ಬಿಗ್‌ಬಾಸ್ ಮನೆ ಪರಿಚಯ ಮಾಡಿಕೊಟ್ಟ ಸುದೀಪ್: ಈ ಬಾರಿ ಏನು ಭಿನ್ನ?
ಬಿಗ್‌ಬಾಸ್ ಒಟಿಟಿ ಆರಂಭಕ್ಕೆ ಇನ್ನು ಕೆಲವು ಗಂಟೆಗಳು ಮಾತ್ರವೇ ಬಾಕಿ ಇದೆ. ಶನಿವಾರ ಸಂಜೆ 6 ಗಂಟೆಗೆ ಶೋ ಪ್ರಾರಂಭವಾಗಲಿದೆ ಎಂದು ಈಗಾಗಲೇ ಪ್ರಕಟಣೆಯಾಗಿದೆ. ಆದರೆ ಸುದೀಪ್ ಒಂದು ದಿನ ಮುಂಚಿತವಾಗಿಯೇ ಅಂದರೆ ಆಗಸ್ಟ್ 5 ರಂದೇ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ!
ಪ್ರತಿ ಸೀಸನ್‌ನಲ್ಲಿಯೂ ಸುದೀಪ್ ಬಿಗ್‌ಬಾಸ್ ಮನೆ ಪ್ರವೇಶಿಸಿ ಅದರ ಪರಿಚಯ ಮಾಡಿಕೊಡುವುದು ವಾಡಿಕೆ. ಅಂತೆಯೇ ಈ ಬಾರಿ ಸಹ ಸುದೀಪ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಅದೂ ಒಬ್ಬ ವಿಶೇಷ ಅತಿಥಿಯ ಜೊತೆಗೆ.
ನಟ ಸುದೀಪ್ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ವಾಸುಕಿ ವೈಭವ್ ಇಬ್ಬರೂ ಒಟ್ಟಿಗೆ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು, ಸುದೀಪ್ ಅವರು ಮನೆಯ ಪರಿಚಯ ಮಾಡಿಕೊಟ್ಟಿರುವ ವಿಡಿಯೋ ಇದೀಗ ಒಟಿಟಿ ವೂಟ್‌ನಲ್ಲಿ ಲಭ್ಯವಿದೆ.

ಕಪ್ಪು ಬಣ್ಣದ ಶರ್ಟ್ ಅದೇ ಬಣ್ಣದ ಪ್ಯಾಂಟ್ ಧರಿಸಿ ಕ್ಯಾಶುವೆಲ್ ಲುಕ್‌ನಲ್ಲಿ ಸುದೀಪ್ ಹೆಚ್ಚು ಆಡಂಭರವಿಲ್ಲದೆ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ಮೊದಲಿಗೆ ಗಾರ್ಡನ್ ಏರಿಯಾ ಆ ಬಳಿಕ ಹಾಲ್, ಕಿಚನ್, ರೂಂ, ಕನ್ಫೆಷನ್ ರೂಂ ಎಲ್ಲವನ್ನೂ ಸುತ್ತಾಡಿ. ಈ ಬಾರಿಯ ಮನೆಯ ವಿನ್ಯಾಸದ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಗಾರ್ಡನ್ ಏರಿಯಾ ನೋಡಲು ಹರಿಸು ತುಂಬಿದೆ ಆದರೆ ವಿಶ್ವದಲ್ಲೇ ಅತಿ ಹೆಚ್ಚು ಜಗಳಗಳು ಆಗುವುದು ಇಲ್ಲೇ ಎಂದು ಕಾಮೆಂಟರಿ ಕೊಟ್ಟರು ಸುದೀಪ್ ಜೊತೆಗಿದ್ದ ವಾಸುಕಿ ವೈಭವ್. ಅಡುಗೆ ಮನೆಯ ಬಗ್ಗೆಯೂ ಕಮೆಂಟ್ ಮಾಡಿದ ವಾಸುಕಿ ವೈಭವ್, ''ಈ ಅಡುಗೆ ಮನೆಯಲ್ಲಿ ಎಲ್ಲರೂ ಕಳ್ಳರಾಗಿಬಿಡುತ್ತಾರೆ. ಹಣ್ಣು ಕದಿಯುತ್ತಾರೆ, ಹಾಲು ಕದಿಯುತ್ತಾರೆ, ಊಟ ಕದಿಯುತ್ತಾರೆ ಹೀಗೆ ಕೈಗೆ ಸಿಕ್ಕದ್ದಿನ್ನೆಲ್ಲ ಕದಿಯುತ್ತಾರೆ'' ಎಂದರು.
ವಾಸುಕಿ ವೈಭವ್ ಮಾತಿಗೆ ತಮ್ಮ ಮಾತು ಸೇರಿಸಿದ ಸುದೀಪ್, ''ಅಡುಗೆ ಮನೆಯಲ್ಲಿಯೇ ಅತಿ ಹೆಚ್ಚು ಬೆಂಕಿ ಬೀಳುವುದು'' ಎಂದರು, ಈ ಬಾರಿಯೂ ಅದು ಮುಂದುವರೆಯಲಿದೆ'' ಎಂದು ಹೇಳಿ ಲಿವಿಂಗ್ ಏರಿಯಾಗೆ ಬಂದರು.
ಎಲ್ಲ ಕಂಟೆಸ್ಟೆಂಟ್‌ಗಳು ಒಟ್ಟಿಗೆ ಕೂರಲು ಈಬಾರಿಯೂ ಕೆಂಪು ಬಣ್ಣದ ಅರ್ಧ ವೃತ್ತಾಕಾರದ ಸೋಫಾ ಹಾಕಲಾಗಿದ್ದು, ಆ ಸೋಫಾ ನೋಡಿದ ಕೂಡಲೇ ವಾಸುಕಿ, ''ಪ್ರತಿ ವಾರಾಂತ್ಯಕ್ಕೆ ಚೆನ್ನಾಗಿ ರೆಡಿಯಾಗಿ, ಮೇಕಪ್ ಹಾಕಿಕೊಂಡು ಬಂದಿರುತ್ತೇವೆ, ಆದರೆ ನೀವು (ಸುದೀಪ್) ಕೇಳುವ ಪ್ರಶ್ನೆಗಳಿಗೆ ಬೆವರಿಳಿದು ಮೇಕಪ್ ಎಲ್ಲ ಅಳಿಸಿ ಹೋಗುತ್ತದೆ'' ಎಂದರು.
ಇನ್ನು ಮಲಗುವ ಕೋಣೆಗೆ ಹೋದಾಗ, ''ಇದು ಹೆಸರಿಗಷ್ಟೆ ಮಲಗುವ ಕೋಣೆ, ಸರಿಯಾಗಿ ನಿದ್ದೆಯೇ ಬರುವುದಿಲ್ಲ. ಸದಾ ಒಂದಿಲ್ಲಾ ಒಂದು ಯೋಚನೆಗಳು ಕಾಡುತ್ತಲೇ ಇರುತ್ತವೆ. ಹೊರಗೆ ಏನಾಗುತ್ತಿದೆ, ಮನೆಯ ಒಳಗೆ ಏನಾಗುತ್ತಿದೆ ಇದೇ ಯೋಚನೆ ಸರ್'' ಎಂದು ಸುದೀಪ್‌ಗೆ ವರ್ಣಿಸಿದ್ದಾರೆ ವಾಸುಕಿ ವೈಭವ್.
ಲಿವಿಂಗ್ ಏರಿಯಾದಲ್ಲಿ ಒಂದು ದೊಡ್ಡ ಕಲಾಕೃತಿಯಲ್ಲಿ ನಿರ್ಮಿಸಲಾಗಿದೆ. ಕಪ್ಪು ಬಣ್ಣದ ವ್ಯಕ್ತಿಯ ದೊಡ್ಡ ಮುಖದ ಕಲಾಕೃತಿ ಆಗಿದ್ದು, ಆ ವ್ಯಕ್ತಿಯ ಕಣ್ಣನ್ನು ಯಾರೋ ಮುಚ್ಚಿದ್ದಾರೆ, ಕುತ್ತಿಗೆಯನ್ನು ಯಾರೋ ಹಿಸುಕುತ್ತಿದ್ದಾರೆ. ಈ ಕಲಾಕೃತಿ ನೋಡಿದ ಸುದೀಪ್ ಈ ಮುಖ ನನ್ನದೇ ಎನಿಸುತ್ತದೆ ಎಂದರು. ಅದಕ್ಕೆ ಅವರು ನೀಡಿದ ಕಾರಣವೂ ಚೆನ್ನಾಗಿತ್ತು. ''ನನಗೆ ಎಲ್ಲ ಗೊತ್ತಾಗುತ್ತಿರುತ್ತದೆ. ನಾನು ಎಲ್ಲವನ್ನೂ ನೋಡುತ್ತಿರುತ್ತೇನೆ ಆದರೂ ಕುರುಡನಾಗಿ ಇರಬೇಕಾಗುತ್ತದೆ. ಇನ್ನು ಹೊರಗಡೆ ಜನರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಕುತ್ತಿಗೆಗೇ ಕೈ ಹಾಕಿರುತ್ತಾರೆ'' ಎಂದರು ಸುದೀಪ್.
ಈ ಬಾರಿಯ ಬಿಗ್‌ಬಾಸ್ ವಿಶೇಷತೆಯೆಂದರೆ ಈ ಬಾರಿ ಟಿವಿಯ ಬದಲಿಗೆ ಒಟಿಟಿಯಲ್ಲಿ ಮಾತ್ರವೇ ಪ್ರಸಾರವಾಗಲಿದೆ. ಅದೂ ಲೈವ್! ದಿನದ 24 ಗಂಟೆಯೂ ಬಿಗ್‌ಬಾಸ್ ಮನೆಯ ಆಕ್ಷಣದ ದೃಶ್ಯಗಳನ್ನು ವೀಕ್ಷಕರು ವೂಟ್ ಮೂಲಕ ನೋಡಬಹುದಾಗಿದೆ.


Click it and Unblock the Notifications











