10 ನಿಮಿಷದ ದೃಶ್ಯ ಸೇರಿಸಿ ಓಟಿಟಿಗೆ ಸಿನಿಮಾ ಬಿಟ್ಟ ಕರಣ್ ಜೋಹರ್: ಇಲ್ಲಿ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ಲಭ್ಯ!
ಆಲಿಯಾ ಭಟ್ ಹಾಗೂ ರಣ್‌ವೀರ್ ಸಿಂಗ್ ಜೋಡಿಯ ಸಿನಿಮಾ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ'. ಬಹಳ ದಿನಗಳ ಬಳಿಕ ಕರಣ್ ಜೋಹರ್ ನಿರ್ದೇಶಿಸಿದ ಈ ಸಿನಿಮಾ ಜುಲೈ 28ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಈ ಅಪರೂಪದ ಕಾಂಬಿನೇಷನ್ ಬಿಡುಗಡೆಗೂ ಮುನ್ನ ಕುತೂಹಲವನ್ನು ಕೆರಳಿಸಿತ್ತು.
'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ನೋಡಿದ ಬಳಿಕ ಕೆಲವು ಪ್ರೇಕ್ಷಕರಿಗೆ ಇಷ್ಟ ಆಗಿರಲಿಲ್ಲ. ಅದರಲ್ಲೂ ಭಾರತದ ಹಲವು ಭಾಗಗಳಲ್ಲಿಯೇ ಈ ಸಿನಿಮಾವನ್ನು ಇಷ್ಟ ಪಟ್ಟಿರಲಿಲ್ಲ. ಆದರೆ, ವಿದೇಶದಲ್ಲಿ ಈ ಸಿನಿಮಾ ಉತ್ತಮ ಗಳಿಕೆ ಕಂಡಿತ್ತು.

ಹೀಗಿದ್ದರೂ, 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸುಮಾರು 340 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಕರಣ್ ಜೋಹರ್ ನಿರ್ದೇಶನದ ಬಗ್ಗೆ ಚಕಾರವೆತ್ತಿದರೂ, ಆಲಿಯಾ ಹಾಗೂ ರಣ್‌ವೀರ್ ಸಿಂಗ್ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅದೇ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ.
'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ. ರಾಕಿ ಔರ್ ರಾಣಿ ತಮ್ಮ ಪ್ರೇಮ್ ಕಹಾನಿಗಳೊಂದಿಗೆ ಇಲ್ಲಿ ಸಿಗುತ್ತಾರೆಂದು ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅಮೆಜಾನ್ ಪ್ರೈಂನಲ್ಲಿ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಯನ್ನು ಸಿನಿ ಪ್ರೇಮಿಗಳು ನೋಡ ಬಹುದಾಗಿದೆ.
ವಿಶೇಷ ಏನಂದ್ರೆ, 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ'ಗೆ 10 ನಿಮಿಷದ ದೃಶ್ಯಗಳನ್ನು ಸೇರಿಸಲಾಗಿದೆ. ಥಿಯೇಟರ್‌ನಲ್ಲಿ ರಿಲೀಸ್ ಮಾಡುವಾಗ ಸಮಯದ ಅಭಾವದಿಂದ ಈ 10 ನಿಮಿಷಗಳ ದೃಶ್ಯಕ್ಕೆ ಕತ್ತರಿಯನ್ನು ಹಾಕಲಾಗಿತ್ತು. ಆದ್ರೀಗ ಅದನ್ನೂ ಸೇರಿಸಿ ಸಿನಿಮಾದಲ್ಲಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸಿನಿಮಾ ಪ್ರೇಮಿಗಳಿಗೆ ಎಕ್ಸ್‌ಟ್ರಾ ಮನರಂಜನೆ ಸಿಗೋದು ಪಕ್ಕಾ.
ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ರಾಕಿ ರಾಂಧವನಾಗಿ ಹಾಗೂ ಆಲಿಯಾ ಭಟ್ ರಾಣಿ ಚಟರ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ತಮ್ಮ ಕುಟುಂಬದ ಹಿರಿಯರನ್ನು ಒಂದು ಮಾಡಲು ಪರದಾಡುವ ಪ್ರೇಮಿಗಳ ಕಥೆಯನ್ನು ಹೇಳಲಾಗಿದೆ. ಇಬ್ಬರ ಪ್ರೇಮ ಕಹಾನಿಯನ್ನು ವಿರೋಧಿಸುವ ಹಿರಿಯರ ಮನವೊಲಿಸಿ ಹೇಗೆ ಮದುವೆ ಆಗುತ್ತಾರೆ ಅನ್ನೋದನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ.
ಕರಣ್ ಜೋಹರ್ ನಿರ್ದೇಶಿಸಿದ ಈ ಸಿನಿಮಾದ ಸೆಟ್ಟು, ಹಾಡುಗಳು, ಅದ್ದೂರಿತನ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಕಥೆಯನ್ನು ಹೇಳುವ ವಿಧಾನ ಇಷ್ಟ ಆಗಿರಲಿಲ್ಲ. ಆದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಸದ್ಯ ಅಮೆಜಾನ್ ಓಟಿಟಿಯಲ್ಲಿ ಲಭ್ಯವಿದ್ದು, ಸಬ್‌ಸ್ಕ್ರೈಬ್ ಆದರು ಉಚಿತವಾಗಿ ಸಿನಿಮಾವನ್ನು ನೋಡಬಹುದಾಗಿದೆ.
ಆಲಿಯಾ ಭಟ್ ಹಾಗೂ ರಣ್‌ವೀರ್ ಸಿಂಗ್ ಜೊತೆ ಜಯಾ ಬಚ್ಚನ್, ಧರ್ಮೇಂದ್ರ, ಶಬಾನಾ ಆಜ್ಮಿಯಂತಹ ಹಿರಿಯ ಬಾಲಿವುಡ್ ದಿಗ್ಗಜರು ಕೂಡ ಸಿನಿಮಾದಲ್ಲಿ ನಟಿಸಿರುವುದು ಈ ಸಿನಿಮಾ ಹೈಲೈಟ್. ಟಿಪಿಕಲ್ ಕರಣ್ ಜೋಹರ್ ರಿಚ್ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಮಿಸ್ ಮಾಡಿಕೊಂಡಿದ್ದರೆ, 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ'ಯನ್ನು ಓಟಿಟಿಯಲ್ಲಿ ನೋಡಬಹುದು.


Click it and Unblock the Notifications











