕಾ ಮದನ್ ತೆರೆ ಹಂಚಿಕೊಂಡಿದ್ದರು. ಇನ್ನೂ ಸೂರ್ಯ ಕೂಡ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಪರೇಶ್ ರಾವ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಈ ಸರ್ಫಿರಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಸದ್ಯ ಬಾಕ್ಸಾಫೀಸ್‌ನಲ್ಲಿ ಗೆಲ್ಲದ ಸರ್ಫಿರಾ ಓಟಿಟಿಗೆ ಲಗ್ಗೆ ಇಡುತ್ತಿದೆ. ಚಿತ್ರಮಂದಿರಗಳಿಗೆ ಬಂದು ಈ ಚಿತ್ರವನ್ನು ನೋಡದ ಪ್ರೇಕ್ಷಕರು ಕೊನೆ ಪಕ್ಷ ಓಟಿಟಿಯಲ್ಲಿ ಆದರೂ ಈ ಚಿತ್ರವನ್ನು ನೋಡುತ್ತಾರಾ ಅನ್ನುವುದುನ್ನು ಕಾದು ನೋಡಬೇಕಿದೆ.


Click it and Unblock the Notifications











