'ಉಪಾಧ್ಯಕ್ಷ' ಎದುರು ಮುಗ್ಗರಿಸಿದ್ದ 'ಬ್ಯಾಚುಲರ್ ಪಾರ್ಟಿ' ಓಟಿಟಿ ಡೇಟ್ ಫಿಕ್ಸ್; ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಓಟಿಟಿಗೆ ಕನ್ನಡ ಕಂಟೆಂಟ್ ಕಮ್ಮಿ ಎನ್ನುವ ಆರೋಪ ಕೇಳಿಬರುತ್ತಲೇ ಇರುತ್ತದೆ. ಆಗೊಮ್ಮೆ ಈಗೊಮ್ಮೆ ಒಳ್ಳೆ ಸಿನಿಮಾಗಳು ಬರುವುದು ಬಿಟ್ಟರೆ ಕನ್ನಡ ವೆಬ್ ಸೀರಿಸ್‌ಗಳಂತೂ ಬರೋದೇ ಇಲ್ಲ. ದೊಡ್ಡ ಸಿನಿಮಾಗಳನ್ನು ಬಿಟ್ಟರೆ ಸಣ್ಣ ಸಿನಿಮಾಗಳನ್ನು ನೋಡಲು ಜನ ಥಿಯೇಟರ್‌ಗೆ ಬರ್ತಿಲ್ಲ. ಇದೆಲ್ಲದರ ನಡುವೆ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುವವರ ಸಂಖ್ಯೆ ಹೆಚ್ಚಾಗ್ತಿದೆ.
ಅದ್ಯಾಕೋ ಕನ್ನಡ ಸಿನಿಮಾಗಳಿಗೆ ಜನ ಥಿಯೇಟರ್‌ಗೆ ಬರಲು ಮೀನಾ ಮೇಷ ಎಣಿಸುತ್ತಾರೆ. ಒಂದು ತಿಂಗಳು ಕಳೆದರೆ ಓಟಿಟಿಗೆ ಬರುತ್ತೆ ಬಿಡು ಎನ್ನುವ ಮನೋಭಾವ ಹೆಚ್ಚಾಗುತ್ತಿದೆ. ಹೀಗೆ ಸಾಕಷ್ಟು ಜನ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಕಾಯುತ್ತಿದ್ದರು.

ಪರಂವಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ಕಾಮಿಡಿ ಎಂಟರ್‌ಟೈನರ್ 'ಬ್ಯಾಚುಲರ್ ಪಾರ್ಟಿ'. ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಸಿನಿಮಾ ಜನವರಿ 26ಕ್ಕೆ ತೆರೆಕಂಡಿತ್ತು. ಟ್ರೈಲರ್‌ನಿಂದ ಗಮನ ಸೆಳೆದಿದ್ದ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು.
ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾ ಕೂಡ ಜನವರಿ 26ಕ್ಕೆ ತೆರೆಕಂಡಿತ್ತು. 'ಉಪಾಧ್ಯಕ್ಷ'ನ ಎದುರು 'ಬ್ಯಾಚುಲರ್'ಗಳು ಗಮನ ಸೆಳೆಯುವಲ್ಲಿ ಸೋತಿದ್ದರು. ಸಿರಿ ರವಿಕುಮಾರ್, ಪ್ರಕಾಶ್ ತುಮ್ಮಿನಾಡ್, ಪವನ್ ಕುಮಾರ್, ಶೋಭರಾಜ್, ಸುಧಾ ಬೆಳವಾಡಿ ತಾರಾಗಣದಲ್ಲಿದ್ದರು. ರಕ್ಷಿತ್ ಶೆಟ್ಟಿ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಅಭಿಜಿತ್ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
ಹಾಲಿವುಡ್ ಸೂಪರ್ ಹಿಟ್ ಹ್ಯಾಂಗೋವರ್ ಸರಣಿಯಿಂದ ಪ್ರೇರಣೆಗೊಂಡು 'ಬ್ಯಾಚುಲರ್ ಪಾರ್ಟಿ' ಸಿನಿಮಾ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ದಿಗ್ಗಿ, ಯೋಗಿ ಪ್ರೇಕ್ಷಕರನ್ನು ನಗಿಸಲು ಬಹಳ ಪ್ರಯತ್ನಪಟ್ಟಿದ್ದರು. ಆದರೆ ಆ ಹಾದಿಯಲ್ಲಿ ಸಂಪೂರ್ಣವಾಗಿ ಯಶಸ್ಸು ಗಳಿಸಲಿಲ್ಲ.

ಸೋಮವಾರದಿಂದ (ಮಾರ್ಚ್ 4ರಿಂದ) 'ಬ್ಯಾಚುಲರ್ ಪಾರ್ಟಿ' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆಧುನಿಕ ಪ್ರಪಂಚದಲ್ಲಿ ಕೌಟುಂಬಿಕ ಬದುಕು, ಯಾಂತ್ರಿಕ ಜೀವನ ಜೊತೆಗೆ ಸಾಮಾಜಿಕ ಕಟ್ಟುಪಾಡುಗಳು ಇದನ್ನೆಲ್ಲಾ ಮೀರಿ ಎಂಜಾಯ್ ಮಾಡಲು ಹಪಹಪಿಸುವ ಯುವ ಜನತೆಯ ಸುತ್ತಾ ಇಡೀ ಸಿನಿಮಾ ಕಥೆ ಸುತ್ತುತ್ತದೆ. ಸಖತ್ ಫನ್ನಿ ನಿರೂಪಣೆ ಜೊತೆಗೆ ಕಚಗುಳಿ ಇಡುವ ಸಂಭಾಷಣೆ ಚಿತ್ರದ ಹೈಲೆಟ್.
ಮದುವೆಯಾಗಿ 6 ವರ್ಷ ಕಳೆದರೂ ಹೆಂಡತಿ ಜೊತೆ ಹೊಂದಾಣಿಕೆ ಇಲ್ಲದೇ ಕಂಗೆಟ್ಟ ಸಂತೋಷ್(ದಿಗಂತ್). ಜೀವನದ ಜಂಜಾಟ ಬಿಟ್ಟು ಎಂಜಾಯ್ ಮಾಡುತ್ತಾ ರಿಲ್ಯಾಕ್ಸ್ ಮಾಡಲು ಹಾತೊರೆಯುತ್ತಿರುತ್ತಾನೆ. ಇಂತಹ ಹೊತ್ತಲ್ಲೆ ಸ್ನೇಹಿತನ 'ಬ್ಯಾಚುಲರ್ ಪಾರ್ಟಿ'ಗೆ ಆಹ್ವಾನ ಬರುತ್ತದೆ. ಪಾರ್ಟಿಯಲ್ಲಿ ಏನೋ ಮಾಡಲು ಹೋಗಿ ಮತ್ತೇನೋ ಆಗಿ ಏನಾಗುತ್ತದೆ ಎನ್ನುವುದು ಪ್ರೇಕ್ಷಕರಿಗೆ ಮಜ ಕೊಡುತ್ತದೆ.
ಮ್ಯಾಡಿ ಆಗಿ ಲೂಸ್ ಮಾದ ಯೋಗಿ ಹಾಗೂ ಪಿ. ಟಿ ಮಾಸ್ಟರ್ ಅಶ್ವಥ್ ನಾರಾಯಣ್ ಆಗಿ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಅಂತೂ ಇಂತೂ 'ಬ್ಯಾಚುಲರ್ ಪಾರ್ಟಿ' ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ಈ ಕಾಮಿಡಿ ಎಂಟರ್‌ಟೈನರ್ ಚಿತ್ರಕ್ಕಿದೆ.
ಹೊಸ ವರ್ಷದಲ್ಲಿ ಅತ್ತ ಥಿಯೇಟರ್ ಇತ್ತ ಓಟಿಟಿಯಲ್ಲಿ ಒಳ್ಳೆ ಸಿನಿಮಾಗಳ ಬರ ಎದುರಾಗಿದೆ, ಕಾಟೇರ, ಉಪಾಧ್ಯಕ್ಷ ಬಿಟ್ಟರೆ 2 ತಿಂಗಳಲ್ಲಿ ಯಾವುದೇ ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿಲ್ಲ. ಇನ್ನು ಓಟಿಟಿಯಲ್ಲಿ ಪರಭಾಷಾ ಸಿನಿಮಾ, ವೆಬ್ ಸೀರಿಸ್ ನೋಡುತ್ತಾ ಕಾಲ ಕಳೆಯುವಂತಾಗಿದೆ. 'ಬ್ಯಾಚುಲರ್ ಪಾರ್ಟಿ' ಕೊಂಚಮಟ್ಟಿಗೆ ಈ ಬೇಸರ ಕಳೆಯುವಂತಿದೆ.


Click it and Unblock the Notifications










