ಮತ್ತೊಂದು ವಿವಾದದಲ್ಲಿ ಬಾಲಕೃಷ್ಣ, ನರ್ಸ್‌ಗಳ ಬಗ್ಗೆ ಕೀಳು ಅಭಿರುಚಿ ಹೇಳಿಕೆ, ಕ್ಷಮೆಗೆ ಒತ್ತಾಯ
ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ ತಮ್ಮ ಬಿಡುಬೀಸು ವರ್ತನೆ, ಫಿಲ್ಟರ್ ಇಲ್ಲದ ಮಾತುಗಳಿಂದ ಖ್ಯಾತರು. ಅಭಿಮಾನಿಗಳ ಮೇಲೆ ಕೈ ಮಾಡುವುದು, ರಾಜಕೀಯ ವಿರೋಧಿಗಳ ಬಗ್ಗೆ ಏಕವಚನದ ವಾಗ್ದಾಳಿ ಮಾಡುವುದು ಬಾಲಕೃಷ್ಣಗೆ ಮಾಮೂಲು!
ಇದೀಗ 'ಆಹಾ' ಒಟಿಟಿಯಲ್ಲಿ 'ಅನ್‌ಸ್ಟಾಪೆಬಲ್ ಬಾಲಯ್ಯ' ಹೆಸರಿನ ಟಾಕ್ ಶೋ ನಡೆಸುತ್ತಿದ್ದು, ಅಲ್ಲಿಯೂ ಸಹ ತಮ್ಮ ಬಿಡು ಬೀಸು ಮಾತಿನಿಂದ ಜನರನ್ನು ಸೆಳೆದಿದ್ದಾರೆ. ಶೋ ಸಹ ದೊಡ್ಡ ಮಟ್ಟದ ಹಿಟ್ ಆಗಿದೆ.
ಆದರೆ ಶೋನಲ್ಲಿ ಆಗಾಗ್ಗೆ ನಾಲಗೆ ಹರಿಬಿಡುವ ಬಾಲಕೃಷ್ಣ ಕೆಲವು ಬಾರಿ ವಿವಾದಾತ್ಮಕ ಮಾತುಗಳನ್ನು ಆಡಿಬಿಡುವುದುಂಟು. ಈಗಲೂ ಇದೇ ಆಗಿದೆ, ನಟ ಬಾಲಕೃಷ್ಣ ನರ್ಸ್‌ಗಳ ಬಗ್ಗೆ ಶೋನಲ್ಲಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ.

ಇತ್ತೀಚೆಗೆ ಬಾಲಕೃಷ್ಣರ 'ಅನ್‌ಸ್ಟಾಪೆಬಲ್' ಶೋಗೆ ನಟ, ರಾಜಕಾರಣಿ ಪವನ್ ಕಲ್ಯಾಣ್ ಅತಿಥಿಯಾಗಿ ಆಗಮಿಸಿದ್ದರು. ಅದೇ ಶೋಗೆ ನಟ ಸಾಯಿಧರಂ ತೇಜ್ ಸಹ ಬಂದಿದ್ದರು. ಅಪಘಾತದ ಬಳಿಕ ಚೇತರಿಸಿಕೊಂಡಿರುವ ಸಾಯಿಧರಂ ತೇಜ್ ಬಳಿ ಮಾತನಾಡುತ್ತಾ, ಬಾಲಕೃಷ್ಣ ತಾವು ಹಿಂದೊಮ್ಮೆ ಅಪಘಾತಕ್ಕೆ ಗುರಿಯಾದ ಬಗ್ಗೆ ಹೇಳುತ್ತಾ, ನರ್ಸ್‌ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
''ಹಿಂದೊಮ್ಮೆ ನನಗೂ ಅಪಘಾತವಾಗಿತ್ತು. ಕಾಲೇಜು ಮುಗಿಸಿಕೊಂಡು ಬೈಕ್‌ನಲ್ಲಿ ಜೋರಾಗಿ ಬರುತ್ತಿದ್ದೆ. ನಿಜಾಂ ಕಾಲೇಜು ಬಿಟ್ಟು ಮುಂದೆ ಬರುತ್ತಲೇ ಮತ್ತೊಂದು ಬೈಕ್ ಬಂದು ನನ್ನ ಬೈಕ್‌ಗೆ ಡಿಕ್ಕಿ ಆಯಿತು. ನಾನು ಹಾರಿ ಹೋಗಿ ದೂರ ಬಿದ್ದೆ. ನಾನು ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದು, ಮೈಯೆಲ್ಲ ರಕ್ತ ಸಿಕ್ತವಾಗಿತ್ತು. ಆದರೆ ಆ ನರ್ಸ್ (ದಾನೆಮ್ಮ ನರ್ಸ್) ಭಾರಿ ಚೆನ್ನಾಗಿದ್ದಳು. ಏನನ್ನೋ ಕ್ಲೀನ್ ಮಾಡುತ್ತಿದ್ದಳು'' ಎಂದಿದ್ದಾರೆ ಬಾಲಕೃಷ್ಣ.
ನರ್ಸ್ ಬಗ್ಗೆ ಹೇಳುವಾಗ ಬೈಗುಳದ ಪದ ಬಳಸಿರುವುದಕ್ಕೆ ಈಗ ಆಕ್ಷೇಪ ವ್ಯಕ್ತವಾಗಿದೆ. ಆಂಧ್ರದ ದಾದಿಯರ ಸಂಘದ ಸದಸ್ಯರು ಬಾಲಕೃಷ್ಣ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದಾದಿಯರಿಗೆ, ನಟ ಬಾಲಕೃಷ್ಣ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಶೋ ನಲ್ಲಿ ತೆಲುಗು ಚಿತ್ರರಂಗದ ಪ್ರಮುಖ ಕುಟುಂಬವಾಗಿರುವ ಅಕ್ಕಿನೇನಿ ಕುಟುಂಬದ ಬಗ್ಗೆ ವ್ಯಂಗ್ಯವಾಗಿ ನಟ ಬಾಲಕೃಷ್ಣ ಮಾತನಾಡಿದ್ದರು. 'ಅಕ್ಕಿನೇನಿ-ತೊಕ್ಕಿನೇನಿ' ಎಂದು ನಟ ಬಾಲಕೃಷ್ಣ ಹೇಳಿದ್ದರು. ಈ ಹೇಳಿಕೆಯನ್ನು ಅಕ್ಕಿನೇನಿ ಕುಟುಂಬ ಹಾಗೂ ಕುಟುಂಬದ ಅಭಿಮಾನಿಗಳು ಖಂಡಿಸಿದ್ದರು. ಕ್ಷಮೆಗೆ ಒತ್ತಾಯಿಸಿದ್ದರು. ಆದರೆ ನಟ ಬಾಲಕೃಷ್ಣ ಕ್ಷಮೆ ಕೇಳಿರಲಿಲ್ಲ.


Click it and Unblock the Notifications











