ಈ ವಾರ ಓಟಿಟಿಗೆ 3 ಕನ್ನಡ ಚಿತ್ರಗಳು; ಒಂದು ಚಿತ್ರಕ್ಕೆ 349 ರೂ. ಪಾವತಿಸಬೇಕು!
ಓಟಿಟಿಗೆ ಕನ್ನಡ ಸಿನಿಮಾಗಳು ಬರೋದೇ ಅಪರೂಪ. ಒಮ್ಮೊಮ್ಮೆ ಸಾಲು ಸಾಲಾಗಿ ಚಿತ್ರಗಳು ಸ್ಟೀಮಿಂಗ್ ಆಗುತ್ತದೆ. ಇತ್ತೀಚೆಗೆ ಕನ್ನಡದಲ್ಲಿ ಕೂಡ ವೆಬ್ ಸೀರಿಸ್ ಮಾಡುವ ಪ್ರಯತ್ನಗಳು ಆರಂಭವಾಗಿದೆ. ಜೀ-5ನಲ್ಲಿ ಬಿಡುಗಡೆ ಆಗಿದ್ದ 'ಅಯ್ಯನ ಮನೆ' ವೆಬ್ ಸೀರಿಸ್ ಈಗ ತಮಿಳು, ಹಿಂದಿಗೂ ಡಬ್ ಆಗಿ ರಿಲೀಸ್ ಆಗಿದೆ.
ಈ ವಾರ ಕನ್ನಡದ 3 ಸಿನಿಮಾಗಳು ಓಟಿಟಿಗೆ ಎಂಟ್ರಿ ಕೊಟ್ಟಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಸಿನಿಮಾಗಳಿವು. ಒಂದು ಯಶೋಧರ ಚರಿತೆ ಕಾವ್ಯ ಆಧರಿಸಿದ ಸಿನಿಮಾ. ಮತ್ತೊಂದು ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್. ಮಗೊದೊಂದು ಫೀಲ್ ಗುಡ್ ರೊಮ್ಯಾಂಟಿಕ್ ಸಿನಿಮಾ. ಈಗಾಗಲೇ 3 ಸಿನಿಮಾಗಳು ಓಟಿಟಿಗೆ ಬಂದಿದ್ದು ಕೆಲವರು ಸಿನಿಮಾ ವೀಕ್ಷಿಸಲು ಆರಂಭಿಸಿದ್ದಾರೆ.

ವಾಮನ
ಶಂಕರ್ ರಾಮನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವಾಮನ' ಸದ್ದಿಲ್ಲದೇ ಓಟಿಟಿಗೆ ಬಂದಿದೆ. 4 ದಿನಗಳ ಹಿಂದೆಯೇ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬಂದಿತ್ತು. ಆದರೆ ಯುಕೆ ಚಂದಾದಾರರಿಗೆ ಮಾತ್ರ ವೀಕ್ಷಣೆಗೆ ಲಭ್ಯವಿತ್ತು. ಕಳೆದೆರಡು ದಿನಗಳಿಂದ ಭಾರತದಲ್ಲೂ ಸಿನಿಮಾ ವೀಕ್ಷಿಸಬಹುದಾಗಿದೆ.
ಧನ್ವೀರ್ ಗೌಡ 'ವಾಮನ' ಚಿತ್ರದಲ್ಲಿ ಹೀರೊ ಆಗಿ ಅಬ್ಬರಿಸಿದ್ದು ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಸಂಪತ್ ರಾಜ್, ತಾರಾ, ಆದಿತ್ಯಾ ಮೆನನ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ನಟ ದರ್ಶನ್ ಕೂಡ 'ವಾಮನ' ಸಿನಿಮಾ ನೋಡಿ ಬೆಂಬಲಿಸಿದ್ದರು. ದರ್ಶನ್ ಅಭಿಮಾನಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
ಪ್ರೇಕ್ಷಕರಿಂದ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಕಂಡು ಖುಷಿಯಾಗಿ ಕೆಲ ಜಿಲ್ಲೆಗಳಿಗೆ ಧನ್ವೀರ್ ಭೇಟಿ ನೀಡಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಚಿತ್ರದ ಆಲ್ಬಮ್ ಸಹ ಹಿಟ್ ಆಗಿತ್ತು. 'ಮುದ್ದು ರಾಕ್ಷಸಿ' ಸಾಂಗ್ ಕೇಳುಗರ ಮನಗೆದ್ದಿದೆ. ಒಬ್ಬ ಗ್ಯಾಂಗ್‌ಸ್ಟರ್ ಹಾಗೂ ಮೆಕ್ಯಾನಿಕ್ ನಡುವಿನ ಜಿದ್ದಾಜಿದ್ದಿನ ಕಥೆ 'ವಾಮನ' ಚಿತ್ರದಲ್ಲಿದೆ.

ಇತ್ತೀಚೆಗೆ 'ವಾಮನ' ಸಿನಿಮಾ 25 ದಿನಗಳನ್ನು ಯಶಸ್ವಿಯಾ ಪೂರೈಸಿತ್ತು. ನರ್ತಕಿ ಚಿತ್ರಮಂದಿರದ ಬಳಿ ಧನ್ವೀರ್ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಆಕ್ಷನ್, ಮದರ್ ಸೆಂಟಿಮೆಂಟ್, ರೊಮ್ಯಾನ್ಸ್ ಹೀಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹದವಾಗಿ ಬೆರೆಸಿ ಸಿನಿಮಾ ಕಟ್ಟಿಕೊಡಲಾಗಿದೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
ಮನದ ಕಡಲು
ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾ ಮಾರ್ಚ್ 28ಕ್ಕೆ ತೆರೆಗೆ ಬಂದಿತ್ತು. 'ಮುಂಗಾರುಮಳೆ' ಸಿನಿಮಾ ಖ್ಯಾತಿಯ ಇ. ಕೃಷ್ಣಪ್ಪ ಈ ಚಿತ್ರಕ್ಕೂ ಹಣ ಹೂಡಿದ್ದರು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ನಿರಾಸೆ ಮೂಡಿಸಿತ್ತು. ನಿರೀಕ್ಷಿತ ಮಟ್ಟಕ್ಕೆ ಸಿನಿಮಾ ಪ್ರೇಕ್ಷಕರನ್ನು ರಂಜಿಸಲಿಲ್ಲ.
ಸುಮುಖ ಹಾಗೂ ರಾಶಿಕಾ ಶೆಟ್ಟಿ 'ಮನದ ಕಡಲು' ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ಅಂಜಲಿ ಮಿಂಚಿದ್ದಾರೆ. ದತ್ತಣ್ಣ, ರಂಗಾಯಣ ರಘು ಸೇರಿ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಒಂದು ದಿನ ಮೊದಲೇ ಯುಕೆ ಪ್ರೈಂ ವೀಡಿಯೋ ಚಂದಾದಾರರಿಗೆ ಸಿನಿಮಾ ವೀಕ್ಷಣೆಗೆ ಸಿಕ್ಕಿತ್ತು. ಈಗ ಭಾರತದಲ್ಲಿ ಕೂಡ ಸಿನಿಮಾ ನೋಡಬಹುದಾಗಿದೆ.

ಯೋಗರಾಜ್ ಭಟ್ ನಿರ್ದೇಶನದ ಸಿನಿಮಾಗಳು ಮೊದಲಿನ ಜಾದೂ ಮಾಡುತ್ತಿಲ್ಲ. ವಿಭಿನ್ನ ಜಾನರ್ ಟ್ರೈ ಮಾಡಿದರೂ ಪ್ರಯೋಜನವಾಗುತ್ತಿಲ್ಲ. 'ಗಾಳಿಪಟ'-2 ಸಿನಿಮಾ ತಕ್ಕಮಟ್ಟಿಗೆ ಗೆದ್ದಿತ್ತು. ಬಳಿಕ ಬಂದಿದ್ದ 'ಗರಡಿ' ಹಾಗೂ 'ಕರಟಕ ದಮನಕ' ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಇವೆರಡು ಭಟ್ಟರ ನಿರ್ದೇಶನದಲ್ಲಿ ಬಂದಿದ್ದ ವಿಭಿನ್ನ ಸಿನಿಮಾಗಳು. ಶಿವಣ್ಣ, ಪ್ರಭುದೇವಾ ಜೊತೆಯಾಗಿದ್ದ 'ಕರಟಕ ದಮನಕ' ನಿರಾಸೆ ಮೂಡಿಸಿತ್ತು. ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದ 'ಗರಡಿ' ಕೊಂಚ ಮಟ್ಟಿಗೆ ಅಭಿಮಾನಿಗಳನ್ನು ರಂಜಿಸಿತ್ತು.
'ಮನದ ಕಡಲು' ಚಿತ್ರದ ಮೂಲಕ ಮತ್ತೆ ಭಟ್ರು ತಮ್ಮ ಹಳೇ ಲಯಕ್ಕೆ ಮರಳುವ ಪ್ರಯತ್ನ ಮಾಡಿದ್ದರು. ಹಚ್ಚ ಹಸಿರು, ಬೆಟ್ಟ ಗುಡ್ಡ, ಪ್ರೀತಿ, ವೇದಾಂತ, ಮಳೆ, ಸಮುದ್ರ ಎಲ್ಲವನ್ನು ತುಂಬಿ ಕಥೆ ಹೇಳಿದ್ದರು. ಚಿತ್ರದಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ಇದೆ. ಸುಮುಖ ಎಂಬ ಯುವಕ ಬದುಕಿನಲ್ಲಿ ನಡೆಯುವ ಪ್ರೀತಿ ಪ್ರೇಮದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.
ಯುಕೆ ಪ್ರೈಂ ವೀಡಿಯೋ ಚಂದಾದಾರರಿಗೆ 'ಮನದ ಕಡಲು' ಸಿನಿಮಾ ನೋಡಲು ಮೊದಲು ಅವಕಾಶ ಸಿಕ್ಕಿತ್ತು. ಇದೀಗ ವೀಕೆಂಡ್‌ನಲ್ಲಿ ಎಲ್ಲರೂ ನೋಡಬಹುದು. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಸಂತೋಷ್ ರೈ ಪಾತಾಜೆ ಬಹಳ ಸೊಗಸಾಗಿ ಚಿತ್ರವನ್ನು ಸೆರೆಹಿಡಿದಿದ್ದಾರೆ. ಐಪಿಎಲ್ ಆರ್ಭಟ ಕೂಡ ಚಿತ್ರದ ಹಿನ್ನಡೆಗೆ ಕಾರಣವಾಗಿತ್ತು. ಕೆಲವರಿಗೆ ಸಿನಿಮಾ ಇಷ್ಟವಾಗಿದ್ದರೂ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರಲಿಲ್ಲ. ಇ. ಕೆ ಎಂಟರ್‌ಟೈನರ್ಸ್ ಬ್ಯಾನರ್ ಅಡಿಯಲ್ಲಿ ಸ್ವತಃ ಇ. ಕೃಷ್ಣ ಸಿನಿಮಾ ವಿತರಣೆ ಮಾಡಿದ್ದರು.
ಅಮೃತಮತಿ
ಕೊರೊನಾ ಹಾವಳಿ ಶುರುವಾದ ಬಳಿಕ ಕೆಲ ಸಿನಿಮಾಗಳನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ಶುರುವಾಯಿತು. ಅಂದರೆ ಚಿತ್ರಮಂದಿರಕ್ಕೆ ಪ್ರದರ್ಶನ ಮಾಡದೇ ದೊಡ್ಡ ಮೊತ್ತಕ್ಕೆ ಓಟಿಟಿ ಸಂಸ್ಥೆಗೆ ರೈಟ್ಸ್ ಮಾರಾಟ ಮಾಡುವುದು. ಕೆಲ ದಿನ ಬಾಡಿಗೆ ಆಧಾರದಲ್ಲಿ ಇಂತಿಷ್ಟು ಹಣ ಪಾವತಿಸಿ ಓಟಿಟಿ ಚಂದಾದಾರರಿಗೆ ಸಿನಿಮಾ ನೋಡುವ ಅವಕಾಶ ಕೊಡುತ್ತಾರೆ. ಕನ್ನಡದಲ್ಲಿ ಇಂತಹ ಪ್ರಯತ್ನಗಳು ಕಮ್ಮಿ.
ಅದಾಗಲೇ ತೆರೆಕಂಡು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಸಿನಿಮಾಗಳನ್ನು ಕೆಲವೊಮ್ಮೆ 99 ರೂ. ಪಾವತಿಸಿ ನೋಡುವಂತೆ ಮಾಡಲಾಗುತ್ತದೆ. ಇತ್ತೀಚೆಗೆ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರವನ್ನು ಇದೇ ರೀತಿ ಪ್ರೈಂ ವೀಡಿಯೋಗೆ ತರಲಾಗಿತ್ತು. ಬಹಳ ದಿನಗಳ ಬಳಿಕ ಕನ್ನಡ ಸಿನಿಮಾವೊಂದು ನೇರವಾಗಿ ಓಟಿಟಿಗೆ ಬಂದಿದೆ. ಅದು ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ'.
ದೇಶ ವಿದೇಶಗಳ ಚಿತ್ರೋತ್ಸವಗಳಲ್ಲಿ 'ಅಮೃತಮತಿ' ಸಿನಿಮಾ ಪ್ರದರ್ಶನ ಕಂಡು ಪ್ರಶಸ್ತಿ ಪಡೆದುಕೊಂಡಿತ್ತು. ಸಿನಿಮಾ ತೆರೆಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸದ್ದಿಲ್ಲದೇ ಪ್ರೈಂ ವೀಡಿಯೋದಲ್ಲಿ ರಿಲೀಸ್ ಮಾಡಿದ್ದಾರೆ. ಬರೋಬ್ಬರಿ 349 ರೂ. ಪಾವತಿಸಿ ಚಂದಾದಾರರು ಸಿನಿಮಾ ನೋಡುವ ಅವಕಾಶ ನೀಡಲಾಗಿದೆ. ಕಳೆದು ನಾಲ್ಕೈದು ದಿನಗಳಿಂದ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಇನ್ನು ವಾರದ ಬಳಿಕ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆಯಿದೆ.
ಜನ್ನ ಕವಿ ಬರೆದ ಯಶೋಧರ ಚರಿತ ಕಾವ್ಯ ಆಧರಿಸಿ 'ಅಮೃತಮತಿ' ಚಿತ್ರ ಕಟ್ಟಿಕೊಡಲಾಗಿದೆ. ಟೈಟಲ್ ರೋಲ್‌ನಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಯಶೋಧರನ ಪಾತ್ರದಲ್ಲಿ ಕಿಶೋರ್ ಹಾಗೂ ಅಷ್ಟಾವಂಕರನಾಗಿ ತಿಲಕ್ ಬಣ್ಣ ಹಚ್ಚಿದ್ದಾರೆ. ಅದಾಗಲೇ ಯಶೋಧರನನ್ನು ಮದುವೆ ಆಗಿದ್ದರೂ ಅಷ್ಟಾವಂಕರನ ಜೊತೆ ಅಮೃತಮತಿ ಸಂಬಂಧ ಬೆಳೆಸುವ ಕಥೆ ಚಿತ್ರದಲ್ಲಿದೆ.
ನೋಯ್ಡಾದಲ್ಲಿ ನಡೆದ 4ನೇ ವಿಶ್ವ ಸಿನಿಮೋತ್ಸವದಲ್ಲಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ ಸಿಕ್ಕಿತ್ತು. ಇನ್ನುಳಿದಂತೆ ಕೆಲ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಗಮನ ಸೆಳೆದಿತ್ತು. ಸುಪ್ರಿಯಾ ರಾವ್, ಪ್ರಮಿಳಾ ಜೋಷಾಯ್ ಹಾಗೂ ಸುಂದರ್ ರಾಜ್, ಅಂಬರೀಶ್ ಸಾರಂಗಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಪುಟ್ಟಣ್ಣ ನಿರ್ಮಾಣದ 'ಅಮೃತಮತಿ' ಚಿತ್ರಕ್ಕೆ ನಾಗರಾಜ್ ಅಡವಾಣಿ ಛಾಯಾಗ್ರಹಣ ಹಾಗೂ ಶಮಿತಾ ಮಲ್ನಾಡ್ ಸಂಗೀತ ಸಂಯೋಜನೆ ಮಾಡಿದ್ದಾರೆ.


Click it and Unblock the Notifications











