Animal OTT: ಲಾಭ ಹಂಚಿಕೆ ವಿಚಾರದಲ್ಲಿ ಕಿರಿಕ್: 'ಅನಿಮಲ್' ಸ್ಟ್ರೀಮಿಂಗ್‌ಗೆ ಸ್ಟೇ ತಂದ ನಿರ್ಮಾಪಕ
ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇತಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಸಂಕಷ್ಟ ಎದುರಾಗಿದೆ.
ಖುದ್ದು ಚಿತ್ರದ ಸಹ ನಿರ್ಮಾಪಕರೇ ಕೋರ್ಟ್ ಮೆಟ್ಟಿಲೇರಿದ್ದು 'ಅನಿಮಲ್' ಓಟಿಟಿ ರಿಲೀಸ್‌ಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಚಿತ್ರದ OTT ಸ್ಟ್ರೀಮಿಂಗ್ ನಿಲ್ಲಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಡಿಸೆಂಬರ್ 1 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ ಸಿನಿಮಾ ಜನವರಿ 26ರಂದು ಓಟಿಟಿ ರಿಲೀಸ್‌ಗೆ ಸಿದ್ಧವಾಗ್ತಿದೆ. ಚಿತ್ರದ ಸಹ-ನಿರ್ಮಾಪಕ ಸಿನಿ ಒನ್ ಸ್ಟುಡಿಯೋಸ್, OTT ಸ್ಟ್ರೀಮಿಂಗ್ ಅನ್ನು ತಡೆಹಿಡಿಯಲು ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.

ಟೀ-ಸೀರಿಸ್ ಜೊತೆ ಸೇರಿ ಸಿನಿ ಒನ್ ಸ್ಟುಡಿಯೋಸ್ ಸಂಸ್ಥೆ 'ಅನಿಮಲ್' ಸಿನಿಮಾ ನಿರ್ಮಿಸಿದೆ. ಟೀ- ಸೀರಿಸ್ ತಮ್ಮೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿದ್ದು, 'ಅನಿಮಲ್' ಸಿನಿಮಾದಲ್ಲಿ ಶೇ.35ರಷ್ಟು ಲಾಭದ ಪಾಲು ಮತ್ತು ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ ಕೋರ್ಟ್‌ನಲ್ಲಿ ಪಿಟಿಷನ್ ಹಾಕಿದೆ. ಲಾಭ ಹಂಚಿಕೆಗೆ ಸಂಬಂಧಿಸಿದ ಒಪ್ಪಂದವನ್ನು ಟೀ- ಸಿರೀಸ್ ಗೌರವಿಸಿಲ್ಲ ಎಂದು ಅದು ಆರೋಪಿಸಿದೆ. ಸೂಪರ್ ಕ್ಯಾಸೆಟ್ಸ್ (ಟೀ ಸೀರಿಸ್)ಸಂಸ್ಥೆ ಈ ಸಿನಿಮಾದ ಹಣವನ್ನೆಲ್ಲಾ ಸಂಗ್ರಹಿಸಿದ್ದು ಒಂದು ಪೈಸೆಯನ್ನೂ ನೀಡಿಲ್ಲ. ಆ ಸಂಸ್ಥೆಯೊಂದಿಗೆ ದೀರ್ಘ ಕಾಲದಿಂದ ಸಂಬಂಧ ಹೊಂದಿದ್ದರೂ ಒಪ್ಪಂದಕ್ಕೆ ಗೌರವ ನೀಡಿಲ್ಲ ಎಂದು ಆರೋಪಿಸಿದೆ.
ಉತ್ತಮ ಒಡನಾಟ ಇರುವ ಕಾರಣಕ್ಕೆ ಒಡಂಬಡಿಕೆ ಉಲ್ಲಂಘಿಸಿದರೂ ಇಷ್ಟು ದಿನ ನಾವು ನ್ಯಾಯಾಲಯಕ್ಕೆ ಬರದೇ ಸುಮ್ಮನಿದ್ದೆವು. ಇನ್ನು 'ಅನಿಮಲ್' ಚಿತ್ರಕ್ಕೆ ಸೀಕ್ವೆಲ್ ಘೋಷಿಸಿದ್ದ ಬಗ್ಗೆಯೂ ನಮಗೆ ಮಾಹಿತಿ ಇರಲಿಲ್ಲ ಎಂದಿದೆ. ಆದರೆ, ಸಿನಿ ಒನ್ ಸ್ಟುಡಿಯೋಸ್ 'ಅನಿಮಲ್' ಸಿನಿಮಾದ ಹಕ್ಕುಗಳನ್ನು 2.2 ಕೋಟಿ ರೂ.ಗೆ ಬಿಟ್ಟುಕೊಟ್ಟಿದೆ ಎಂದು ಟೀ- ಸೀರಿಸ್ ಪರ ವಕೀಲ ಅಮಿತ್ ಸಿಬಲ್ ಒಪ್ಪಂದದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ವಿಷಯವನ್ನು ಸಿನಿ ಒನ್ ಸ್ಟುಡಿಯೋ ಮರೆಮಾಚಿದೆ ಎಂದು ವಾದಿಸಿದ್ದಾರೆ. ಈ ಒಪ್ಪಂದದ ಬಗ್ಗೆ ವಿವರಣೆ ನೀಡುವಂತೆ ಸಿನಿ ಒನ್ ಸ್ಟುಡಿಯೋಸ್‌ಗೆ ಆದೇಶಿಸಿರುವ ನ್ಯಾಯಾಲಯ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದೆ. ಹಾಗಾಗಿ ಜನವರಿ 26ಕ್ಕೆ ಸಿನಿಮಾ ಓಟಿಟಿಗೆ ಬರುತ್ತಾ? ಇಲ್ವಾ? ಎನ್ನು ಅನುಮಾನ ಮೂಡಿದೆ.

3 ಗಂಟೆ 12 ನಿಮಿಷದ 'ಅನಿಮಲ್' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಅದರಲ್ಲೂ ರಣ್‌ಬೀರ್ ಕಪೂರ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮತ್ತೊಂದೆಡೆ, ಚಿತ್ರಮಂದಿರಗಳಲ್ಲಿ ಕತ್ತರಿಸಿದ ಕೆಲವು ದೃಶ್ಯಗಳನ್ನು ಓಟಿಟಿಯಲ್ಲಿ ಸೇರಿಸಲಾಗುತ್ತದೆ ಎನ್ನುವ ಚರ್ಚೆ ನಡೀತಿದೆ. ಅದರಲ್ಲೂ ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನಾಯಕ ರಣಬೀರ್ ಕಪೂರ್ ಮತ್ತು ಖಳನಾಯಕ ಬಾಬಿ ಡಿಯೋಲ್ ನಡುವೆ ತೀವ್ರವಾದ ಹೊಡೆದಾಟದ ದೃಶ್ಯವಿದೆ. ಇದು ಮಾಸ್ ಪ್ರೇಕ್ಷಕರ ಮನಗೆದ್ದಿದೆ. ಆ ದೃಶ್ಯದ ಮಧ್ಯದಲ್ಲಿ ಬಾಬಿ ಡಿಯೋಲ್ ಮತ್ತು ರಣಬೀರ್ ಕಪೂರ್ ಅವರನ್ನು ಚುಂಬಿಸಿದ್ದು ಅದು ಥಿಯೇಟರ್‌ನಲ್ಲಿ ತೋರಿಸಿಲ್ಲ. ಓಟಿಟಿ ಆವೃತ್ತಿಯಲ್ಲಿ ಆ ದೃಶ್ಯ ಇರುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ 'ಅನಿಮಲ್' ಓಟಿಟಿ ರಿಲೀಸ್ ಬಗ್ಗೆ ಭಾರೀ ನಿರೀಕ್ಷೆಯಿದೆ.
ಡಿಜಿಟಲ್ ಆವೃತ್ತಿಯಲ್ಲಿ ಅನ್ ಕಟ್ ಪ್ರಿಂಟ್ ನೀಡುವುದಾಗಿ ಸಂದರ್ಶನವೊಂದರಲ್ಲಿ ಸಂದೀಪ್ ಹೇಳಿದ್ದು ಅಭಿಮಾನಿಗಳು ಕನಿಷ್ಠ ಹತ್ತು ನಿಮಿಷಕ್ಕೂ ಹೆಚ್ಚು ಹೆಚ್ಚುವರಿ ದೃಶ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಇದು ಸುಳ್ಳು ಎನ್ನುವ ವಾದ ಕೆಲವರದ್ದು. ನೆಟ್‌ಫ್ಲಿಕ್ಸ್ ಸೆನ್ಸಾರ್ ಆಗಿರುವ ಥ್ರಿಯೇಟ್ರಿಕಲ್ ಪ್ರಿಂಟ್ ಅನ್ನು ಸ್ಟ್ರೀಮಿಂಗ್‌ಗೆ ತೆಗೆದುಕೊಳ್ಳಲು ನಿರ್ಧರಿಸಿದೆ. ಇತ್ತೀಚೆಗೆ ಸ್ಟ್ರೀಮಿಂಗ್ ಆಗಿದ್ದ ಕೆಲ ಸಿನಿಮಾಗಳು ವಿವಾದ ಸೃಷ್ಟಿಸಿದ್ದವು. ಹಾಗಾಗಿ ನೆಟ್‌ಫ್ಲಿಕ್ಸ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ಅಂದಹಾಗೆ 'ಅನಿಮಲ್' ಚಿತ್ರವನ್ನು ಭೂಷಣ್ ಕುಮಾರ್, ಪ್ರಣೈ ರೆಡ್ಡಿ ವಂಗಾ, ಕ್ರಿಶನ್ ಕುಮಾರ್ ಮತ್ತು ಮುರಾದ್ ಖೇತಾನಿ ನಿರ್ಮಿಸಿದ್ದಾರೆ. ಟೀ ಸೀರೀಸ್, ಸಿನಿ ಒನ್ ಸ್ಟುಡಿಯೋಸ್ ಜೊತೆಗೆ ಭದ್ರಕಾಳಿ ಪಿಕ್ಚರ್ಸ್ ಸಂಸ್ಥೆ ಕೈ ಜೋಡಿಸಿದೆ. ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು.


Click it and Unblock the Notifications











