Bagheera OTT: 'ಬಘೀರ' ಓಟಿಟಿ ರಿಲೀಸ್ ಡೇಟ್ ಘೋಷಣೆ; ಕನ್ನಡ ಸಿನಿರಸಿಕರು ಬೇಸರ
ಡಾ. ಸೂರಿ ನಿರ್ದೇಶನದ 'ಬಘೀರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಶ್ರೀಮುರಳಿ ನಟನೆ, ಮೇಕಿಂಗ್, ಆಕ್ಷನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ವರ್ಷದ ಕನ್ನಡದ ಬೆಸ್ಟ್ ಚಿತ್ರಗಳ ಲಿಸ್ಟ್‌ನಲ್ಲಿ 'ಬಘೀರ' ಕೂಡ ಇದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ 'ಬಘೀರ' ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ಅಕ್ಟೋಬರ್ 31ಕ್ಕೆ ತೆರೆಗೆ ಬಂದಿತ್ತು. ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ಮಿಂಚಿದ್ದಾರೆ. ಇನ್ನುಳಿದಂತೆ ಸುಧಾರಾಣಿ, ಪ್ರಕಾಶ್ ರಾಜ್, ರಂಗಾಯಣ ರಘು, ಗರುಡ ರಾಮ್, ಅಚ್ಯುತ್ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಬಹಳ ತಡವಾಗಿ 'ಬಘೀರ' ಸಿನಿಮಾ ತೆರೆಗೆ ಬಂದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿತ್ತು. ಇನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಇದೇ ಮೊದಲ ಬಾರಿಗೆ ಈ ಸಂಸ್ಥೆ ಕನ್ನಡದ ಹೊಸ ಸಿನಿಮಾ ಸ್ಟ್ರೀಮಿಂಗ್ ಮಾಡಲು ಮುಂದಾಗಿದೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಶ್ರೀಮುರಳಿ ಅಬ್ಬರಿಸಿದ್ದಾರೆ. 'ಬಘೀರ' ಆಗಿ ತೆರೆಮೇಲೆ ಚಮತ್ಕಾರ ಮಾಡಿದ್ದಾರೆ.
ಡಿಎಸ್‌ಪಿ ವೇದಾಂತ್ ಪ್ರಭಾಕರ್ IPS ಎಂಬ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ರೋರಿಂಗ್ ಸ್ಟಾರ್ ಮಿಂಚಿದ್ದಾರೆ. ದಕ್ಷ ಅಧಿಕಾರಿ ಆಗಿ ಸಮಾಜದ ಅನ್ಯಾಯ ತಡೆದು ನ್ಯಾಯ ಕೊಡಿಸಬೇಕು ಎನ್ನುವ ಮಹದಾಸೆ ಆತನದು. ಆದರೆ ಕಾನೂನನ್ನೇ ಕೊಂಡುಕೊಳ್ಳುವವರ ನಡುವೆ ಅವನ ಆಶಯ ಈಡೇರುವುದಿಲ್ಲ. ಆಗ 'ಬಘೀರ'ನಾಗಿ ರಾತ್ರಿ ವೇಳೆ ವೇದಾಂತ್ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೆ ನಿಲ್ಲುತ್ತಾನೆ.
ಪಾತ್ರಕ್ಕಾಗಿ ದೇಹ ದಂಡಿಸಿ ಖಡಕ್ ಆಗಿ ಶ್ರೀಮುರಳಿ ದರ್ಬಾರ್ ನಡೆಸಿದ್ದಾರೆ. ರೋರಿಂಗ್ ಸ್ಟಾರ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಬಘೀರ' ಚಿತ್ರ 4ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರವೇ ಸಿನಿಮಾ 18 ಕೋಟಿ ರೂ. ಗಳಿಕೆ ಕಂಡಿದ್ದಾಗಿ ನಿರ್ದೇಶಕ ಡಾ. ಸೂರಿ ಮಾಹಿತಿ ನೀಡಿದ್ದರು. ಇನ್ನು 17 ದಿನಕ್ಕೆ 35 ಕೋಟಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ.
ನೆಟ್‌ಫ್ಲಿಕ್ಸ್‌ನಲ್ಲಿ ಬಹಳ ಬೇಗ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತವೆ. ಹಾಗಾಗಿ 'ಬಘೀರ' ಚಿತ್ರ ಕೂಡ ಶೀಘ್ರದಲ್ಲೇ ಓಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುವ ನಿರೀಕ್ಷೆಯಿತ್ತು. ಡಿಸೆಂಬರ್ 6ಕ್ಕೆ ಸಿನಿಮಾ ಓಟಿಟಿ ಬರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅದಕ್ಕಿಂತ ಮೊದ್ಲೆ ಬರ್ತಿದೆ.
ದೀಪಾವಳಿ ಸಂಭ್ರಮದಲ್ಲೇ ತಮಿಳಿನ 'ಅಮರನ್' ಹಾಗೂ ತೆಲುಗಿನ 'ಲಕ್ಕಿ ಭಾಸ್ಕರ್' ಚಿತ್ರಗಳು ತೆರೆಗೆ ಬಂದಿದ್ದವು. ಎರಡೂ ಚಿತ್ರಗಳ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಬಳಿಯಿದೆ. ನವೆಂಬರ್ 30ಕ್ಕೆ 'ಲಕ್ಕಿ ಭಾಸ್ಕರ್' ಹಾಗೂ ನವೆಂಬರ್ 29ಕ್ಕೆ 'ಅಮರನ್' ಸ್ಟ್ರೀಮಿಂಗ್ ಆರಂಭಿಸಲಿದೆ. ಇದೀಗ 'ಬಘೀರ' ರೈಟ್ಸ್ ಕೂಡ ನೆಟ್‌ಫ್ಲಿಕ್ಸ್ ಬಳಿಯಿದ್ದು ಇಂದು(ನವೆಂಬರ್ 21) ಮಧ್ಯರಾತ್ರಿಯಿಂದಲೇ ಸ್ಟ್ರೀಮಿಂಗ್ ಆರಂಭಿಸುವುದಾಗಿ ನೆಟ್‌ಫ್ಲಿಕ್ಸ್ ಘೋಷಿಸಿದೆ. ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಇಷ್ಟು ಬೇಗ ಓಟಿಟಿ ತರುವುದು ಸರಿಯಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟು ದಿನ ನೆಟ್‌ಫ್ಲಿಕ್ಸ್ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿತ್ತು. ಇದೇ ಮೊದಲ ಬಾರಿಗೆ 'ಬಘೀರ' ಚಿತ್ರವನ್ನು ಸ್ಟ್ರೀಮಿಂಗ್ ಮಾಡುತ್ತಿರುವ ಬಗ್ಗೆ ಕೆಲವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನು ಮುಂದುವರೆಸುವಂತೆಯೇ ಕೇಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರ್ ವೆಬ್ ಸೀರಿಸ್ ನಿರ್ಮಾಣದ ಬಗ್ಗೆ ನೆಟ್‌ಫ್ಲಿಕ್ಸ್ ಜೊತೆ ಚರ್ಚಿಸುತ್ತಿರುವುದಾಗಿ ಹೇಳಿದ್ದಾರೆ. ಮುಂದೆ ದೊಡ್ಡಮಟ್ಟದಲ್ಲಿ ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಾಣವಾಗುವ ನಿರೀಕ್ಷೆಯಿದೆ.


Click it and Unblock the Notifications











