ಸಲೀಂ- ಜಾವೇದ್ 'ಆಂಗ್ರಿ ಯಂಗ್‌ಮ್ಯಾನ್' ಡಾಕ್ಯು ಸೀರಿಸ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಿಂಚಿಂಗ್
70 ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ ಬರಹಗಾರರು ಸಲೀಂ-ಜಾವೇದ್. ಭಾರತೀಯ ಚಿತ್ರರಂಗದಲ್ಲಿ ಆಂಗ್ರಿ ಯಂಗ್‌ಮ್ಯಾನ್ ಟ್ರೆಂಡ್ ಹುಟ್ಟುಹಾಕಿದ ಜೋಡಿ ಇದು. ಅಲ್ಲಿವರೆಗೂ ಬಾಲಿವುಡ್ ಎಂದರೆ ರೊಮ್ಯಾಂಟಿಕ್ ಸಿನಿಮಾಗಳು ಎನ್ನುವ ಕಾಲ ಇತ್ತು. ಆದರೆ ಅದೆಲ್ಲವನ್ನು ಬಿಟ್ಟು ಆಂಗ್ರಿ ಯಂಗ್‌ಮ್ಯಾನ್ ಕಥೆಗಳನ್ನು ಕಟ್ಟಿ ಸದ್ದು ಮಾಡಿದರು.
24 ಸಿನಿಮಾಗಳಿಗೆ ಸಲೀಂ ಖಾನ್ ಹಾಗೂ ಜಾವೇದ ಅಖ್ತರ್ ಕಥೆಗಳನ್ನು ಬರೆದಿದ್ದರು. ಇದರಲ್ಲಿ 20 ಸಿನಿಮಾಗಳು ಕಮರ್ಷಿಯಲ್ ಆಗಿ ಹಿಟ್ ಲಿಸ್ಟ್ ಸೇರಿದ್ದವು. ಇದರಲ್ಲಿ 'ಜಂಜೀರ್', 'ದೀವಾರ್', 'ತ್ರಿಶೂಲ್', 'ಕಾಲಾ ಪತ್ತರ್' ಹಾಗೂ 'ಮಿ. ಇಂಡಿಯಾ' ಸಿನಿಮಾಗಳು ಇವೆ. ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಸಿನಿಮಾ 'ಶೋಲೆ'. ಈ ಚಿತ್ರಕ್ಕೆ ಕಥೆ ಬರೆದಿದ್ದು ಇದೇ ಜೋಡಿ.

ಕನ್ನಡದ 2 ಸಿನಿಮಾಗಳಿಗೆ ಸಲೀಂ-ಜಾವೇದ್ ಕಥೆ ಬರೆದಿದ್ದು ವಿಶೇಷ. ಆ ಎರಡೂ ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದರು. ಭಾರತೀಯ ಚಿತ್ರರಂಗದಲ್ಲಿ ಆಂಗ್ರಿ ಯಂಗ್‌ಮ್ಯಾನ್ ಕಥೆಗಳನ್ನು ದೊಡ್ಡಮಟ್ಟದಲ್ಲಿ ಸಕ್ಸಸ್ ಮಾಡಿದವರು ಇವರಿಬ್ಬರು. ಆಂಗ್ರಿ ಯಂಗ್‌ಮ್ಯಾನ್ ಅಂದ್ರೆ ತುಳಿತಕ್ಕೆ ಒಳಗಾದ ನಾಯಕ ತಿರುಗಿ ಬೀಳುವ ಕಥೆಗಳನ್ನು ಹೆಚ್ಚು ಹೆಚ್ಚು ರಚಿಸಿದರು. ಭಾರತೀಯ ಸಿನಿರಸಿಕರಿಗೆ ಅಂತಹ ಸಿನಿಮಾಗಳ ರುಚಿ ಹತ್ತಿಸಿದರು.
ಸಲೀಂ-ಜಾವೇದ್ ಜೋಡಿಯಿಂದ ಪ್ರೇರಣೆಗೊಂಡು ಮುಂದೆ ಕನ್ನಡ ಸೇರಿ ಭಾರತದ ಹಲವು ಭಾಷೆಗಳಲ್ಲಿ ಆಂಗ್ರಿ ಯಂಗ್‌ಮ್ಯಾನ್ ಕಥೆಗಳನ್ನು ಆಧರಿಸಿ ಸಿನಿಮಾ ಮಾಡುವುದು ಹೆಚ್ಚಾಯಿತು. ಅದೊಂದು ಸಕ್ಸಸ್ ಫಾರ್ಮುಲಾವೇ ಆಗಿಬಿಟ್ಟಿತು. ಮಧ್ಯಮ ವರ್ಗದ ಜನ ಅದರಲ್ಲೂ ಕೂಲಿ ಕಾರ್ಮಿಕರು ಇಂತಹ ಸಿನಿಮಾಗಳಿಂದ ಬಹಳ ಪ್ರಭಾವಿತರಾದರು. ಅಂತಹ ಕಥೆಗಳು ಗೆಲ್ಲುತ್ತಾ ಹೋದವು.
ಇನ್ನು ಸಲೀಂ ಖಾನ್ ಮತ್ಯಾರು ಅಲ್ಲ. ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ. ಇದೀಗ ಸಲ್ಲು ತಮ್ಮ ತಂದೆ ಹಾಗೂ ಜಾವೇದ್ ಅಖ್ತರ್ ಸಿನಿಮಾ ಬರವಣಿಗೆಯ ಬಗ್ಗೆ ಡಾಕ್ಯೂ ಸೀರಿಸ್ ನಿರ್ಮಿಸಿದ್ದಾರೆ. 'ಆಂಗ್ರಿ ಯಂಗ್‌ಮ್ಯಾನ್' ಹೆಸರಿನ ಆ ಡಾಕ್ಯೂ ಸೀರಿಸ್ ಶೀಘ್ರದಲ್ಲೇ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸದ್ಯ ಅದರ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಕರಣ್ ಜೋಹರ್, ಫರ್ಹಾನ್ ಅಖ್ತರ್ ಸೇರಿದಂತೆ ಹಲವರು ಈ ಡಾಕ್ಯೂ ಸೀರಿಸ್ ಭಾಗವಾಗಿದ್ದಾರೆ. ಸಲೀಂ-ಜಾವೇದ್ ಆಂಗ್ರಿ ಯಂಗ್‌ಮ್ಯಾನ್ ಸಿನಿಮಾಗಳ ಬಗ್ಗೆ ಅವರಿಬ್ಬರ ಕಥೆ, ಚಿತ್ರಕಥೆ, ಸಂಭಾಷಣೆ ಬಗ್ಗೆ ಮಾತನಾಡಿದ್ದಾರೆ. ವಿಶೇಷ ಅಂದ್ರೆ ಕನ್ನಡ ನಟ ಯಶ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. 'KGF' ಚಿತ್ರದಲ್ಲಿ ಆಂಗ್ರಿ ಯಂಗ್‌ಮ್ಯಾನ್ ರಾಕಿ ಭಾಯ್ ಆಗಿ ಯಶ್ ಅಬ್ಬರಿಸಿದ್ದರು.
'KGF' ಚಿತ್ರದಲ್ಲಿ ಕೂಡ ಆಂಗ್ರಿ ಯಂಗ್‌ಮ್ಯಾನ್ ಕಥೆಯಿತ್ತು. ಇದೇ ಕಥೆಯ ಮೂಲಕ ಯಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಂದ ಬಹು ದೊಡ್ಡ ಆಂಗ್ರಿ ಯಂಗ್‌ಮ್ಯಾನ್ ಕಥೆ 'KGF'. ಇನ್ನು ರಾಕಿ ಭಾಯ್ ಆಗಿ ಯಶ್ ನಟನೆಯನ್ನು ಮರೆಯೋಕೆ ಸಾಧ್ಯವಿಲ್ಲ. ನಿರೂಪಕಿ ಅನುಪಮಾ ಚೋಪ್ರಾ ನಿರೂಪಣೆಯಲ್ಲಿ ಯಶ್ ಸೇರಿದಂತೆ ಹಲವರು ಮಾತನಾಡುತ್ತಾ ಹೋಗಿದ್ದಾರೆ.
ಇವತ್ತಿಗೂ ಜನ ಯಾಕೆ ಸಲೀಂ-ಜಾವೇದ್ ಚಿತ್ರಗಳ ಡೈಲಾಗ್ಸ್ ಬಗ್ಗೆ ಯಾಕೆ ಮಾತನಾಡುತ್ತಾರೆ, ನೆನಪಿಸಿಕೊಳ್ಳುತ್ತಾರೆ ಅಂದ್ರೆ ಅದು ಬರೀ ಡೈಲಾಗ್ಸ್ ಅಲ್ಲ, ಅದು ಫಿಲಾಸಫಿ ಎಂದು ಯಶ್ ಟ್ರೈಲರ್‌ನಲ್ಲಿ ಹೇಳಿರುವುದು ನೋಡಬಹುದು. ಆಗಸ್ಟ್ 20ಕ್ಕೆ 'ಆಂಗ್ರಿ ಯಂಗ್‌ಮ್ಯಾನ್' ಡಾಕ್ಯೂ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











