ಸದ್ದಿಲ್ಲದೇ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ ಅರ್ಜುನ್ ರೆಡ್ಡಿ ನಾಯಕಿಯ ಮ್ಯೂಸಿಕಲ್ ಡ್ರಾಮಾ-ಕನ್ನಡದಲ್ಲಿಯೂ ನೋಡಬಹುದು
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ.. ಹೀಗೆ ತಮ್ಮ ತಮ್ಮ ಭಾಷೆಯಲ್ಲಿ ಮಿಂಚಿದ ಹಲವರು ಬೇರೆ ಬೇರೆ ಭಾಷೆಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಕೆಲವರು ಬಾಲಿವುಡ್ ಮೇಲಿನ ವ್ಯಾಮೋಹದಿಂದ ವಲಸೆ ಹೋಗಿ ಅಲ್ಲಿಯೇ ಬಿಡಾರ ಹೂಡಿದ್ದಾರೆ.
ಹಾಗಂಥ ಎಲ್ಲರಿಗೆ ಇಲ್ಲಿ ಗೆಲುವು ಸಿಕ್ಕಿಲ್ಲ. ಬಾಲಿವುಡ್ ಎಲ್ಲರನ್ನೂ ಅಪ್ಪಿಕೊಂಡಿಲ್ಲ. ಆದರೂ ಕೂಡ ಕೆಲವರು ಇನ್ನೂ ಪ್ರಯತ್ನ ಮಾಡುತ್ತಿದ್ದಾರೆ. ಸೋಲನ್ನು ಒಪ್ಪಿಕೊಳ್ಳದೇ ಇಂದಲ್ಲ, ನಾಳೆ, ಗೆಲ್ಲುವ ವಿಶ್ವಾಸದಲ್ಲಿ ತಮ್ಮನ್ನು ತಾವು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಆ ಪೈಕಿ ಶಾಲಿನಿ ಪಾಂಡೆ ಕೂಡ ಒಬ್ಬರು.

ಹೌದು, ಶಾಲಿನಿ ಪಾಂಡೆ.. ''ಅರ್ಜುನ್ ರೆಡ್ಡಿ''ಯ ಪ್ರೇಯಸಿ. ಮೊದಲ ಚಿತ್ರದಲ್ಲಯೇ ಅತ್ಯದ್ಭುತ ಗೆಲುವು ಇವರಿಗೆ ಸಿಕ್ಕಿತ್ತು. ಆದರೆ.. ಇದರ ಬೆನ್ನಲ್ಲೇ ದುರಾದೃಷ್ಟ ಕೂಡ ಬೆನ್ನು ಹತ್ತಿತ್ತು. ತೆಲುಗು ಸೇರಿ ಹಿಂದಿ ಮತ್ತು ತಮಿಳಿನಲ್ಲಿ ಚಿತ್ರವನ್ನು ಮಾಡಿದರೂ ಕೂಡ ಗೆಲುವೆನ್ನುವುದು ಇವರಿಗೆ ಆ ನಂತರ ದಕ್ಕಲೇ ಇಲ್ಲ. ಎಷ್ಟೇ ತಿಪ್ಪರಲಾಗ ಹಾಕಿದರೂ ಚಿತ್ರ ಗೆಲ್ಲಲಿಲ್ಲ.
ಹೀಗಾಗಿಯೇ ''ಮೈ'' ಪ್ರದರ್ಶನ ಮಾಡುವುದು, ಪಡ್ಡೆಗಳನ್ನು ಕೆರಳಿಸುವಂತ ಕಾಸ್ಟೂಮ್‌ಗಳನ್ನು ಹಾಕಿಕೊಳ್ಳುವುದನ್ನೇ ಸದ್ಯ ಫುಲ್ ಟೈಮ್ ಉದ್ಯೋಗವನ್ನಾಗಿಸಿಕೊಂಡಂತೆ ಇರುವ ಶಾಲಿನಿ ಸದ್ಯ ಹಿಂದಿಯಲ್ಲಿ ವೆಬ್ ಸರಣಿಯೊಂದನ್ನು ಮಾಡಿದ್ದಾರೆ. ಆ ವೆಬ್ ಸರಣಿಯ ಹೆಸರು ''ಬ್ಯಾಂಡ್‌ವಾಲೆ''. ಸದ್ಯ ಈ ''ಬ್ಯಾಂಡ್‌ವಾಲೆ'' ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಫೆಬ್ರವರಿ 13ರಿಂದ ಓಟಿಟಯಲ್ಲಿ ಪ್ರದರ್ಶನವಾಗುತ್ತಿದೆ.

ಕಥಾಹಂದರ
ರತ್ಲಾಂ ಎಂಬ ಊರು. ಅಲ್ಲೊಬ್ಬಳು ಕವಯತ್ರಿ. ಆಕೆಯ ಹೆಸರು ಮರಿಯಮ್ (ಶಾಲಿನಿ ಪಾಂಡೆ ) ಈಕೆಯ ತಂದೆ ಡೇವಿಡ್ (ಆಶಿಶ್ ವಿದ್ಯಾರ್ಥಿ) ಶಿಸ್ತಿನ ಸಿಪಾಯಿ. ತುಂಬಾನೇ ಕಟ್ಟುನಿಟ್ಟಾದ ಕಾಲೇಜಿನ ಪ್ರಾಂಶುಪಾಲ. ತಮ್ಮ ಇಬ್ಬರು ಹೆನ್ಣು ಮಕ್ಕಳ ಕುರಿತು ಸಾಂಪ್ರದಾಯಿಕವಾದ ಆಲೋಚನೆ ಹೊಂದಿರುವ ಡೇವಿಡ್‌ಗೆ ಸೂಕ್ತ ಹುಡುಗನನ್ನು ಹುಡುಕಿ ತಮ್ಮ ಮಕ್ಕಳಿಗೆ ಮದುವೆ ಮಾಡುವ ಆಲೋಚನೆ.
ಆದರೆ ಮರಿಯಮ್ ಕನಸೇ ಬೇರೆ. ಈ ಹಿನ್ನೆಲೆ ತಂದೆಯ ವಿರೋಧದ ನಡುವೆ ಮರಿಯಮ್ ಜಗತ್ತು ತಾನು ಬರೆದ ಕವಿತೆಗಳನ್ನು ಕೇಳಬೇಕೆಂದು ತನ್ನ ಕವಿತೆಗಳನ್ನು ಅನಾಮಧೇಯ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಶುರು ಮಾಡುತ್ತಾಳೆ. ಆಗ ಮರಿಯಮ್ ಬದುಕಿನಲ್ಲಿ ಬರುವವರೇ ಡಿಜೆ ಸೈಕೋ (ಜಹಾನ್ ಕಪೂರ್ ) ಮತ್ತು ರೋಬೋ (ಸ್ವಾನಂದ್ ಕಿರ್ಕಿರೆ). ಇವರೆಲ್ಲರೂ ಸೇರಿ ತಮ್ಮದೇ ಮ್ಯೂಸಿಕ್ ಬ್ಯಾಂಡ್ ಶುರು ಮಾಡುತ್ತಾರೆ. ಮುಂದೇನು ಎನ್ನುವುದೇ ಚಿತ್ರದ ತಿರುಳು.
ವೆಬ್ ಸರಣಿಯ ತಾರಾಬಳಗ ಮತ್ತು ತಾಂತ್ರಿಕ ವರ್ಗ
ತಾರಾಬಳಗ - ಶಾಲಿನಿ ಪಾಂಡೆ, ಜಹಾನ್ ಕಪೂರ್, ಸ್ವಾನಂದ್ ಕಿರ್ಕಿರೆ, ಆಶಿಶ್ ವಿದ್ಯಾರ್ಥಿ, ಸಂಜನಾ ದೀಪು, ಮತ್ತು ಇತರರು.
ಸಂಗೀತ ನಿರ್ದೇಶನ - ಯಶ್‌ರಾಜ್ ಮುಖಾಟೆ
ಸಾಹಿತ್ಯ - ಕೌಸರ್ ಮುನೀರ್
ನಿರ್ದೇಶನ - ಅಕ್ಷತ್ ವರ್ಮಾ ಮತ್ತು ಅಂಕೂರ್ ತಿವಾರಿ
ನಿರ್ಮಾಣ - ಓಎಂಎಲ್ ಎಂಟರ್ಟೈನ್ಮೆಂಟ್ - ಅಜಯ್ ನಾಯರ್, ಹಿಮಾಂಶು ಶರ್ಮಾ ಮತ್ತು ಅಮೃತ್‌ಪಾಲ್ ಸಿಂಗ್ ಬಿಂದ್ರಾ
ಒಟ್ಟು ಸಂಚಿಕೆ ಎಷ್ಟು..? ಎಲ್ಲಿ ನೋಡಬಹುದು..?
''ಬ್ಯಾಂಡ್‌ವಾಲೆ'' ಒಟ್ಟು 8 ಸಂಚಿಕೆಗಳ ವೆಬ್ ಸರಣಿ. ಭಾರತ ಸೇರಿದಂತೆ 240ಕ್ಕೂ ಅಧಿಕ ದೇಶದ ವೀಕ್ಷಕರಿಗೆ ಈ ಚಿತ್ರ ಲಭ್ಯ ಇದ್ದು, ಫೆಬ್ರವರಿ 13ರಿಂದ ಈ ವೆಬ್ ಸೀರೀಸ್ ''ಅಮೆಜಾನ್ ಪ್ರೈಂ''ನಲ್ಲಿ ಪ್ರಸಾರವಾಗುತ್ತಿದೆ. ವಿಶೇಷ ಅಂದರೆ ಹಿಂದಿಯ ಈ ವೆಬ್ ಸರಣಿಯನ್ನು ತೆಲುಗು,ತಮಿಳು, ಮಲಯಾಳಂಗೆ ಕೂಡ ಡಬ್ ಮಾಡಲಾಗಿದೆ. ಆಸಕ್ತ ಕನ್ನಡ ಚಿತ್ರಪ್ರೇಮಿಗಳು ಈ ಚಿತ್ರವನ್ನು ಕನ್ನಡದಲ್ಲಿ ಕೂಡ ನೋಡಬಹುದು.


Click it and Unblock the Notifications











