Akhanda-2 OTT Release: ಬಾಲಕೃಷ್ಣ ನಟನೆಯ 'ಅಖಂಡ- 2' ಓಟಿಟಿಗೆ; ಎಲ್ಲಿ ಸ್ಟೀಮಿಂಗ್?
ಬೊಯಪಾಟಿ ಶ್ರೀನು ನಿರ್ದೇಶನದ 'ಅಖಂಡ'-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸ್ದು ಮಾಡಿತ್ತು. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಬಳಿಕ ಕಲೆಕ್ಷನ್ ಡಲ್ ಆಗಿತ್ತು. ಬಾಲಯ್ಯ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ.
3 ವರ್ಷಗ ಳ ಹಿಂದೆ ತೆರೆಗೆ ಬಂದಿದ್ದ 'ಅಖಂಡ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಷ್ಟೇನು ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ಪ್ರೇಕ್ಷಕರನ್ನು ಬಹಳ ರಂಜಿಸಿತ್ತು. ಆದರೆ ಈ ಬಾರಿ ನಿರೀಕ್ಷೆ ಹೆಚ್ಚಾಗಿ ಚಿತ್ರಕ್ಕೆ ಹಿನ್ನಡೆ ಆಗಿದ್ದು ಸುಳ್ಳಲ್ಲ. ಉತ್ತರ ಭಾರತದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕಥೆ ಸಿದ್ಧಪಡಿಸಿದ್ದರು. ಆದರೆ ಯಾಕೋ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಆಗಲಿಲ್ಲ. ಲಾಜಿಕ್ ಇಲ್ಲದ ಸನ್ನಿವೇಶಗಳ ಕೆಲವರ ಬೇಸರಕ್ಕೆ ಕಾರಣವಾಗಿತ್ತು.

ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಸಂಸ್ಥೆ 'ಅಖಂಡ- 2' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿತ್ತು. 4 ವಾರಗಳ ಬಳಿಕ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಇತ್ತ ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗಲಿದೆ. ಅದೇ ಲಿಸ್ಟ್‌ನಲ್ಲಿ 'ಅಖಂಡ-2' ಕೂಡ ಇದೆ.
ಸ್ಟ್ರೀಮಿಂಗ್ ಯಾವಾಗ?
ಜನವರಿ 9ರಂದು 'ಅಖಂಡ- 2' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಬರಬೇಕಿದೆ. ಡಿಸೆಂಬರ್ 5ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕಾರಣಾಂತರಗಳಿಂದ ಒಂದು ವಾರ ತಡವಾಗಿ ತೆರೆಗಪ್ಪಳಿಸಿತ್ತು. ಹಾಗಾಗಿ ಒಂದು ವಾರ ತಡವಾಗಿ ಓಟಿಟಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಜನವರಿ 9ರ ಬದಲು ಜನವರಿ 16ಕ್ಕೆ ಸಿನಿಮಾ ಓಟಿಟಿಗೆ ಬರಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. ಕನ್ನಡ ಸೇರಿ 5 ಭಾಷೆಗಳಿಗೆ ಡಬ್ ಆಗಿ ಓಟಿಟಿಯಲ್ಲಿ ಸಿಗಲಿದೆ.

ಹೊಸ ಲೆಕ್ಕಾಚಾರ
ದೊಡ್ಡ ಸಿನಿಮಾಗಳ ರೈಟ್ಸ್ ಕೊಂಡುಕೊಂಡು ಓಟಿಟಿ ಸಂಸ್ಥೆಗಳು ನಷ್ಟ ಅನುಭವಿಸುವಂತಾಗಿದೆ. ಅದೇ ಕಾರಣಕ್ಕೆ 'ಅಖಂಡ-2' ಚಿತ್ರವನ್ನು ಒಂದು ಷರತ್ತಿನ ಅನ್ವಯ ನೆಟ್‌ಫ್ಲಿಕ್ಸ್ ಕೊಂಡುಕೊಂಡಿದೆ ಎಂದು ವರದಿಯಾಗಿದೆ. ಅಂದಾಜು 80 ಕೋಟಿ ರೂ.ಗೆ ರೈಟ್ಸ್ ಮಾರಾಟ ಆಗಿದೆ ಎನ್ನಲಾಗ್ತಿದೆ. ಹೊಸ ಲೆಕ್ಕದ ಪ್ರಕಾರ ಸಿನಿಮಾ ಗೆದ್ದರೆ ಒಪ್ಪಂದದ ಮೊತ್ತಕ್ಕೆ ಶೇ.25 ರಷ್ಟು ಹೆಚ್ಚುವರಿ ಹಣ ಕೊಡುತ್ತಾರೆ, ನಿರೀಕ್ಷೆ ತಲುಪದಿದ್ದರೆ ಶೇ.25 ರಷ್ಟು ಕಡಿತಗೊಳಿಸುತ್ತಾರೆ ಎನ್ನಲಾಗ್ತಿದೆ. ಇದು ಸಹಜವಾಗಿಯೇ ಚಿತ್ರತಂಡದ ಆತಂಕಕ್ಕೆ ಕಾರಣವಾಗಿತ್ತು.
'ಅಖಂಡ-2' ಬಾಕ್ಸಾಫೀಸ್
ಬಾಕ್ಸಾಫೀಸ್ ಅಖಾಡದಲ್ಲಿ 'ಅಖಂಡ- 2' ಸಿನಿಮಾ ಮುಗ್ಗರಿಸಿತ್ತು. ಸದ್ಯ 22 ದಿನಕ್ಕೆ ಸಿನಿಮಾ 122 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. 70 ಕೋಟಿ ರೂ. ಮಾತ್ರ ಶೇರ್ ತಂದುಕೊಂಡಿರುವುದಾಗಿ ಅಂದಾಜಿಸಲಾಗ್ತಿದೆ. 22 ದಿನಕ್ಕೆ ಸಿನಿಮಾ ಭಾರತದಲ್ಲಿ 93 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ Sacnilk ವೆಬ್ ಸೈಟ್ ವರದಿ ಮಾಡಿದೆ.
'ಅಖಂಡ-2' ಸೋಲು?
ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ 'ಅಖಂಡ'-2 ಸಿನಿಮಾ ನಿರ್ಮಾಣವಾಗಿತ್ತು. ಸೀಕ್ವೆಲ್ ಬೆಂಬಲದ ಜೊತೆಗೆ ಬಾಲಕೃಷ್ಣ- ಬೋಯಪಾಟಿ ಶ್ರೀನು ಕಾಂಬಿನೇಷನ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಅದಕ್ಕೆ ತಕ್ಕಂತೆ ಸಿನಿಮಾ ಸದ್ದು ಮಾಡಲಿಲ್ಲ. ಥ್ರಿಯೇಟ್ರಿಕಲ್, ನಾನ್ ಥ್ರಿಯೇಟ್ರಿಕಲ್ ರೈಟ್ಸ್‌ನಿಂದ ನಿರ್ಮಾಪಕರು ಬಚಾವ್ ಆಗಿರಬಹುದು. ಆದರೆ ಸಿನಿಮಾ ಗೆಲ್ಲುವಲ್ಲಿ ವಿಫಲವಾಗಿದೆ ಎಂದೇ ಹೇಳಬೇಕು. ಸದ್ಯ ಸಿನಿಮಾ ಕಲೆಕ್ಷನ್ ಗಣನೀಯವಾಗಿ ಕಮ್ಮಿ ಆಗಿದೆ. ಮುಂದೆ ಮ್ಯಾಜಿಕ್ ನಡೆಯೋದು ಅನುಮಾನ. ಕೊನೆ ಪಕ್ಷ ಓಟಿಟಿಯಲ್ಲಿ ಸಿನಿಮಾ ಗೆಲ್ಲುತ್ತಾ ಕಾದು ನೋಡಬೇಕಿದೆ.


Click it and Unblock the Notifications











