ಏಕ್ತಾ ಕಪೂರ್‌ಗೆ ಶಾಕ್ ನೀಡಿದ ಕೇಂದ್ರ ಸರ್ಕಾರ, ಆಲ್ಟ್ ಬಾಲಾಜಿ, ಉಲ್ಲು ಸೇರಿ 25 ಒಟಿಟಿಗಳ ನಿಷೇಧ
ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್‌ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್ ಜಿಟಿವಿ, 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು.
ಕೊರೊನಾ ಕಾಲಘಟ್ಟ ಡಿಜಿಟಲ್ ಲೋಕಕ್ಕೆ ಅವಕಾಶದ ದಿಡ್ಡಿ ಬಾಗಿಲಾಯಿತು. ಆದರೆ .. ಮಿಲೇನಿಯಲ್ಸ್ ಅಂದರೆ 18 ರಿಂದ 35ರ ವಯೋಮಾನದವರನ್ನೇ ಗುರಿಯಾನ್ನಾಗಿಸಿಕೊಂಡು ದಿನಗಳೆದಂತೆ ವೇಗವಾಗಿ ಬೆಳೆದ ಈ ಓಟಿಟಿ ವೇದಿಕೆಯನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ಮನರಂಜನೆಯ ಹೆಸರಿನಲ್ಲಿ ಕಂಡೋರ ಮನೆಯ ಹೆಣ್ಣುಮಕ್ಕಳನ್ನು ಅರೆ ಬೆತ್ತಲಾಗಿಸಿ ಕೋಟಿ ಕೋಟಿ ಕಮಾಯಿ ನಡೆಸುತ್ತಾ ಬಂದಿದ್ದಾರೆ. ಅವರಿಗೆ ಈಗ ಕೇಂದ್ರ ಸರ್ಕಾರ ಶಾಕ್ ನೀಡಿದೆ.

ಹೌದು.. ಭಾರತದ ಪ್ರಸಾರ ಕಾಯ್ದೆಯನ್ನು ಗಾಳಿಗೆ ತೂರಿ ಮನಸೋ ಇಚ್ಚೆ ಅಶ್ಲೀಲ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಿದ್ದ 25 ಆಪ್‌ಗಳನ್ನು ನಿಷೇಧ ಹೇರಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಆದೇಶ ಹೊರಡಿಸಿದೆ.
ಆ ಪೈಕಿ ಪಡ್ಡೆ ಹುಡುಗರ ಗುಂಪಿನಲ್ಲಿ ಪ್ರಸಿದ್ಧವಾದ ''ಉಲ್ಲು'' ಆಪ್ ಒಂದಾದರೆ ಮತ್ತೊಂದು ಏಕ್ತಾ ಕಪೂರ್ ಅವರ ''ಆಲ್ಟ್ ಬಾಲಾಜಿ'' ಕೂಡ ಇದೆ. ಕೇಂದ್ರದ ಈ ನಡೆಯಿಂದ ಏಕ್ತಾ ಕಪೂರ್ ಸದ್ಯ ಬೆಚ್ಚಿ ಬಿದ್ದಿದ್ದಾರೆ. ಯಾಕೆಂದರೆ ಏಕ್ತಾ ಕಿರುತೆರೆ ಲೋಕದ ಅನಭಿಷಕ್ತ ರಾಣಿ.
ಕಿರುತೆರೆಯಲ್ಲಿ ಸಕ್ರಿಯರಾಗಿರುವ ಏಕ್ತಾ ಕಪೂರ್ ಹಲವು ವೆಬ್ ಸರಣಿಗಳನ್ನು ಕೂಡ ನಿರ್ಮಾಣ ಮಾಡುತ್ತಾ ಬಂದವರು. ತಮ್ಮ ''ಆಲ್ಟ್ ಬಾಲಾಜಿ''ಯ ಮೂಲಕ ಎಲ್ಲೆಡೆ ಮನರಂಜನೆಯ ರಸದೌತಣ ಬಡಿಸಿದವರು.
ಆದರೆ.. ಅತಿಯಾಸೆ. ಹಣ ಗಳಿಸಲು ಅಡ್ಡದಾರಿಯನ್ನು ಹಿಡಿದ ಏಕ್ತಾ ಕಪೂರ್ ತಮ್ಮ ''ಆಲ್ಟ್ ಬಾಲಾಜಿ''ಯ ಮೂಲಕ ಅಸಹ್ಯ- ಅಶ್ಲೀಲ-ಕಾಮ ಪ್ರಚೋದಕ ಚಿತ್ರಗಳನ್ನು ನಿರ್ಮಾಣ ಮಾಡಲು ಶುರು ಮಾಡಿದ್ದರು.

''XXX: Uncensored Season 2'' ನಲ್ಲಿ ಭಾರತದ ಸೈನ್ಯವನ್ನು ಕೂಡ ಅವಮಾನ ಮಾಡಿದ್ದರು. ''ಹಿಂದೂಸ್ತಾನಿ ಭಾವು'' ಎಂದೇ ಪ್ರಖ್ಯಾತರಾದ ಯೂಟ್ಯೂಬರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇನ್ನು 2020ರಲ್ಲಿ ಕೂಡ ''ಪಬ್ಲಿಕ್ ಜಾಗೃತಿ ಮಿಷನ್'' ಎಂಬ ಟ್ರಸ್ಟ್ ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಆಲ್ಟ್ ಬಾಲಾಜಿಯ ವಿರುದ್ಧ ಕೋರ್ಟ್‌ನ ಮೊರೆ ಹೋಗಿತ್ತು. ಇನ್ನು ಕಳೆದ ವರ್ಷ ''ಗಂಧಿ ಬಾತ್'' ವೆಬ್ ಸರಣಿಯಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಆರೋಪಿಸಿ ''ಆಲ್ಟ್ ಬಾಲಾಜಿ''ಯ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲಾಗಿತ್ತು. ಏಕ್ತಾ ಕಪೂರ್ ಅವರ ವಿಚಾರಣೆಯನ್ನು ಕೂಡ ನಡೆಸಲಾಗಿತ್ತು.
ಹೀಗೆ ಏಕ್ತಾ ಕಪೂರ್ ವಿರುದ್ದ ಹಲವರು ತಮ್ಮ ಅಸಮಾಧಾನವನ್ನು ನಿರಂತರವಾಗಿ ಹೊರ ಹಾಕುತ್ತಲೇ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಗಳನ್ನು ಕೂಡ ವ್ಯಕ್ತಪಡಿಸುತ್ತಲೇ ಇದ್ದರು. ಆದರೂ ಏಕ್ತಾ ಕಪೂರ್ ಕ್ಯಾರೇ ಎಂದಿರಲಿಲ್ಲ. ಹೀಗಿರುವಾಗ ಇದೀಗ ಏಕಾಏಕಿ ನಿಷೇಧವನ್ನು ಹೇರಲಾಗಿದೆ.
''ಉಲ್ಲು ಮತ್ತು ''ಆಲ್ಟ್ ಬಾಲಾಜಿ'' ಅಲ್ಲದೇ ನಿಷೇಧಿತ ಅಪ್ಲಿಕೇಶನ್ಸ್‌ಗಳಲ್ಲಿ ''ಬಿಗ್ ಶಾಟ್ಸ್''.. ''ಜಲ್ವಾ''ಆಪ್.. ''ದೇಸಿ ಫ್ಲಿಕ್ಸ್''.. ''ಹಾಟ್ ಎಕ್ಸ್ ವಿಐಪಿ''.. ''ಅಡ್ಡಾ ಟಿವಿ''..''ನವರಸ ಲೈಟ್''.. ''ಗುಲಾಬ್'' ಆಪ್.. ''ಮೂಡ್ ಎಕ್ಸ್''.. ''ಹಲ್ಚಲ್''.. ''ಮೋಜ್ಫ್ಲಿಕ್ಸ್''.. ''ಬೂಮೆಕ್ಸ್''.. ''ಶೋ ಎಕ್ಸ್''..''ಬುಲ್'' ಆಪ್.. ''ಕಂಗನ್'' ಆಪ್.. ''ಫ್ಯೂಗಿ''..''ಹಿಟ್ ಫ್ರೈಮ್''..''ಫೆನಿಯೋ''.. ''ಸೋಲ್ ಟಾಕೀಸ್'' ಕೂಡ ಇವೆ. ಸರ್ಕಾರದ ಈ ಆದೇಶದ ವಿರುದ್ದ ಮುಂಬರುವ ದಿನಗಳಲ್ಲಿ ಏಕ್ತಾ ಕಪೂರ್ ಮತ್ತು ಸಂಗಡಿಗರು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಕೂಡ ಇದೆ.


Click it and Unblock the Notifications











