ಬಿಗ್‌ಬಾಸ್ ಮನೆಯಲ್ಲಿ ಮೊದಲ ಬಾರಿ ಕಣ್ಣೀರು ಹಾಕಿದ ಆರ್ಯವರ್ಧನ್ ಗುರೂಜಿ: ಕಾರಣ ಯಾರು?
ಬಿಗ್‌ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋನಲ್ಲಿ ಶುರುವಾಗಿ ಎರಡನೇ ವಾರ ಚಾಲ್ತಿಯಲ್ಲಿದೆ. ಮನೆಯ ಸದಸ್ಯರ ಖುಷಿಯ ಸಮಯ ಮುಗಿದು ಜಗಳ ಮುನಿಸುಗಳು ಮುನ್ನೆಲೆಗೆ ಬಂದಿವೆ.
ಮನೆಯ ಸದಸ್ಯರ ನಡುವೆ ಏನೇ ಭಿನ್ನಾಭಿಪ್ರಾಯಗಳು, ಜಗಳಗಳು ಆಗಿದ್ದರೂ ಸಹ ಆರ್ಯವರ್ಧನ್ ಗುರೂಜಿ ಬಗ್ಗೆ ಮನೆಯ ಬಹುತೇಕರಿಗೆ ಒಳ್ಳೆಯ ಅಭಿಪ್ರಾಯವೇ ಇದೆ. ಅವರ ಬಗ್ಗೆ ದೂರುವವರ ಸಂಖ್ಯೆ ಮನೆಯಲ್ಲಿ ಕಡಿಮೆ.
ಆದರೆ ಆರ್ಯವರ್ಧನ್ ಗುರೂಜಿ ಎಂದರೆ ಮನೆಯ ಸದಸ್ಯರಿಗಷ್ಟೆ ಅಲ್ಲ, ಶೋ ನೋಡುತ್ತಿರುವ ವೂಟ್ ವೀಕ್ಷಕರಿಗೂ ಅಷ್ಟೇ ಪ್ರೀತಿ ಎಂಬುದು ಇದೀಗ ಸಾಬೀತಾಗಿದೆ.
ಸೋಮಣ್ಣ ಮಾಚಿಮಾಡ ಹಾಗೂ ನಂದು ನಾಯಕತ್ವದಲ್ಲಿ ಮನೆಯ ಸದಸ್ಯರನ್ನು ಆಯಾ ತಂಡದ ಸದಸ್ಯರನ್ನಾಗಿ ಆರಿಸಿಕೊಳ್ಳಲಾಯಿತು. ಆಗ ಎರಡೂ ತಂಡವರು ಆರ್ಯವರ್ಧನ್ ಅನ್ನು ಆರಿಸಿಕೊಂಡಿರಲಿಲ್ಲ. ಕೆಲವು ಟಾಸ್ಕ್‌ಗಳಲ್ಲಿ ಗುರೂಜಿ ಭಾಗವಹಿಸದೆ ಒಬ್ಬರೇ ಇರಬೇಕಾಯ್ತು.
ಆಗ ವೂಟ್ ಒಟಿಟಿ ಮೂಲಕ ಆರ್ಯವರ್ಧನ್ ಅವರನ್ನು ಆಟಕ್ಕೆ ಸೇರಿಸಿಕೊಳ್ಳಬೇಕೆ ಬೇಡವೆ ಎಂಬ ಪ್ರಶ್ನೆ ಬಂದಾಗ ಜನರು ಅವರನ್ನು ಆಟಕ್ಕೆ ಸೇರಿಸಿಕೊಳ್ಳಬೇಕೆಂದು. ಯಾವ ತಂಡಕ್ಕೆ ಸೇರಿಸಬೇಕು ಎಂದಾಗ ಸೋಮಣ್ಣ ಮಾಚಿಮಾಡ ತಂಡಕ್ಕೆ ಸೇರಿಸಬೇಕು ಎಂದು ಮತ ಹಾಕಿದ್ದಾರೆ.
ಮನೆಯ ಸದಸ್ಯರು ಕೈಬಿಟ್ಟಿದ್ದ ಆರ್ಯವರ್ಧನ್ ಗುರೂಜಿಯನ್ನು ಕರುನಾಡ ಜನರೇ ಆರಿಸಿ ತಂಡ ಸೇರಿಸಿದ್ದಾರೆ. ಇದರಿಂದ ಆರ್ಯವರ್ಧನ್ ಗುರೂಜಿ ಬಹಳ ಖುಷಿಯಾದರಲ್ಲದೆ, ಕ್ಯಾಮೆರಾ ಮುಂದೆ ಹೋಗಿ ನಿಂತು ಭಾವುಕರಾಗಿಬಿಟ್ಟರು.
''ನನಗೆ ಸಹನೆ ಹೆಚ್ಚು ಕೋಪವೂ ಒಮ್ಮೊಮ್ಮೆ ಹೆಚ್ಚು. ಟಾಸ್ಕ್‌ಗಳಲ್ಲಿ ಅಷ್ಟು ಚೆನ್ನಾಗಿ ಆಡುತ್ತೀನಿ ಎಂಬ ನಂಬಿಕೆ ಇರಲಿಲ್ಲ. ಆದರೆ ನಿಮಗಾಗಿ ನಾನು ಚೆನ್ನಾಗಿ ಆಡುತ್ತೇನೆ. ನನ್ನನ್ನು ನೀವು ಆರಿಸಿದ್ದೀರಿ'' ಎಂದು ಹೇಳಿ ಕೆಲ ನಿಮಿಷ ಭಾವುಕರಾದರು. ಅವರ ಕಣ್ಣಿನಿಂದ ಕಣ್ಣೀರು ಜಿನುಗಿತು, ಅವರಿಗೆ ಹೆಚ್ಚು ಮಾತನಾಡಲಾಗದೆ ಸುಮ್ಮನಾಗಿಬಿಟ್ಟರು. ಅವರನ್ನು ಜಯಶ್ರೀ ಹಾಗೂ ಉದಯ್ ಸಮಾಧಾನಪಡಿಸಿದರು.

''ನನ್ನನ್ನು ಆರಿಸಿದ ನಿಮಗೆ ನಾನು ಇಲ್ಲಿಂದಲೇ ಕೈಮುಗಿಯುತ್ತೇನೆ'' ಎಂದು ಹೇಳಿ ಕೈಮುಗಿದರು ಗುರೂಜಿ. ಆದರೆ ಗುರೂಜಿಯನ್ನು ತಂಡಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಸೋಮಣ್ಣ ತಂಡವು ರೂಪೇಶ್ ಅನ್ನು ಹೊರಗೆ ಕಳಿಸಬೇಕಾಗಿ ಬಂತು.
ಬಿಗ್‌ಬಾಸ್ ಒಟಿಟಿ ಮನೆಗೆ ಬಂದಿರುವ ಬಹುತೇಕ ಸದಸ್ಯರು ಒಂದಲ್ಲ ಒಂದು ಸಮಯದಲ್ಲಿ ಭಾವುಕರಾಗಿದ್ದಾರೆ. ಆದರೆ ಗುರೂಜಿ ಭಾವುಕರಾಗಿರಲಿಲ್ಲ. ಆರಾಮವಾಗಿ ತಮಾಷೆಯಾಗಿಯೇ ಇದ್ದರು, ಆದರೆ ಇದೇ ಮೊದಲು ಅವರು ಮನೆಯಲ್ಲಿ ಕಣ್ಣೀರು ಹಾಕಿದರು.
ಆರ್ಯವರ್ಧನ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಬೆನ್ನಲ್ಲೆ ಸೋಮಣ್ಣ ತಂಡ ಒಂದು ಟಾಸ್ಕ್ ಅನ್ನು ಗೆದ್ದಿತು.


Click it and Unblock the Notifications











