ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಓಟಿಟಿ ಹಾಗೂ ಟಿವಿಯಲ್ಲಿ ಬರೋದು ಯಾವಾಗ? ಎಲ್ಲಿ?
ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ತೆರೆಗಪ್ಪಳಿಸಿದೆ. ಅಭಿಮಾನಿಗಳು ಅದ್ಧೂರಿಯಾಗಿಯೇ ಸ್ವಾಗತಿಸಿದ್ದಾರೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ಸುಳಿವು ಸಿಗುತ್ತಿದೆ.
3 ವರ್ಷಗಳ ಹಿಂದೆ 'ಪುಷ್ಪ'-1 ಸಿನಿಮಾ ತೆರೆಗೆ ಬಂದು ಗೆದ್ದಿತ್ತು. ಅಂದಿನಿಂದಲೂ ಸೀಕ್ವೆಲ್ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಕೊಂಚ ತಡವಾಗಿಯೇ ಸಿನಿಮಾ ತೆರೆಗೆ ಬಂತು. ಆದರೂ ಪ್ರೇಕ್ಷಕರು ಕಾದಿದ್ದರು. ಬಹಳ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಸಿನಿಮಾ ಇಷ್ಟವಾಗುತ್ತಿಲ್ಲ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಸಿನಿಮಾ ಯಾವಗ ಓಟಿಟಿಗೆ ಬರುತ್ತದೆ ಎನ್ನುವ ಚರ್ಚೆ ಕೂಡ ನಡೀತಿದೆ.

ಯಾವುದೇ ಸಿನಿಮಾ ಬಂದರೂ ಓಟಿಟಿಯಲ್ಲಿ ಯಾವಾಗ ಬರುತ್ತದೆ ಎಂದು ಕೆಲವರು ಕೇಳುತ್ತಾರೆ. ಓಟಿಟಿ ರಿಲೀಸ್‌ಗಾಗಿ ಕಾದು ಕೂರುತ್ತಾರೆ. ಸದ್ಯ 'ಪುಷ್ಪ'-2 ಸಿನಿಮಾ ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ. ಯಾವ ಟಿವಿಯಲ್ಲಿ ಪ್ರಸಾರವಾಗುತ್ತದೆ ಎನ್ನುವುದು ಖಚಿತವಾಗಿದೆ. ಈ ಹಿಂದೆಯೇ ನೆಟ್‌ಫ್ಲಿಕ್ಸ್ ಡಿಜಿಟಲ್ ಪಾರ್ಟ್ನರ್ ಎನ್ನುವುದು ಖಚಿತವಾಗಿತ್ತು. ಅಂದಾಜು 200 ಕೋಟಿ ರೂ.ಗೆ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ.
'ಪುಷ್ಪ'-2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದದಲ್ಲಿ 6 ಭಾಷೆಗಳಲ್ಲಿ ತೆರೆಗೆ ಬಂದಿದೆ. ಹಾಗಾಗಿ ಎಲ್ಲಾ ಭಾಷೆಯ ಓಟಿಟಿ ಹಾಗೂ ಡಿಜಿಟಲ್ ರೈಟ್ಸ್ ಭರ್ಜರಿ ಬೆಲೆಗೆ ಬಿಕರಿಯಾಗಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ ಎನ್ನುವ ಲೆಕ್ಕಾಚಾರವಿದೆ. ಅದರಲ್ಲಿ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಪಾಲು ದೊಡ್ಡದಿದೆ.

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಎಲ್ಲಿಲ್ಲದ ಬೇಡಿಕೆ. ಸಣ್ಣ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳಲು ಹಿಂದು ಮುಂದು ನೋಡುತ್ತದೆ. ಆದರೆ ಸ್ಟಾರ್ ನಟರ ದೊಡ್ಡ ಸಿನಿಮಾಗಳಿಗೆ ದೊಡ್ಡ ಮೊತ್ತ ಕೊಡುತ್ತಾರೆ. ನಾಲ್ಕೈದು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುವುದರಿಂದ ಹೆಚ್ಚು ಜನರ ವೀಕ್ಷಿಸುತ್ತಾರೆ ಎನ್ನುವ ಲೆಕ್ಕಾಚಾರ ಅದು. ಟಿವಿ ರೈಟ್ಸ್ ವಿಚಾರದಲ್ಲೂ ಹೀಗೆ ಆಗುತ್ತದೆ.
ಅಂದಹಾಗೆ ಸ್ಟಾರ್ ಗ್ರೂಪ್ಸ್ 'ಪುಷ್ಪ'-2 ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ. ಸ್ಟಾರ್ ಕನ್ನಡ ವಾಹಿನಿಯಲ್ಲಿ ಚಿತ್ರದ ಕನ್ನಡ ವರ್ಷನ್ ಪ್ರೀಮಿಯರ್ ಆಗಲಿದೆ. ಇನ್ನು ಯಾವಾಗ ಸ್ಟ್ರೀಮಿಂಗ್ ಎನ್ನುವ ಪ್ರಶ್ನೆಗೆ ಹೊಸ ವರ್ಷಕ್ಕೆ ಅಥವಾ ಸಂಕ್ರಾಂತಿಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ದೊಡ್ಡ ಸಿನಿಮಾಗಳು 20 ದಿನಕ್ಕೆ ಓಟಿಟಿಗೆ ಬರ್ತಿರೋ ಜಮಾನ ಇದು. ಹಾಗಾಗಿ ತಿಂಗಳ ಒಳಗೆ 'ಪುಷ್ಪ'-2 ಸಿನಿಮಾ ಕೂಡ ನೆಟ್‌ಫ್ಲಿಕ್ಸ್‌ಗೆ ಬಂದರೂ ಅಚ್ಚರಿ ಪಡಬೇಕಿಲ್ಲ.
ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಗುತ್ತಿದೆ. ಈಗಾಗಲೇ ಥಿಯೇಟರ್ ಪ್ರಿಂಟ್ ಪೈರಸಿ ಕೂಡ ಆಗಿ ಲೀಕ್ ಆಗಿದೆ. ಹಾಗಾಗಿ 'ಪುಷ್ಪ'-2 ಸ್ಮಾಲ್ ಸ್ಕ್ರೀನ್‌ಗೆ ಬರೋದು ಬಹಳ ತಡ ಆಗುವುದಿಲ್ಲ. ಕೆಲವರು ಥಿಯೇಟರ್ ಪ್ರಿಂಟ್ ದೃಶ್ಯಗಳನ್ನು ಕಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಅದ್ಧೂರಿ ಚಿತ್ರಕ್ಕೆ ಭಾರೀ ಪೆಟ್ಟು ಬಿದ್ದಂತಾಗಿದೆ.
ಇನ್ನು 'ಪುಷ್ಪ'-3 ಸಿನಿಮಾ ಕೂಡ ಘೋಷಣೆ ಆಗಿದೆ. ವಿಜಯ್ ದೇವರಕೊಂಡ ಆ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಬಾಕ್ಸಾಫೀಸ್‌ನಲ್ಲಿ 'ಪುಷ್ಪ'-2 ಭರ್ಜರಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ಇದೆ. ಸಿನಿಮಾ ಬಿಡುಗಡೆಗೂ ಮುನ್ನ ಬುಕ್ ಮೈ ಶೋನಲ್ಲಿ 20 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿತ್ತು. ಹಾಗಾಗಿ ತೆರೆಗೆ ಬರೋಕು ಮುನ್ನ ಸಿನಿಮಾ ಬರ್ಝರಿ ಕಲೆಕ್ಷನ್ ಮಾಡಿತ್ತು.
Disclaimer:
ಜನವರಿಯಲ್ಲೇ 'ಪುಷ್ಪ'-2 ಸಿನಿಮಾ ಓಟಿಟಿಗೆ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ನೆಟ್‌ಫ್ಲಿಕ್ಸ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.


Click it and Unblock the Notifications











