ಬಿಗ್ ಬಾಸ್ ಓಟಿಟಿ: ಮಾಜಿ ಪತ್ನಿಯಿಂದ ಸೋಮಣ್ಣಗೆ ಬಂದಿರೋ ಮೆಸೇಜ್ ಏನು ಗೊತ್ತಾ.?
ಕನ್ನಡ ಬಿಗ್ ಬಾಸ್ ಓಟಿಟಿಯ ಮೊದಲ ಆವೃತ್ತಿ ಯಶಸ್ವಿಯಾಗಿದೆ. ಸುಮಾರು 16 ಸ್ಫರ್ಧಿಗಳು ಬಿಗ್ ಬಾಸ್ ಓಟಿಟಿ ಮನೆಗೆ ಪ್ರವೇಶ ಪಡೆದಿದ್ದು, ಒಬ್ಬರಿಗಿಂತ ಒಬ್ಬರು ಇಂಟ್ರಸ್ಟಿಂಗ್ ವ್ಯಕ್ತಿತ್ವವುಳ್ಳವರಾಗಿದ್ದರು. ಸುಮಾರು 42 ದಿನಗಳ ಬಿಗ್ ಬಾಸ್ ಓಟಿಟಿ ಪ್ರಯಾಣದಲ್ಲಿ 8 ಜನ ಸ್ಫರ್ಧಿಗಳು ಫೈನಲಿಸ್ಟ್ ಗಳಾದರು. ಅದರಲ್ಲಿ ಕಿರುತೆರೆ ನಿರೂಪಕ ಸೋಮಣ್ಣ ಮಾಚಿಮಾಡ ಕೂಡ ಒಬ್ಬರು. ಕಿರುತೆರೆಯಲ್ಲಿ ತಮ್ಮ ಏರು ಧ್ವನಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಸೋಮಣ್ಣ ಬಿಗ್ ಬಾಸ್ ಓಟಿಟಿ ಸೀಜನ್ ಮೂಲಕ ಭಾವನಾತ್ಮವಾಗಿ ಜನರಿಗೆ ಹತ್ತಿರವಾದರು.
ಬಿಗ್ ಬಾಸ್ ಓಟಿಟಿ ಮನೆಯೊಳಗೆ ಕಾಲಿಟ್ಟ ಮೊದಲ ದಿನವೇ ಸೋಮಣ್ಣ ತಮ್ಮ ಮಾಜಿ ಪತ್ನಿಯನ್ನು ನೆನೆದು ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಾಗೂ ತಮ್ಮ ಮನಸ್ಸಿನಲ್ಲಿದ್ದ ನೋವುಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದ ಸೋಮಣ್ಣ ಆಗಾಗ ತುಂಬಾ ಭಾವುಕರಾಗುತ್ತಿದ್ದರು. ಈ ಬಗ್ಗೆ ಕಿರುತೆರೆ ನಿರೂಪಕ ಸೋಮಣ್ಣ ಮಾಚಿಮಾಡ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ.
ನಾನು ತುಂಬಾ ಎಮೋಷನ್ ವ್ಯಕ್ತಿ, ಬೇರೆಯವರು ಅಳುವುದನ್ನು ನೋಡಿ ನನಗೆ ಅಳು ಬರುತ್ತದೆ. ಸಿನಿಮಾ ನೋಡಿದಾಗಲೂ ಅಳುತ್ತೇನೆ. ನನ್ನ ಜೀವನದ ಕೆಲ ಘಟನೆಗಳನ್ನು ನೆನಪು ಮಾಡಿಕೊಂಡಾಗ ಅಥವಾ ನನ್ನ ತಾಯಿ ಬಗ್ಗೆ ನೆನಪು ಮಾಡಿಕೊಂಡಾಗ ನನಗೆ ಅಳು ಬರುತ್ತದೆ. ದುಃಖದ ಜೊತೆ ಜೀವಿಸಿದ್ದೇನೆ ನಾನು. ಕೆಲವು ಜನರ ಬದುಕಿನ ವಾಸ್ತವನೇ ಬೇರೆ ಇರುತ್ತದೆ. ಜನ ನೋಡುವ ರೀತಿನೇ ಬೇರೆ ಇರುತ್ತದೆ. ಬಿಗ್ ಬಾಸ್ ಮನೆಯಲ್ಲಿ ನಾನು ಹೆಚ್ಚು ಭಾವುಕನಾಗಿದ್ದು, ನನ್ನ ವೈವಾಹಿಕ ಜೀವನದ ಬಗ್ಗೆ. ನನ್ನ ವೈಯಕ್ತಿ ಬದುಕಿನಲ್ಲಿ ಏರಿಳಿತ ನಡೆದಿತ್ತು.

ವೃತ್ತಿ ಜೀವನದ ಆಲೋಚನೆಯಲ್ಲಿ ವೈಯಕ್ತಿಕ ಜೀವನ ಹಾಳಾಯ್ತು
ನನ್ನ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ತುಂಬಾ ನೊಂದಿದ್ದೆ, ನನ್ನ ಜೀವನವೇ ಸಾಕು ಅಂತಾ ಹಲವು ಬಾರಿ ಅನಿಸಿತ್ತು. ಗಿವ್ ಅಪ್ ಮಾಡಿಬಿಡೋಣ ಎನಿಸಿತ್ತು. ಕೆಲವೊಂದು ಬಾರಿ ಜೀವನದಲ್ಲಿ ತಪ್ಪು ಆಗಿ ಬಿಡುತ್ತದೆ. ಕೆಲವೊಮ್ಮೆ ಅದನ್ನು ತಿದ್ದಿಕೊಳ್ಳಲು ಅವಕಾಶ ಸಿಗುತ್ತದೆ. ಆ ಸಮಯದಲ್ಲಿ ನಾನು ವೃತ್ತಿ ಜೀವನ, ಸ್ನೇಹಿತರು, ಬಡವರು, ಕಷ್ಟ ಅಂತೆಲ್ಲಾ ಯೋಜನೆ ಮಾಡಿ, ಖಾಸಗಿ ಜೀವನವನ್ನು ಹಾಳು ಮಾಡಿಕೊಂಡೆ ಅನಿಸುತ್ತದೆ. ಆ ನೋವು ಮನಸ್ಸಿನಲ್ಲಿ ತುಂಬಾ ಕಾಡುತ್ತಿತ್ತು.

ಅವರಿಗೆ ಬಿಗ್ ಬಾಸ್ ಶೋ ತುಂಬಾ ಇಷ್ಟ
ನನ್ನ ಮಾಜಿ ಪತ್ನಿಗೆ ಬಿಗ್ ಬಾಸ್‌ನಂತಹ ರಿಯಾಲಿಟಿ ಶೋ ತುಂಬಾ ಇಷ್ಟ. ಡಾನ್ಸ್, ಬಿಗ್ ಬಾಸ್‌ನಂತಹ ಕಾರ್ಯಕ್ರಮವನ್ನು ಅವರು ಇಷ್ಟ ಪಡುತ್ತಿದ್ದರು. ಈ ಹಿಂದೆ ಕೂಡ ನಾನು ಬಿಗ್ ಬಾಸ್ ಹೋಗುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಆಗ ನಾನು ಆಕೆಯನ್ನು ಕೇಳಿದ್ದೆ, ನಾನು ಬಿಗ್ ಬಾಸ್‌ಗೆ ಹೋದರೆ ಅಂತಾ, ಆಗ ಆಕೆ ನನ್ನನ್ನು ರೇಗಿಸುತ್ತಿದ್ದರು. ಒಂದು ಟೈಮ್ ಅಲ್ಲಿ ನನ್ನ ಮಾಜಿ ಪತ್ನಿ ಹಾಗೂ ನಾನು ಬಿಗ್ ಬಾಸ್‌ಗೆ ಹೋಗುವ ಬಗ್ಗೆ ತುಂಬಾ ಚರ್ಚೆ ಮಾಡಿದ್ದೇವು ಎಂದರು.

ಚೆನ್ನಾಗಿ ಆಡಬೇಕು ಅಂತಾ ಶಕ್ತಿ ತುಂಬಿದ್ದೇ ಆ ಒಂದು ಮೆಸೇಜ್
ಈ ಬಾರಿ ನಾನು ಬಿಗ್‌ಬಾಸ್‌ಗೆ ಸೆಲೆಕ್ಟ್ ಆದಾಗ ನನ್ನ ಆತ್ಮೀಯರಿಗೆ ಹೇಳಿದ್ದೆ, ಆಕೆಗೂ ಕೂಡ ಹೇಳಬೇಕೆಂದುಕೊಳ್ಳುತ್ತಿದೆ. ಅವರಿಗೆ ಹೇಳದೇ ಹೋಗಿದ್ದರೆ ಈ ವಿಚಾರ ನನ್ನನ್ನು ಇನ್ನಷ್ಟು ಚುಚ್ಚುತಿತ್ತು.
ಹೋಗುವ ಹಿಂದಿನ ದಿನ ಆಕೆಗೆ ಕರೆ ಮಾಡಿ ಬಿಗ್ ಬಾಸ್‌ಗೆ ಹೋಗುವ ವಿಷಯ ಹೇಳಿದೆ. ಅವರು ಕೂಡ ಖುಷಿಯಾದ್ರು, ನೀವು ತುಂಬಾ ಚೆನ್ನಾಗಿ ಆಡ್ತೀರ ಅನ್ನೋ ನಂಬಿಕೆ ನನಗಿದೆ ಎಂದಿದ್ದರು. ಅವರು ಕಾಲ್ ರಿಸೀವ್ ಮಾಡಲ್ಲ ಎಂದುಕೊಂಡು ಮೆಸೇಜ್ ಕೂಡ ಮಾಡಿದ್ದೆ, ಅವರು ಅದಕ್ಕೆ ರಿಪ್ಲೇ ಕೂಡ ಮಾಡಿದ್ದರು. ಬಿಗ್ ಬಾಸ್‌ನಲ್ಲಿ ನಾನು ಇನ್ನೂ ಚೆನ್ನಾಗಿ ಆಡಬೇಕು ಅಂತಾ ಶಕ್ತಿ ತುಂಬಿದ್ದೇ ಆ ಒಂದು ಮೆಸೇಜ್. ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಡಿ. ದೇವರ ಆಶೀರ್ವಾದ ಇದೆ ಎಂದು ಕಳುಹಿಸಿದ್ದರು. ಅದನ್ನು ನೋಡಿ ನನಗೆ ಖುಷಿ ಆಯ್ತು. ಅದರಿಂದಲೇ ಫೈನಲ್‌ವರೆಗೂ ಚೆನ್ನಾಗಿ ಆಡಿದ್ದೇನೆ ಎಂದರು.

ಅವರಾಗಿಯೇ ನನಗೆ ಕರೆ ಮಾಡಲಿ
ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರಿಗೆ ಮೆಸೇಜ್ ಮಾಡಿಲ್ಲ, ಮಾತನಾಡಿಲ್ಲ. ಇನ್ನು ಅವರಿಗೆ ಮೆಸೇಜ್ ಮಾಡಲೊ ಅಥವಾ ಕಾಲ್ ಮಾಡಲೋ ಎನ್ನುವ ಸಣ್ಣ ಅಳುಕಿದೆ. ಯಾಕಂದರೆ ಬಿಗ್ ಬಾಸ್ ಮನೆಯೊಳಗಡೆ ನಾನು ನನ್ನ ಭಾವನೆಗಳನ್ನು ಹಂಚಿಕೊಂಡಿದ್ದೆ. ನನ್ನ ಜೀವನ ಹೀಗಾಗಿದೆ ಎಂದು ಹೇಳಿಕೊಂಡಿರುವುದು ಅವರಿಗೆ ಬೇಜಾರಾಗಿರಬಹುದಾ, ಅಥವಾ ನಾನು ಆಡಿರೋ ರೀತಿ ಅವರಿಗೆ ಇಷ್ಟವಾಗಿದೆಯೋ ಇಲ್ಲವೋ ಎನ್ನುವಂತಹ ಅಳುಕಿದೆ. ಅವರ ಕರೆ ಬರಲಿ ಅಂತಾ ಆಶಿಸುತ್ತೇನೆ, ಆದರೆ ಬರಲ್ಲ ಅದು ನನಗೆ ಗೊತ್ತು. ನಾನೇ ಕರೆ ಮಾಡಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.


Click it and Unblock the Notifications











